Advertisement

ಇಂದಿನಿಂದ ಮುನಿಶ್ರೀ ವೀರಸಾಗರ ಮಹಾರಾಜರ ಚಾತುರ್ಮಾಸ್ಯ

06:35 AM Jul 27, 2018 | Team Udayavani |

ಕಾರ್ಕಳ: ಪರಮಪೂಜ್ಯ 108 ಮುನಿಶ್ರೀ ವೀರಸಾಗರ ಮಹಾರಾಜರ ಚಾತುರ್ಮಾಸ್ಯ ಆಚರಣೆ ಇಂದಿನಿಂದ ಕಾರ್ಕಳದಲ್ಲಿ ನಡೆಯಲಿದ್ದು, ಸರ್ವ ಸಿದ್ಧತೆ ನಡೆದಿದೆ.ಭಗವಾನ್‌ ಶ್ರೀ ಬಾಹುಬಲಿಯ ನಾಡು ಕಾರ್ಕಳದಲ್ಲಿ  65 ವರ್ಷಗಳ ಅನಂತರ ಚಾತುರ್ಮಾಸ್ಯ ನಡೆಯುತ್ತಿದ್ದು, ಜುಲೈ 11ರಂದು ವೀರಸಾಗರ ಮಹಾರಾಜರು ಪುರಪ್ರವೇಶ ಮಾಡಿದ್ದರು. 

Advertisement

ವೀರಸಾಗರ ಮಹಾರಾಜರ ಭವ್ಯ ಮಂಗಲ ವೃತಾಚರಣೆಯ ಪ್ರಯುಕ್ತ ಮಂಗಲ ಕಲಶ ಸ್ಥಾಪನೆ ಇಂದು ಬೆಳಗ್ಗೆ  9 ಗಂಟೆಗೆ‌ ನೆರವೇರಲಿದೆ. ಅದಕ್ಕೂ ಮೊದಲು 7 ಗಂಟೆಗೆ ನಗರದ ಹಿರಿಯಂಗಡಿ ಹಿರೇ ಬಸದಿ ಶ್ರೀ ನೇಮಿನಾಥ ಸ್ವಾಮಿ ಬಸದಿಯಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಜಿನಬಿಂಬದೊಂದಿಗೆ ಮೆರವಣಿಗೆ ನಡೆಯಲಿದೆ.

ಮೆರವಣಿಗೆಯು ಆನೆಕೆರೆ, ದಾನಶಾಲೆಯ ಮಾರ್ಗವಾಗಿ ಚರ್ತುಮುರ್ಖ ಬಸದಿಗೆ ಬಂದು ಅಲ್ಲಿ ಪೂಜೆ ನಡೆಯಲಿದೆ. ಅನಂತರ ಮಠಕ್ಕೆ ತೆರಳಿ ಧ್ವಜಾರೋಹಣ ನಡೆದು, ಮಂಗಳ ಕಲಶ ಸ್ಥಾಪನೆ ನಡೆಯಲಿದೆ. ಚಾತುರ್ಮಾಸ್ಯದ ಪ್ರಯುಕ್ತ ಮುನಿಮಹಾರಾಜರು ಜು. 26ರಂದು ಉಪವಾಸದಲ್ಲಿದ್ದು, ಮೌನ ವೃತಾಚರಣೆಯಲ್ಲಿದ್ದರು.

ಇಂದಿನಿಂದ ಪ್ರವಚನ
ಮಠದಲ್ಲಿ ಇಂದಿನಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಜೈನ ಧರ್ಮದ ಶ್ರಾವಕರಿಗೋಸ್ಕರ ನಿತ್ಯದೇವಪೂಜೆ, ಗುರುಪಾಸ್ತಿ, ಸ್ವಾಧ್ಯಾಯ, ಸಂಯಮ, ತಪ ಮತ್ತು ದಾನ ಇವು ಆರು ಪ್ರಕಾರದ ಶತಕ್ರಿಯೆಗಳು ನಡೆಯಲಿದೆ. ನಿತ್ಯ ಅಭಿಷೇಕ, ಪ್ರತೀ ರವಿವಾರ ಭಗವಂತ ಆರಾಧನೆ, ಪ್ರವಚನ, ಚರ್ಚೆ ನಡೆಯಲಿದೆ. ಅಲ್ಲದೇ ಮುಕುಟ ಸಪ್ತಮಿ, ರಕ್ಷಾಬಂಧನ, ದಶಲಕ್ಷಣ ಪರ್ವಾರಂಭ ವಿಜಯದಶಮಿ ಹೀಗೆ ವಿವಿಧ ಆಚರಣೆಗಳು ಮುನಿಮಹಾರಾಜರ ಮಾರ್ಗದರ್ಶನದಲ್ಲಿ ನಡೆಯಲಿವೆ.

ಇಂದಿನ ಕಾರ್ಯಕ್ರಮಗಳು
ಇಂದು ಅಪರಾಹ್ನ 2.30ರಿಂದ ದಾನಶಾಲೆ ಭಗವಾನ್‌ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಧರ್ಮಸಭೆಯಲ್ಲಿ ಕಾರ್ಕಳ ಜೈನಮಠದ ಶ್ರೀ ರಾಜಗುರು ಧ್ಯಾನಯೋಗಿ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ  ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಗೌರವ ಉಪಸ್ಥಿತಿ ಇರಲಿದ್ದು, ಮುಖ್ಯ ಅತಿಥಿಗಳಾಗಿ ಮಾಚಿ ಸಚಿವ ಕೆ. ಅಭಯಚಂದ್ರ ಜೈನ್‌, ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಉಪಸ್ಥಿತರಿರಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next