Advertisement

ಕಸಾಪದಿಂದ ಡಾ|ಹಳಕಟ್ಟಿ ಜಯಂತಿ ಆಚರಿಸಲಿ

05:33 PM May 19, 2022 | Team Udayavani |

ಬೀದರ: ಡಾ| ಫ.ಗು ಹಳಕಟ್ಟಿಯವರು ಸರಳ ಜೀವನ ಉದಾತ ಚಿಂತನೆ ಮತ್ತು ಅದ್ಭುತ ಕಾರ್ಯಗಳ ತ್ರಿವೇಣಿ ಸಂಗಮವಾಗಿದ್ದರು. ಭೂಗತವಾಗಿದ್ದ ವಚನ ಸಾಹಿತ್ಯವನ್ನು ಅಗೆದು-ತೆಗೆದು ಕನ್ನಡ ಸಾಹಿತ್ಯ ಲೋಕಕ್ಕೆ ಅಷ್ಟೇ ಅಲ್ಲ ವಿಶ್ವ ಅಧ್ಯಾತ್ಮ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ ಮಹಾಪುರುಷ ಡಾ| ಹಳಕಟ್ಟಿಯವರ ಜಯಂತ್ಯುತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್‌ನಿಂದ ಪ್ರತಿ ವರ್ಷವೂ ಆಚರಿಸುವ ಮೂಲಕ ಗೌರವ ಸಲ್ಲಿಸಬೇಕು ಎಂದು ಕೈಗಾರಿಕಾ
ಇಲಾಖೆ ಉಪನಿರ್ದೇಶಕ ರಮೇಶ ಮಠಪತಿ ಹೇಳಿದರು.

Advertisement

ಬಸವ ಜಯಂತಿ ನಿಮಿತ್ತ ಬಸವಕಲ್ಯಾಣ ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ಜರುಗುತ್ತಿರುವ ಬಸವೋತ್ಸವ ಕಾರ್ಯಕ್ರಮದಲ್ಲಿ ಹಳಕಟ್ಟಿಯವರ ಜೀವನ ಸಂದೇಶ ಕುರಿತು ಮಾತನಾಡಿದ ಅವರು, ಹಳಕಟ್ಟಿಯವರು ಮನಸ್ಸು ಮಾಡಿದರೆ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಬಹುದಿತ್ತು. ಆದರೆ, ವಚನ ಸಾಹಿತ್ಯ ಪ್ರಕಟಣೆಗಾಗಿ ತಮ್ಮ ಮನೆಯನ್ನೆ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದರು.

ಬಡತನ ಅಪ್ಪಿಕೊಂಡು ನೋವುಗಳನ್ನು ನುಂಗಿಕೊಂಡು ಕನ್ನಡ ಮತ್ತು ವಚನ ಸಾಹಿತ್ಯಕ್ಕಾಗಿ ಹಗಲಿರುಳು ದುಡಿದರು. ಬಸವನ ಹುಳುವಾಗಿ ಬೆಳ್ಳಿದಾರಿ ಕೊರೆದು ಬೆಳಕು ನೀಡಿದರು. ವಚನ ಶಾಸ್ತ್ರ ಸಾರ ಬೃಹತ್‌ ಗ್ರಂಥಗಳು ಸಾಹಿತ್ಯ ಕ್ಷೇತ್ರದ ಮೂರು ಅಮೂಲ್ಯ ರತ್ನಗಳಾಗಿವೆ ಎಂದರು.

ಅಂದು ಮರಾಠಿ ಭಾಷಿಕರ ಮುಂಬೈ ಪ್ರಾಂತ್ಯದಲ್ಲಿದ್ದ ಬಿಜಾಪುರದಲ್ಲಿ ಹತ್ತು ಕನ್ನಡ ಶಾಲೆಗಳನ್ನು ಆರಂಭಿಸಿದರು. ಬಿ.ಎಲ್‌.ಡಿ.ಇ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಗೈದರು. ಅವರು ಸಹಕಾರ ಕ್ಷೇತ್ರ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಪೂರ್ವ ಕಾರ್ಯಗೈದು ಗೋಳಗುಮ್ಮಟ್ಟಕ್ಕಿಂತಲೂ ಎತ್ತರವಾಗಿ ಬೆಳೆದ ವಚನ ಗುಮ್ಮಟವೆಂದು ಹೆಸರಾದರೆಂದು ಮಾರ್ಮಿಕವಾಗಿ ನುಡಿದರು.

ಬೀದರನ ಅಕ್ಕ ಅನ್ನಪೂರ್ಣತಾಯಿ ಅವರು ಸಮ್ಮುಖ ಮತ್ತು ಹುಲಸೂರಿನ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಭುದೇವರು ಮತ್ತು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿದರು. ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Advertisement

ಚಂದ್ರಕಾಂತ ಕಣಜೆ ಅಧ್ಯಕ್ಷತೆ ವಹಿಸಿದ್ದರು. ವಿಠಲ ರೆಡ್ಡಿ, ಪೊಲೀಸ್‌ ಪಾಟೀಲ ಕರಕನಳ್ಳಿ, ಗಂಗಾಧರ ಪಾಟೀಲ ಕರಕನಳ್ಳಿ, ಚನ್ನಬಸವ ಹಂಗರಗಿ, ಸಚಿದಾನಂದ ಮಠಪತಿ ಉಪಸ್ಥಿತರಿದ್ದರು. ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ತಾಲೂಕು ಅಧ್ಯಕ್ಷರಾದ ಎಂ.ಎಸ್‌ ಮನೋಹರ, ಸಿದ್ದಲಿಂಗ ಚಿಂಚೋಳಿ, ಶಾಂತಲಿಂಗ ಮಠಪತಿ, ನಾಗರಾಜ ಹಾವಣ್ಣ, ರಮೇಶ ಸಲಗರ ಅವರನ್ನು ಸನ್ಮಾನಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next