“ಜ್ಯೋತಿರ್ಗಮಯ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಹೆಸರಿಗೆ ತಕ್ಕಂತೆ ಇದು ಭಕ್ತಿಪ್ರಧಾನ ಚಿತ್ರ. ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಕಾನ್ಸೆಪ್ಟ್ನಡಿ ಈ ಸಿನಿಮಾ ತಯಾರಾಗಿದೆ. ನಿರ್ದೇಶಕರು ಇಲ್ಲಿ ಕೂಡ್ಲಿಗಿಯ ಗಾಣಗಟ್ಟಿ ಮಾಯಮ್ಮ ದೇವಿಯ ಪವಾಡಗಳ ಬಗ್ಗೆ ಹೇಳಿದ್ದಾರಂತೆ. ಡಿ.ವಿ.ಜಿ.ನಾಗರಾಜ್ ಈ ಸಿನಿಮಾದ ನಿರ್ದೇಶಕರು. “ಮಾಯಮ್ಮ ದೇವಿಯ ಪವಾಡದ ಬಗ್ಗೆ ಸಿನಿಮಾ ಮಾಡಿದ್ದೇನೆ. ಅಲ್ಲಿಗೆ ಬಂದು ಅನೇಕರು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಹೊತ್ತುಕೊಳ್ಳುತ್ತಾರೆ.
ಅದರಂತೆ ಅವರ ಆಸೆಗಳು ಈಡೇರಿವೆ. ಈ ಸಿನಿಮಾದಲ್ಲಿ ದೇವಿಯ ಪವಾಡದವನ್ನು ಹೇಳಿದ್ದೇನೆ. ಕಷ್ಟದಲ್ಲಿ ಸಿಲುಕಿರುವ ಯುವಕನನ್ನು ದೇವಿ ಹೇಗೆ ಪಾರು ಮಾಡುತ್ತಾಳೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಚಿತ್ರದ ಚಿತ್ರೀಕರಣ ಕೂಡಾ ಬಳ್ಳಾರಿ, ಕೂಡ್ಲಿಗಿ ಸುತ್ತಮುತ್ತ ನಡೆದಿದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು ನಿರ್ದೇಶಕರು.
ಚಿತ್ರದಲ್ಲಿ ಭೀಮೇಶ್ ಎನ್ನುವವರು ನಾಯಕರಾಗಿ ನಟಿಸಿದ್ದಾರೆ. ತನಗೆ ಬೀಳುವ ಕೆಟ್ಟ ಕನಸಿನ ಬಗ್ಗೆ ಹೇಳಿದಾಗ ದೇವಿಯ ವ್ರತ ಮಾಡುವಂತೆ ಹೇಳುತ್ತಾರಂತೆ. ಈ ಮೂಲಕ ತನ್ನ ಪಾತ್ರ ಸಾಗಿಬರುತ್ತದೆ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು ಭೀಮೇಶ್. ಚಿತ್ರವನ್ನು ಜಿ.ಗೋವಿಂದರಾಜ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಿಂಧು ನಾಯಕಿಯಾಗಿ ನಟಿಸಿದ್ದಾರೆ. ಮೂರು ವರ್ಷಗಳ ಹಿಂದೆ ಇವರು ಒಪ್ಪಿಕೊಂಡ ಮೊದಲ ಸಿನಿಮಾವಂತೆ. ಈ ಸಿನಿಮಾ ನಂತರ ಕೆಲವು ಸಿನಿಮಾ ಮಾಡಿರುವ ಸಿಂಧುಗೆ ಇಲ್ಲಿ ಮೂರು ಶೇಡ್‌ಗಳಿರುವ ಪಾತ್ರ ಸಿಕ್ಕಿದೆಯಂತೆ. ಚಿತ್ರದಲ್ಲಿ ಅವರು ಭಕ್ತೆ, ದೇವಿ ಹಾಗೂ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರಕ್ಕೆ ವಿನುಮನಸು ಸಂಗೀತ ನೀಡಿದ್ದಾರೆ.