Advertisement

ಕ್ರೆಡಿಟ್ ಕಾರ್ಡ್ ನಿಂದ ಬೆಂಕಿಪೊಟ್ಟಣ ದರದವರೆಗೆ..: ಇಂದಿನಿಂದ ಏನೇನು ಬದಲಾವಣೆ?

09:13 AM Dec 01, 2021 | Team Udayavani |

ನವದೆಹಲಿ: ಬ್ಯಾಂಕಿಂಗ್, ಹಣಕಾಸು ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವಾರು ನಿಯಮಗಳು ಇಂದಿನಿಂದ (ಡಿಸೆಂಬರ್ 1) ಬದಲಾಗುತ್ತಿವೆ. ಈ ಹೊಸ ನಿಯಮಗಳು ಸಾಮಾನ್ಯ ಮನುಷ್ಯನ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಕಾರಣದಿಂದ ಇವುಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ.

Advertisement

ಯುಎಎನ್‌-ಆಧಾರ್‌ ಲಿಂಕ್‌: ಯುಎಎನ್‌ (ಯೂನಿವರ್ಸಲ್‌ ಅಕೌಂಟ್‌ ನಂಬರ್‌) ಮತ್ತು ಆಧಾರ್‌ ಸಂಖ್ಯೆ ಲಿಂಕ್‌ ಮಾಡಲು ಇಪಿಎಫ್ಒ ನೀಡಿದ್ದ ಗಡುವು ನ.30ಕ್ಕೆ ಅಂತ್ಯಗೊಂಡಿದೆ. ಲಿಂಕ್‌ ಮಾಡಿರದಿದ್ದರೆ ಇವತ್ತಿನಿಂದ ನಿಮ್ಮ ಖಾತೆಯಲ್ಲಿ ಪಿಎಫ್ ಮೊತ್ತ ಜಮೆ ಆಗುವುದಿಲ್ಲ. ಅಷ್ಟೇ ಅಲ್ಲ, ಅಂಥ ಚಂದಾದಾರರಿಗೆ ತಮ್ಮ ಪಿಎಫ್ ಖಾತೆಯಿಂದ ಹಣ ವಿತ್‌ಡ್ರಾ ಮಾಡಲೂ ಆಗುವುದಿಲ್ಲ.

ಎಲ್‌ಪಿಜಿ ದರ ಪರಿಷ್ಕರಣೆ: ಪ್ರತಿ ತಿಂಗಳಂತೆಯೇ ಈ ತಿಂಗಳು ಕೂಡ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ದರ ಪರಿಷ್ಕರಣೆ ಮಾಡಲಿವೆ. ಇಂದು ಅಡುಗೆ ಅನಿಲ ಸಿಲಿಂಡರ್‌ ದರ ಹೆಚ್ಚಾಗಲೂಬಹುದು, ಕಡಿಮೆಯಾಗಲೂಬಹುದು.

ಕ್ರೆಡಿಟ್‌ ಕಾರ್ಡ್‌ ತುಟ್ಟಿ: ಶಾಪಿಂಗ್‌ ಮಾಡುವಾಗ ಇಎಂಐಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಸುತ್ತಿದ್ದವರಿಗೆ ಇದು ಕಹಿಸುದ್ದಿ. ಈವರೆಗೆ ಇಎಂಐ ವಹಿವಾಟು ನಡೆಸಿದರೆ ನಿಮಗೆ ಬಡ್ಡಿ ಮಾತ್ರ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಬಡ್ಡಿಯ ಜೊತೆಗೆ 99 ರೂ. ಪ್ರೊಸೆಸಿಂಗ್‌ ಶುಲ್ಕವನ್ನೂ ತೆರಬೇಕಾಗುತ್ತದೆ.

ಪಿಂಚಣಿದಾರರೇ ಕೇಳಿ: ಸರ್ಕಾರಿ ಪಿಂಚಣಿದಾರರು ಲೈಫ್ ಸರ್ಟಿಫಿಕೇಟ್‌ ಸಲ್ಲಿಸಲು ನ.30 ಕೊನೇ ದಿನವಾಗಿತ್ತು. ಸಮಯಕ್ಕೆ ಸರಿಯಾಗಿ ಸಲ್ಲಿಸದೇ ಇರುವವರಿಗೆ ಇನ್ನು ಮುಂದೆ ಪಿಂಚಣಿ ಸಿಗುವುದಿಲ್ಲ.

Advertisement

ಬೆಂಕಿಪೊಟ್ಟಣ ದರ ಏರಿಕೆ: ಬರೋಬ್ಬರಿ 14 ವರ್ಷಗಳ ಬಳಿಕ ಬೆಂಕಿಪೊಟ್ಟಣಕ್ಕೆ ನೀವು ಹೆಚ್ಚು ದರ ಪಾವತಿಸಬೇಕು. ಇಂದಿನಿಂದ ಒಂದು ಬೆಂಕಿಪೆಟ್ಟಿಗೆಗೆ 2 ರೂ. ನೀಡಬೇಕು.

ಜಿಯೋ ಶುಲ್ಕ ಹೆಚ್ಚಳ: ಏರ್‌ಟೆಲ್‌, ವೊಡಾಫೋನ್‌ ಬಳಿಕ ಜಿಯೋ ಕೂಡ ಪ್ರೀಪೇಯ್ಡ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಇಂದಿನಿಂದ ಜಿಯೋ ಪ್ಲ್ರಾನ್‌ಗಳು ತುಟ್ಟಿಯಾಗಲಿವೆ.

ಬೆಂಗಳೂರಿನಲ್ಲಿ ಆಟೋ ದರ ದುಬಾರಿ: ಬೆಂಗಳೂರಿನಲ್ಲಿ ಇಂದಿನಿಂದ ಆಟೋ ದರ ಏರಿಕೆಯಾಗಿದೆ. ಮೊದಲ 2 ಕಿ.ಮೀ.ಗೆ ವಿಧಿಸಲಾಗುವ ಕನಿಷ್ಠ ದರವನ್ನು 25 ರೂ.ನಿಂದ 30 ರೂ.ಗೆ ಏರಿಸಲಾಗಿದೆ. ಕನಿಷ್ಠ ದರದ ನಂತರದ ಪ್ರತಿ ಕಿ.ಮೀ.ಗೆ 15 ರೂಪಾಯಿ ದರ ನಿಗದಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next