Advertisement

ಸಾಧನೆಗಳಿಂದ ವ್ಯಕ್ತಿಯ ನೆನಪು ನಿರಂತರ: ಶ್ರೀ

01:23 PM Apr 08, 2022 | Team Udayavani |

ಚಿಕ್ಕೋಡಿ: ನಮ್ಮ ಹಿಂದಿನ ತಲೆಮಾರಿನ ಹಿರಿಯರ ಅನುಭವ ಹಾಗೂ ಇತಿಹಾಸವನ್ನು ಇಂದಿನ ಪೀಳಿಗೆ ತಿಳಿದುಕೊಂಡರೆ ಮಾತ್ರ ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯ ಎಂದು ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮಿಗಳು ಹೇಳಿದರು.

Advertisement

ಅವರು ಗುರುವಾರ ಪಟ್ಟಣದ ಹಾಲಟ್ಟಿಯ ಕವಟಗಿಮಠ ಫಾರ್ಮ್ ಹೌಸ್‌ನಲ್ಲಿ ಆಯೋಜಿಸಿದ್ದ ಹಿರಿಯ ಸಹಕಾರಿ ದಿ| ಮಲ್ಲಯ್ಯಸ್ವಾಮಿ ಕವಟಗಿ ಮಠ ಅವರ 25ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತಿಹಾಸ ತಿಳಿದುಕೊಂಡವರಲ್ಲಿ ದೇಶದಲ್ಲಿ ಧರ್ಮ ಉಳಿಸುವ ಚಿಂತನೆಗಳು ನೆಲೆಸುತ್ತವೆ. ಹೀಗಾಗಿ ಈ ಹಿಂದಿನ ತಲೆಮಾರಿನ ಯೋಚನೆ-ಆಲೋಚನೆಗಳಲ್ಲಿ ಸಮಾಜ ಮುಖೀ ಧೋರಣೆಗಳು ಇಂದಿಗೂ ಅವರ ಜೀವಂತಿಕೆ ಉಳಿಸಿವೆ ಎಂದರು. ಅಲ್ಲದೇ ಸಮಾಜದಲ್ಲಿ ಓರ್ವ ವ್ಯಕ್ತಿಯ ಹೆಸರು ಅಚ್ಚಳಿಯದೇ ಉಳಿಯಬೇಕಾದರೆ ಆತ ಮಾಡಿದ ಕಾರ್ಯಗಳಿಂದ ಮಾತ್ರ ಸಾಧ್ಯವೆಂದರು.

ಮಲ್ಲಯ್ನಾಸ್ವಾಮಿ ಕವಟಗಿಮಠ ಅವರು ಜಾತಿ-ಮತ-ಪಂಥಗಳನ್ನು ಮೀರಿ ನಿಂತು ಕಾರ್ಯಸಾಧನೆ ಮಾಡಿದ್ದಾರೆ. ಸ್ವಾತಂತ್ರ್ಯ ನಂತರ ನಾಡನ್ನಾಳಿದ ಗಾಂಧಿವಾದಿಗಳಲ್ಲಿ ಮಲ್ಲಯ್ಯ ಸ್ವಾಮಿಗಳು ಸಹ ಒಬ್ಬರು. ಅವರ ಹೆಸರಿನಲ್ಲಿ ಸಮಾಜಿ ಮುಖೀ ಕೆಲಸಗಳನ್ನು ಕವಟಗಿಮಠ ಸಹೋದರರು ಮಾಡಬೇಕೆಂದರು. ಗಡಿಭಾಗದಲ್ಲಿ ಸಹಕಾರ ಹಾಗೂ ಶಿಕ್ಷಣ ರಂಗ ಬಲವರ್ಧನೆ ಮೂಲಕ ಗ್ರಾಮೀಣ ಪ್ರದೇಶದ ರೈತರ ಪ್ರಗತಿಗೆ ಅತ್ಯಮೂಲ್ಯ ಕೊಡುಗೆ ನೀಡಿದ ಕೀರ್ತಿ ಎಂಕೆ ಅವರಿಗೆ ಸೇರುತ್ತದೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಓರ್ವ ವ್ಯಕ್ತಿ ತನ್ನ ಜೀವನದಲ್ಲಿ ಹುಟ್ಟು-ಸಾವಿನ ನಡುವೆ ಮಾಡುವ ಸಾಧನೆಗಳು ಆತನ ಜೀವಂತಿಕೆಯನ್ನು ಚಿರಕಾಲ ನೆನಪಿಡುವಂತೆ ಮಾಡುವುದೇ ಸಾಧನೆ. ನನ್ನ ತಂದೆ ಎಂ.ಕೆ. ಕವಟಗಿಮಠ ಅವರ ಸಾಧನೆಗಳು ಮುಂದಿನ ಪೀಳಿಗೆಗೂ ತಲುಪಬೇಕೆನ್ನುವ ಸದಾಶಯ ನಮ್ಮದಾಗಿದೆ ಎಂದರು.

ಬೆಳಗ್ಗೆ ಎಂ.ಕೆ. ಕವಟಗಿಮಠ ಸಮಾಧಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಸಾದ ವ್ಯವಸ್ಥೆಗೆ ನೀಡಸೋಸಿ ಪೂಜ್ಯರು ಪೂಜೆ ನೆರವೇರಿಸಿ ಚಾಲನೆ ನೀಡಿದರು.

Advertisement

ನಿಪ್ಪಾಣಿ ಹಾಲಶುಗರ್‌ ಚೇರಮನ್‌ ಚಂದ್ರಕಾಂತ ಕೋಟಿವಾಲೆ, ಸಹಕಾರಿ ಧುರೀಣ ಡಿ.ಟಿ.ಪಾಟೀಲ, ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್‌ ಭರತ ಬನವನೆ, ಎಸ್‌.ಎಸ್‌. ಕವಲಾಪೂರೆ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಪಾಟೀಲ, ರಾಮಾ ಮಾನೆ, ಸತೀಶ ಅಪ್ಪಾಜಿಗೋಳ, ಚಿಕ್ಕೋಡಿ ಪುರಸಭೆ, ಸಾಯಿ ಸೇವಾ ಪರಿವಾರ, ಸಿಎಲ್‌ಇ ಹಾಗೂ ಸಾಹಿ ಸೌಹಾರ್ದ ಸಹಕಾರಿಯ ಎಲ್ಲ ಆಡಳಿತ ಮಂಡಳಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next