ಒಂದು ಕಾಡಿನಲ್ಲಿ ಸಿಂಹವೊಂದು ನೀರು ಕುಡಿಯಲು ಕೆರೆಗೆ ಇಳಿಯಿತು. ನೀರು ಕುಡಿದಾದ ಮೇಲೆ ಕೆರೆಯಿಂದ ಮೇಲೆ ಹೋಗಲು ಹೆಜ್ಜೆ ಇಡುವಾಗ ತನ್ನ ಕಾಲು ಕೆಸರಿನಲ್ಲಿ ಹೂತು ಹೋಗಿರುವುದು ಅರಿವಿಗೆ ಬಂತು. ಸಿಂಹಕ್ಕೆ ಸಹಾಯ ಮಾಡುವವರು ಯಾರೂ ಆ ದಾರಿಯಲ್ಲಿ ಬಾರದೇ ಇದ್ದುದರಿಂದ ಕೆಲವು ದಿನ ಆಹಾರವಿಲ್ಲದೇ ಸಿಂಹ ಅಲ್ಲಿಯೇ ಉಪವಾಸ ಬಿದ್ದಿತು.
ಒಂದು ದಿನ ಆ ದಾರಿಯಾಗಿ ಬಂದ ಕತ್ತೆಯು ಸಿಂಹದ ಅವಸ್ಥೆಯನ್ನು ಕಂಡು ಮರುಗಿತು. ಕೆಸರನ್ನು ಅತ್ತಿತ್ತ ಸರಿಸಿ ಸಿಂಹವನ್ನು ಮೇಲಕ್ಕೆ ಎಳೆದು ಕೆರೆಯಿಂದ ಹೊರಬರಲು ಸಹಾಯ ಮಾಡಿತು.
ಕತ್ತೆಯ ಉಪಕಾರದಿಂದ ಸಿಂಹಕ್ಕೆ ಬಹಳ ಖುಷಿಯಾಯಿತು. “”ನನ್ನ ಜೀವ ಉಳಿಸಿದ ನಿನಗೆ ಬಹಳ ಧನ್ಯವಾದ ಮಹರಾಯ” ಎಂದು ಸಿಂಹ ಹೇಳಿತು. ಅಲ್ಲದೆ, ತನ್ನ ಗುಹೆಯ ಬಳಿಯೇ ವಾಸಿಸುವಂತೆ ಕತ್ತೆಗೆ ಆಹ್ವಾನ ನೀಡಿತು. “”ನೀನು ನನ್ನ ಗುಹೆಯ ಬಳಿಯೇ ವಾಸಿಸು. ನನಗೆ ಸಿಕ್ಕಿದ ಆಹಾರದಲ್ಲಿ ನಿನಗೂ ಕೊಂಚ ಪಾಲು ಕೊಡುತ್ತೇನೆ” ಎಂದು ಸಿಂಹ ಹೇಳಿತು. ಸಿಂಹದ ಆಹ್ವಾನವನ್ನು ಒಪ್ಪಿಕೊಂಡ ಕತ್ತೆ, ಸಿಂಹದ ಗುಹೆಯ ಬಳಿಯೇ ವಾಸಮಾಡಲು ಶುರುಮಾಡಿತು. ಆಗಾಗ ಸಿಂಹವೂ ತನಗೆ ಸಿಕ್ಕ ಬೇಟೆಯಲ್ಲಿ ಕತ್ತೆಗೂ ಪಾಲು ಕೊಡುತ್ತಿತ್ತು.
ಸಿಂಹ ಮತ್ತು ಕತ್ತೆಯ ಸಂಸಾರ ದೊಡ್ಡದಾಯಿತು. ಸಿಂಹಕ್ಕೆ ಮದುವೆಯಾಗಿ ಮರಿಗಳು ಹುಟ್ಟಿದವು. ಕತ್ತೆಗೂ ಮದುವೆಯಾಗಿ, ಮರಿಗಳು ಹುಟ್ಟಿದವು. ಆದರೆ, ಸಿಂಹದ ಹೆಂಡತಿಗೆ ಈ ಕತ್ತೆ ಜೊತೆಗೆ ತನ್ನ ಗಂಡ ಸ್ನೇಹದಿಂದ ಇರುವುದನ್ನು ಕಂಡು ಬೇಸತ್ತು ಹೋಯಿತು. ತನ್ನ ಗಂಡನನ್ನು ಕತ್ತೆಯು ಸಂಕಷ್ಟದಿಂದ ಪಾರುಮಾಡಿರುವ ವಿಷಯ ಆಕೆಗೆ ಗೊತ್ತಿರಲಿಲ್ಲ. ಆಕೆ ತನ್ನ ಅಸಮಾಧಾನವನ್ನು ತನ್ನ ಮಕ್ಕಳ ಜೊತೆ ತೋಡಿಕೊಂಡಳು. ಮಕ್ಕಳು ತಮ್ಮ ಸ್ನೇಹಿತರಾದ ಕತ್ತೆ ಮರಿಗಳ ಬಗ್ಗೆ ಅಮ್ಮನ ಅಸಮಾಧಾನವನ್ನು ಹೇಳಿಕೊಂಡವು. ಆ ಮರಿಗಳು ಹೋಗಿ ಅಮ್ಮ ಕತ್ತೆಯ ಬಳಿ ವಿಷಯ ತಿಳಿಸಿದವು. ಅಮ್ಮ ಕತ್ತೆಯು ರಾತ್ರಿ ಮಾತನಾಡುತ್ತ, ಗಂಡನ ಬಳಿ ಈ ವಿಷಯ ತಿಳಿಸಿತು. ಇದನ್ನು ಕೇಳಿದ ಕತ್ತೆರಾಯನಿಗೆ ಬೇಸರವಾಗಿ ಸೀದಾ ಸ್ನೇಹಿತ ಸಿಂಹದ ಬಳಿಗೆ ಹೋಯಿತು. “”ಇನ್ನು ಮುಂದೆ ನಾವು ಇಲ್ಲಿ ವಾಸಿಸುವುದು ನಿಮಗೆ ಇಷ್ಟವಿಲ್ಲದೇ ಇದ್ದರೆ ಬೇರೆ ಕಡೆಗೆ ಹೋಗುತ್ತೇವೆ. ಈ ವಿಷಯವನ್ನು ಮುಂಚೆಯೇ ನಮಗೆ ಹೇಳಬೇಕಿತ್ತು” ಎಂದು ಹೇಳಿತು. ಕತ್ತೆಯ ಮಾತು ಕೇಳಿ ಸಿಂಹಕ್ಕೆ ಅಚ್ಚರಿಯಾಯಿತು. ಅಲ್ಲದೆ ತನಗೇನೂ ಸಮಸ್ಯೆ ಇಲ್ಲವೆಂದೂ, ನೀವೆಲ್ಲಾ ಇಲ್ಲಿಯೇ ವಾಸವಾಗಿರಿ ಎಂದೂ ಹೇಳಿತು.
ಆದರೆ, ಕತ್ತೆಯು ಇದನ್ನು ಒಪ್ಪಲಿಲ್ಲ. “”ಸ್ನೇಹಿತನೇ, ನನ್ನ ಮತ್ತು ನಿನ್ನ ನಡುವೆ ಆಪ್ತತೆ ಇರಬಹುದು. ಆದರೆ, ನಮ್ಮ ಕುಟುಂಬಗಳ ನಡುವೆ ಆಪ್ತತೆ ಇರಲೇಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಆದ್ದರಿಂದ ನಾನು ಪ್ರತ್ಯೇಕವಾಗಿಯೇ ವಾಸಿಸುತ್ತೇನೆ. ನಾವಿಬ್ಬರೂ ಆಗಾಗ ಭೇಟಿಯಾಗಿ ಹರಟೆ ಹೊಡೆಯೋಣ, ಬೇಟೆಗೆ ಹೋಗೋಣ. ಆದರೆ, ಕುಟುಂಬವನ್ನು ಪ್ರತ್ಯೇಕವಾಗಿಯೇ ನೋಡಿಕೊಳ್ಳೋಣ” ಎಂದಿತು.
ಸಿಂಹಕ್ಕೂ ಕತ್ತೆಯ ಮಾತು ಸರಿ ಕಂಡಿತು.
ನೀತಿ: ನಮ್ಮ ವಿಚಾರವನ್ನೆಲ್ಲ ನಮ್ಮ ಕುಟುಂಬವೂ ಒಪ್ಪಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ.