Advertisement

ಗುರುವಿನಂಥ ಗೆಳೆಯರು 

12:30 AM Jan 18, 2019 | |

ಮನುಷ್ಯರಾದ ನಾವೆಲ್ಲ ಸಂಘ ಜೀವಿಗಳು. ಜೀವನದ ಪ್ರತೀ ಹಂತದಲ್ಲೂ ಇನ್ನೊಬ್ಬರ ಜೊತೆಯಾಗಿಯೇ ಬಾಳುತ್ತೇವೆ. ತಂದೆ-ತಾಯಿ, ಸಹೋದರ- ಸಹೋದರಿಯರು, ಗೆಳೆಯರು, ಶಿಕ್ಷಕರು, ಮಡದಿ-ಮಕ್ಕಳು ಹೀಗೆ ಜೀವನದುದ್ದಕ್ಕೂ ಯಾರಾದರೂ ನಮ್ಮ ಜೊತೆ ಇದ್ದೇ ಇರುತ್ತಾರೆ.

Advertisement

ಇಂತಹ ಸಂಘಜೀವನದಲ್ಲಿ ಗೆಳೆಯರು ನಮ್ಮ ಬದುಕಿನಲ್ಲಿ ಪ್ರಭಾವ ಬೀರುವಲ್ಲಿ ಅತ್ಯಂತ ಪ್ರಮುಖರು. ಗೆಳೆತನ ಅನ್ನುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಹುಟ್ಟಿನಿಂದ ಸಾವಿನವರೆಗೂ ನಾವು ಯಾರ ಜೊತೆಯಾದರೂ ಗೆಳೆತನ ಮಾಡಿಯೇ ಮಾಡುತ್ತೇವೆ. ಬಾಲ್ಯದ ಗೆಳೆಯರು, ಶಾಲಾ-ಕಾಲೇಜು ಸ್ನೇಹಿತರು, ಸಹೋದ್ಯೋಗಿ ಮಿತ್ರರು- ಹೀಗೆ ವಿವಿಧ ಸ್ಥಳಗಳಲ್ಲಿ, ಸಂದರ್ಭಗಳಲ್ಲಿ ವಿವಿಧ ರೀತಿಯ ಗೆಳೆಯರು ನಮಗೆ ಸಿಗುತ್ತಾರೆ.

ಎಷ್ಟೇ ಗೆಳೆಯರಿದ್ದರೂ ನಮ್ಮ ಜೀವನದಲ್ಲಿ ಅತ್ಯಂತ ಪ್ರಭಾವ ಬೀರುವವರು ನಮ್ಮ ಭಾವನೆಗಳಿಗೆ ಸ್ಪಂದಿಸುವ ಮಿತ್ರರು ಮಾತ್ರ. ನನಗೂ ಕೆಲವು ಆತ್ಮೀಯ ಗೆಳೆಯರಿದ್ದಾರೆ. ಅವರು ಕೇವಲ ಗೆಳೆಯರು ಮಾತ್ರವಲ್ಲ. ಕಷ್ಟಕ್ಕೆ ಸ್ಪಂದಿಸುವವರು, ಪ್ರತಿಭೆಗೆ ಪ್ರೋತ್ಸಾಹಿಸುವವರು, ತಪ್ಪು ಹೆಜ್ಜೆಯಿಟ್ಟಾಗ ತಿದ್ದಿ ತಿಳಿ ಹೇಳುವವರು. ಒಟ್ಟಿನಲ್ಲಿ ಗೆಳೆಯರೆಂದರೆ ಹೀಗಿರಬೇಕು ಅನ್ನುವುದಕ್ಕೆ ನನ್ನ ಗೆಳೆಯರೇ ಸಾಕ್ಷಿ. 

ಪ್ರತೀ ದಿನ ಯಾವುದಾದರೊಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾವು ಪರಸ್ಪರ ಚರ್ಚಿಸುತ್ತೇವೆ. ಇದರಿಂದ ನಮ್ಮ ಜ್ಞಾನದ ಮಟ್ಟವು ಹೆಚ್ಚುತ್ತದೆ. ಇಷ್ಟೇ ಅಲ್ಲದೇ ನಾನು ಯಾವುದೇ ಹೊಸ ಆಲೋಚನೆಗಳನ್ನು ಅವರಲ್ಲಿ ಹಂಚಿಕೊಂಡಾಗ ಬೆನ್ನೆಲುಬಾಗಿ ನಿಂತು ನನ್ನ ಹುರಿದುಂಬಿಸುತ್ತಾರೆ ನನ್ನ ಗೆಳೆಯರು. ವಿಶೇಷವಾಗಿ ಹೇಳಬೇಕೆಂದರೆ ಇದುವರೆಗೂ ಯಾವುದೇ ದುಶ್ಚಟಗಳ ಗಂಧ-ಗಾಳಿಯನ್ನು ತಿಳಿಯದವರು ನನ್ನ ಗೆಳೆಯರು. ಇಂತಹ ಜನರೊಂದಿಗೆ ಗೆಳೆತನ ಮಾಡಿರುವುದು ನನ್ನ ಭಾಗ್ಯವೆಂದು ಭಾವಿಸುತ್ತೇನೆ. 

ಗೆಳೆಯರೆಂದರೆ ಸಾಮಾನ್ಯವಾಗಿ ಈ ತರ ಇರುತ್ತಾರೆ ಎಂದು ನೀವು ಹೇಳಬಹುದು. ಆದರೂ ನಾನು ನಿಮ್ಮಲ್ಲಿ ಈ ವಿಷಯವನ್ನು ಏಕೆ ಹಂಚಿಕೊಂಡೆ ಎಂದರೆ ನೀವು ಗೆಳೆತನ ಮಾಡುವ ಸ್ನೇಹಿತರು ನನ್ನ ಮಿತ್ರರ  ಹಾಗೆ ಇರಲಿ. ಯಾಕೆಂದರೆ, ಹಿರಿಯರು ಹೇಳಿದಂತೆ ಸಜ್ಜನರ ಸಂಘ ಹೆಜ್ಜೆàನು ಸವಿದಂತೆ. ಕೆಲವರೊಂದಿಗಿನ ಗೆಳೆತನ ನಮ್ಮನ್ನು ಒಳಿತಿನೆಡೆಗೂ ಮುನ್ನುಗ್ಗಿಸಬಹದು. ತಪ್ಪು ದಾರಿಗೂ ಒಯ್ಯಬಹುದು. ನಮ್ಮ ಮಕ್ಕಳು ಯಾರೊಂದಿಗೆ ಸೇರಿ ಎಲ್ಲಿ ದಾರಿ ತಪ್ಪುತ್ತಾರೋ ಅನ್ನುವ ಭಯ ಇತ್ತೀಚಿನ ಪೋಷಕರದ್ದು. ಆದರೆ, ನನ್ನ ಪೋಷಕರಿಗೆ ಆ ಚಿಂತೆಯಿಲ್ಲ. ಕಾರಣ ನಾನು ಗೆಳೆತನ ಮಾಡಿದವರು ನನ್ನ ತಪ್ಪು ದಾರಿಗೆ ಒಯ್ಯುವವರಲ್ಲ. ನನ್ನವರು ಗುರುವಿನಂತ ಗೆಳೆಯರು.

Advertisement

ಹಾರಿಸ್‌ ಸೋಕಿಲ
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಎಸ್‌.ಡಿ.ಎಂ. ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next