ಮೆಲ್ಬರ್ನ್: ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್ ಶುಕ್ರವಾರ ತಮ್ಮ 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಥಾಯ್ಲೆಂಡ್ ಗೆ ತೆರಳಿದ್ದ ಶೇನ್ ವಾರ್ನ್ ಅವರ ಜೀವ ಉಳಿಸಲು ಮೂವರು ಸ್ನೇಹಿತರು ಸುಮಾರು 20 ನಿಮಿಷಗಳ ಕಾಲ ಹೋರಾಡಿದರು ಎಂದು ಥಾಯ್ ಪೊಲೀಸರು ತಿಳಿಸಿದ್ದಾರೆ.
ವಾರ್ನ್ ಮತ್ತು ಇತರ ಮೂವರು ಸ್ನೇಹಿತರು ಕೊಹ್ ಸಮುಯಿಯಲ್ಲಿರುವ ಖಾಸಗಿ ವಿಲ್ಲಾದಲ್ಲಿ ತಂಗಿದ್ದರು. ಈ ವೇಳೆ ವಾರ್ನ್ ಭೋಜನಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ನೇಹಿತರಲ್ಲಿ ಒಬ್ಬರು ಈ ಬಗ್ಗೆ ವಿಚಾರಿಸಲು ಹೋದರು ಎಂದು ಥಾಯ್ ಪೊಲೀಸರು ತಿಳಿಸಿದ್ದಾರೆ.
“ಪ್ರಜ್ಞಾಹೀನರಾಗಿ ಬಿದ್ದಿದ್ದ ವಾರ್ನ್ ಕಂಡು ಸ್ನೇಹಿತನು ಸಿಪಿಆರ್ ಮಾಡಿದರು ನಂತರ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು” ಎಂದು ಬೋ ಪುಟ್ ಪೋಲೀಸ್ ಅಧಿಕಾರಿ ಚಾಚಾವಿನ್ ನಕ್ಮುಸಿಕ್ ರಾಯಿಟರ್ಸ್‌ಗೆ ತಿಳಿಸಿದರು.
ಇದನ್ನೂ ಓದಿ:ಶೇನ್ ವಾರ್ನ್ ನಿಧನದ ವಿಚಾರ ಗೊತ್ತಾಗಿದ್ದು ವೀರೇಂದ್ರ ಸೆಹ್ವಾಗ್ ರಿಂದ!
“ನಂತರ ತುರ್ತು ಪ್ರತಿಕ್ರಿಯೆ ಘಟಕವು ಆಗಮಿಸಿ 10-20 ನಿಮಿಷಗಳ ಕಾಲ ಮತ್ತೊಂದು ಸಿಪಿಆರ್ ಮಾಡಿದ್ದಾರೆ. ನಂತರ ಥಾಯ್ ಇಂಟರ್ನ್ಯಾಶನಲ್ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಬಂದು ವಾರ್ನ್ ರನ್ನು ಅಲ್ಲಿಗೆ ಕರೆದೊಯ್ದರು. ಅವರು ಐದು ನಿಮಿಷಗಳ ಕಾಲ ಸಿಪಿಆರ್ ಮಾಡಿದರು ಆದರೆ ಅವರನ್ನು ಉಳಿಸಲಾಗಲಿಲ್ಲ” ಎಂದು ವರದಿ ತಿಳಿಸಿದೆ.
ಸಾವಿನ ಖಚಿತ ಕಾರಣ ಇದುವರೆಗೂ ತಿಳಿದಿಲ್ಲ, ಆದರೆ ಅನುಮಾನಾಸ್ಪದ ಎಂದು ಪರಿಗಣಿಸಲಿಲ್ಲ ಎಂದು ಪೋಲೀಸ್ ಅಧಿಕಾರಿ ಹೇಳಿದ್ದಾರೆ.