ನವದೆಹಲಿ:ಇದೊಂದು ಸಂವಿಧಾನ ವಿರೋಧಿ ಕ್ರಮ ಎಂಬ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ಹೊಸ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಿದೆ.
ಮುಸ್ಲಿಮ್ ಮಹಿಳೆಯರ ಹಕ್ಕನ್ನು(ಮುಸ್ಲಿಮ್ ಮಹಿಳಾ ಮದುವೆ ಹಕ್ಕಿನ ರಕ್ಷಣೆ 2019) ರಕ್ಷಿಸುವಲ್ಲಿ ಈ ಮಸೂದೆ ನ್ಯಾಯ ಒದಗಿಸಲಿದೆ ಎಂದು ಸರ್ಕಾರ ಭರವಸೆ ನೀಡಿದೆ. ಆದರೆ 2ನೇ ಬಾರಿಗೆ ಅಧಿಕಾರಕ್ಕೇರಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೊದಲ ಸಂಸತ್ ಅಧಿವೇಶನದಲ್ಲಿ ಹೊಸ ಮಸೂದೆಯನ್ನು ಮಂಡಿಸಿದೆ.
ಇದೊಂದು ಸಂವಿಧಾನ ಹಕ್ಕಿನ ಉಲ್ಲಂಘನೆಯ ಕ್ರಮ ಎಂದು ವಿರೋಧ ಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದ್ದವು. ಕಾನೂನು ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದು, ದೇಶದಲ್ಲಿ ಈವರೆಗೆ ಸುಮಾರು 543 ತ್ರಿವಳಿ ತಲಾಖ್ ಪ್ರಕರಣಗಳು ದಾಖಲಾದ ಬಗ್ಗೆ ವರದಿಯಾಗಿದೆ ಎಂದು ತಿಳಿಸಿದರು.
ಅದರಲ್ಲಿಯೂ 200 ಪ್ರಕರಣಗಳು ತ್ರಿವಳಿ ತಲಾಖ್ ಅನ್ನು ಸುಪ್ರೀಂಕೋರ್ಟ್ ನಿಷೇಧಿಸಿದ ಮೇಲೆ ದಾಖಲಾಗಿದ್ದವು ಎಂದು ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದರು.
“ಇದು ಮಹಿಳೆಯರ ವ್ಯಕ್ತಿತ್ವದ ಪ್ರಶ್ನೆಯಾಗಿದೆ. ಮತ್ತು ನಾವು ಮಹಿಳೆಯರ ರಕ್ಷಣೆಗೆ ಬದ್ದರಾಗಿದ್ದೇವೆ ಎಂದು ಹೇಳಿದರು.ಲೋಕಸಭೆಯಲ್ಲಿ ಮಂಡಿಸಿದ್ದ ತ್ರಿವಳಿ ತಲಾಖ್ ಮಸೂದೆಗೆ 186 ಮತಗಳು ಪರವಾಗಿ ಬಿದ್ದಿದ್ದು, 74 ಮತಗಳು ವಿರೋಧವಾಗಿ ಚಲಾವಣೆಗೊಂಡಿರುವುದಾಗಿ ವರದಿ ವಿವರಿಸಿದೆ.