ನವದೆಹಲಿ: ಲಡಾಖ್ ನ ವಾಸ್ತವ ಗಡಿನಿಯಂತ್ರಣ ರೇಖೆಯ ಸಮೀಪದ ಪ್ಯಾಂಗಾಂಗ್ ನಲ್ಲಿ ಮತ್ತೆ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ಏರ್ಪಟ್ಟಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಆಗಸ್ಟ್ 29-30ರ ರಾತ್ರಿ ಪ್ಯಾಂಗಾಂಗ್ ಪ್ರದೇಶದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ನೂರಕ್ಕೂ ಹೆಚ್ಚು ದಿನಗಳಿಂದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿದೆ.
ಅಲ್ಲದೇ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದ ಫಿಂಗರ್ 4 ಪ್ರದೇಶದಿಂದ ಚೀನಾ ಹಿಂದೆ ಸರಿಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೂರ್ವ ಲಡಾಖ್ ಪ್ರದೇಶದಲ್ಲಿ ಭಾರತ ಹೆಚ್ಚುವರಿ ಸೇನೆಯನ್ನು ನಿಯೋಜಿಸಿತ್ತು. ಅಲ್ಲದೇ 74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಡ್ರ್ಯಾಗನ್ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದರು.
ಎಲ್ ಎಸಿ(ವಾಸ್ತವ ಗಡಿನಿಯಂತ್ರಣ ರೇಖೆಯಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಹೊರಟಿರುವ ಚೀನಾದ ಯೋಜನೆಯನ್ನು ಭಾರತೀಯ ಯೋಧರ ಪಡೆ ಬಲವಾಗಿ ಖಂಡಿಸಿರುವುದಾಗಿ ವರದಿ ಹೇಳಿದೆ.
ಏತನ್ಮಧ್ಯೆ ಪ್ಯಾಂಗಾಂಗ್ ಘರ್ಷಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ದೇಶದ ಕಮಾಂಡರ್ ಮಟ್ಟದ ಮಾತುಕತೆ ಸೋಮವಾರ ನಡೆಯುತ್ತಿರುವುದಾಗಿ ವರದಿ ವಿವರಿಸಿದೆ.
ಜೂನ್ 15ರಂದು ಗಾಲ್ವಾನ್ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಪ್ರತೀಕಾರವಾಗಿ ಭಾರತೀಯ ಸೇನೆ ಸುಮಾರು 50 ಮಂದಿ ಚೀನಾ ಯೋಧರನ್ನು ಹತ್ಯೆಗೈದಿತ್ತು. ಈ ಘಟನೆ ಬಳಿಕ ಲಡಾಖ್ ನಲ್ಲಿ ಹೈಅಲರ್ಟ್ ಘೋಷಿಸಲಾಗಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ.