ಇಂಫಾಲ್: ಕಳೆದ ಮೂರು ತಿಂಗಳಿನಿಂದ ಘರ್ಷಣೆಯಲ್ಲಿ ನಲುಗಿ ಹೋಗಿದ್ದ ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ತಂದೆ, ಮಗ ಸೇರಿದಂತೆ ಮೂವರನ್ನು ಬಂಡುಕೋರರು ಹತ್ಯೆಗೈದಿರುವ ಘಟನೆ ಶುಕ್ರವಾರ (ಆ.4) ತಡರಾತ್ರಿ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಕೇಸ್: ನಾಲ್ವರು ಮಹಿಳೆಯರು ಸೇರಿ 10 ಜನರ ಮೇಲೆ ಎಫ್ಐಆರ್
ನಿದ್ರಿಸುತ್ತಿದ್ದ ಮೂವರ ಮೇಲೆ ಗುಂಡಿಟ್ಟು ಹತ್ಯೆಗೈದ ನಂತರ ತಲವಾರ್ ನಿಂದ ಕತ್ತರಿಸಿ ಹಾಕಿರುವುದಾಗಿ ಕ್ವಾಕ್ಟಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಪರಿಹಾರ ಕೇಂದ್ರದಲ್ಲಿ ವಾಸ್ತವ್ಯವಾಗಿದ್ದು, ಪರಿಸ್ಥಿತಿ ಶಾಂತಗೊಂಡ ಹಿನ್ನೆಲೆಯಲ್ಲಿ ಕ್ವಾಕ್ಟಾದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದ್ದರು. ಈ ಸಂದರ್ಭದಲ್ಲಿ ಚುರಾಚಂದ್ ಪುರದಿಂದ ಆಗಮಿಸಿದ್ದ ಬಂಡುಕೋರರು ಮೂವರ ಮೇಲೆ ದಾಳಿ ನಡೆಸಿ ಕೊಲೆಗೈದಿರುವುದಾಗಿ ವರದಿ ವಿವರಿಸಿದೆ.
ದಾಳಿಕೋರರು ನಿರ್ಬಂಧಿತ ಪ್ರದೇಶವನ್ನು ಬೇಧಿಸಿ ಒಳನುಸುಳಲು ಸಾಧ್ಯವಾಗಿದ್ದರಿಂದ ಈ ಘಟನೆ ನಡೆಯಲು ಸಾಧ್ಯವಾಗಿದ್ದು, ಭದ್ರತಾ ಪಡೆಗಳಿಗೂ ಸವಾಲಾಗಿ ಪರಿಣಮಿಸಿದೆ. ಹಿಂಸಾಚಾರ ಭುಗಿಲೆದ್ದ ವಿವಿಧ ಜಿಲ್ಲೆಗಳಲ್ಲಿ ಮಣಿಪುರ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಬಂಕರ್ ಗಳನ್ನು ನಾಶ ಮಾಡಿರುವುದಾಗಿ ವರದಿ ತಿಳಿಸಿದೆ.
ಹಿಂಸಾಚಾರ ಮುಂದುವರಿದ ಇಂಫಾಲ್ ನ ಎರಡು ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆ ಸಮಯವನ್ನು ಕಡಿತಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಎರಡು ಜಿಲ್ಲೆಗಳಲ್ಲಿ ಬೆಳಗ್ಗೆ 5ರಿಂದ ಸಂಜೆ 6ರವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿದ್ದು, ಇದೀಗ ಕರ್ಫ್ಯೂ ಸಮಯವನ್ನು ಬೆಳಗ್ಗೆ 5ರಿಂದ 10-30ರವರೆಗೆ ಮಾತ್ರ ನಿಗದಿಪಡಿಸಲಾಗಿದೆ.