ಪ್ಯಾರಿಸ್: ಟ್ಯುನೀಶಿಯಾದ ಓನ್ಸ್ ಜೆಬ್ಯುರ್ ಮೊದಲ ಬಾರಿಗೆ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ವನಿತಾ ಸಿಂಗಲ್ಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇವರನ್ನು ಎದುರಿಸಲಿರುವ ಬ್ರಝಿಲ್‌ನ ಬೀಟ್ರಿಝ್ ಹದಾದ್ ಮಯ ಅವರಿಗೂ ಇದು ಮೊದಲ ಫ್ರೆಂಚ್ ಓಪನ್ ಎಂಟರ ಸುತ್ತಿನ ಸ್ಪರ್ಧೆ ಎಂಬುದು ವಿಶೇಷ.
7ನೇ ಶ್ರೇಯಾಂಕಿತೆ, ಕಳೆದ ವರ್ಷದ ವಿಂಬಲ್ಡನ್ ಮತ್ತು ಯುಎಸ್ ಓಪನ್ ಫೈನಲಿಸ್ಟ್ ಆಗಿರುವ ಓನ್ಸ್ ಜೆಬ್ಯುರ್ ಕೇವಲ 63 ನಿಮಿಷಗಳ ಆಟದಲ್ಲಿ ಅಮೆರಿಕದ ಬರ್ನಾರ್ಡ್ ಪೆರಾ ಅವರನ್ನು ಹಿಮ್ಮೆಟ್ಟಿಸಿದರು. ಜಯದ ಅಂತರ 6-3, 6-1. ಇದರೊಂದಿಗೆ ಅವರು ಎಲ್ಲ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಗಳ ಕ್ವಾರ್ಟರ್ ಫೈನಲ್ ತಲುಪಿದಂತಾಯಿತು.
ಓಲ್ಗಾ ಡ್ಯಾನಿಲೋವಿಕ್ ಎದುರಿನ ತೃತೀಯ ಸುತ್ತಿನ ಪಂದ್ಯವನ್ನು ಗೆಲ್ಲಲು 3 ಸೆಟ್‌ಗಳನ್ನು ತೆಗೆದುಕೊಂಡಿದ್ದ ಜೆಬ್ಯುರ್, ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಿದರು. ಎದುರಾಳಿ ಬರ್ನಾರ್ಡ್ ಪೆರಾ ಕೂಡ ಸಾಕಷ್ಟು ತಪ್ಪುಗಳನ್ನೆಸಗಿದರು. ಜೆಬ್ಯುರ್ ಇದರ ಲಾಭವನ್ನೆತ್ತುವಲ್ಲಿ ಯಶಸ್ವಿಯಾದರು.
ಹದಾದ್ ಮಯ 3 ಗಂಟೆ, 51 ನಿಮಿಷಗಳ ಸುದೀರ್ಘ ಹೋರಾಟದ ಬಳಿಕ ಸ್ಪೇನ್‌ನ ಸಾರಾ ಸೋರಿಬೆಸ್ ಟೊರ್ಮೊ ಆಟವನ್ನು ಕೊನೆಗಾಣಿಸಿದರು. ಇದು ಈ ವರ್ಷದ ಅತ್ಯಂತ ಸುದೀರ್ಘ ವನಿತಾ ಪಂದ್ಯವಾಗಿ ದಾಖಲಾಯಿತು. ಹದಾದ್ ಮಯ ಗೆಲುವಿನ ಅಂತರ 6-7 (7-3), 6-3, 7-5.
Related Articles
27 ವರ್ಷದ ಹದಾದ್ ಮಯ 1968ರ ಬಳಿಕ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್ ತಲುಪಿದ ಬ್ರಝಿಲ್‌ನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಉಕ್ರೇನ್ ವರ್ಸಸ್ ರಷ್ಯಾ!
ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಕ್ವಾರ್ಟರ್ ಫೈನಲ್ ತಲುಪಿದ ಮತ್ತೋರ್ವ ಆಟಗಾರ್ತಿ. ವಿಶೇಷವೆಂದರೆ, ಅವರು ಅಮ್ಮನಾದ ಬಳಿಕ ಆಡುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿ ಇದಾಗಿದೆ. ಅವರು ರಷ್ಯಾದ ದರಿಯಾ ಕಸತ್ಕಿನಾ ವಿರುದ್ಧ 6-4, 7-6 (7-5) ಅಂತರದಿಂದ ಗೆದ್ದು ಬಂದರು. ಈ ಗೆಲುವಿನ ಬಳಿಕ ಮತ್ತೆ 17ರ ಅನುಭವ ಆಗುತ್ತಿದೆ ಎಂದು ಸಂಭ್ರಮಿಸಿದ್ದಾರೆ.
“ನಾನು ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಆಡುತ್ತೇನೆ, ಇಲ್ಲಿ ಕ್ವಾರ್ಟರ್ ಫೈನಲ್ ತಲುಪಲಿದ್ದೇನೆ ಎಂದು ಯಾರೂ ಭಾವಿಸಿರಲಿಲ್ಲ. ಹೀಗಾಗಿ ನಾನೀಗ ಒತ್ತಡ ಮುಕ್ತಳು’ ಎಂಬುದಾಗಿ ಸ್ವಿಟೋಲಿನಾ ಹೇಳಿದರು.
ಎಲಿನಾ ಸ್ವಿಟೋಲಿನಾ ಅವರ ಎದುರಾಳಿ ಬೆಲರೂಸ್‌ನ ಅರಿನಾ ಸಬಲೆಂಕಾ. ಕಳೆದ ರಾತ್ರಿಯ ಇನ್ನೊಂದು ಪಂದ್ಯದಲ್ಲಿ ಸಬಲೆಂಕಾ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಅವರಿಗೆ 7-6 (7-5), 6-4 ಅಂತರದ ಸೋಲುಣಿಸಿದರು.
ಎಲಿನಾ ಸ್ವಿಟೋಲಿನಾ ಗೆಲುವಿನ ಬಳಿಕ ದರಿಯಾ ಕಸತ್ಕಿನಾ ಕೈ ಕುಲುಕಲು ನಿರಾಕರಿಸಿದ್ದರು. ಇದಕ್ಕೂ ಮೊದಲು ಅನ್ನಾ ಬ್ಲಿಂಕೋವಾ ಅವರಿಗೂ ಶೇಕ್‌ಹ್ಯಾಂಡ್ ಮಾಡಿರಲಿಲ್ಲ. ಕಾರಣ, ಇವರಿಬ್ಬರೂ ರಷ್ಯಾದವರಾಗಿರುವುದು. ಇದು ಯುದ್ಧ ಸಂಘರ್ಷ ನಾಡಿನವರ ರ್ಯಾಕೆಟ್ ಸಮರವಾಗಿತ್ತು.
ಮಂಗಳವಾರದ ಕ್ವಾರ್ಟರ್ ಫೈನಲ್ ಬಳಿಕ ತಾನು ಅರಿನಾ ಸಬಲೆಂಕಾ ಅವರ ಕೈಯನ್ನೂ ಕುಲುಕುವುದಿಲ್ಲ ಎಂದು ಘೋಷಿಸಿದ್ದಾರೆ ಸ್ವಿಟೋಲಿನಾ. ಬೆಲರೂಸ್ ರಷ್ಯಾದ ಮಿಲಿಟರಿ ನೆಲೆಗೆ ಹತ್ತಿರ ಇರುವುದೇ ಕಾರಣ ಎಂದೂ ಹೇಳಿದ್ದಾರೆ.
ಗೆಲುವಿನ ಬಳಿಕ ಸ್ವಿಟೋಲಿನಾ ಮಾಧ್ಯಮದವ ರೊಂದಿಗೆ ಮಾತಾಡುವ ಸಂಪ್ರದಾಯವನ್ನೂ ಮುರಿದರು. ಪ್ರಸ್ ರೂಮ್ ಸುರಕ್ಷಿತ ವಾತಾವರಣ ಮೂಡಿಸಲಿದೆ ಎಂದು ತನಗನಿಸದು ಎಂಬುದಾಗಿ ಸ್ವಿಟೋಲಿನಾ ಖಾರವಾಗಿಯೇ ಹೇಳಿದರು.
ಕ್ಯಾಸ್ಪರ್ ರೂಡ್ ಮುನ್ನಡೆ
ಕಳೆದ ಬಾರಿಯ ಫೈನಲಿಸ್ಟ್, ನಾರ್ವೆಯ ಕ್ಯಾಸ್ಪರ್ ರೂಡ್ ಪುರುಷರ ವಿಭಾಗದಿಂದ ಕ್ವಾರ್ಟರ್ ಪೈನಲ್ ತಲುಪಿದ್ದಾರೆ. ಇವರು ಚಿಲಿಯ ನಿಕೋಲಸ್ ಜೆರ್ರಿ ವಿರುದ್ಧ 7-6, 7-5, 7-5ರಿಂದ ಜಯ ಸಾಧಿಸಿದರು. ತೀವ್ರ ಪೈಪೋಟಿಯ ಈ ಪಂದ್ಯ ಮೂರೂವರೆ ಗಂಟೆಗಳ ಕಾಲ ಸಾಗಿತು.