Advertisement

ಇಂದು ಫ್ರೆಂಚ್‌ ಓಪನ್‌ ವನಿತಾ ಫೈನಲ್‌: ಪ್ರಶಸ್ತಿ ರೇಸ್‌ನಲ್ಲಿ ಸ್ವಿಯಾಟೆಕ್‌-ಗಾಫ್

11:20 PM Jun 03, 2022 | Team Udayavani |

ಪ್ಯಾರಿಸ್‌: ವಿಶ್ವದ ನಂ.1 ಆಟಗಾರ್ತಿ ಐಗಾ ಸ್ವಿಯಾಟೆಕ್‌ ಮತ್ತು ಟೆನಿಸ್‌ ಲೋಕದ ಕಿರಿಯ ಆಟಗಾರ್ತಿ ಕೊಕೊ ಗಾಫ್ ಶನಿವಾರದ ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌ ಪ್ರಶಸ್ತಿ ಸೆಣಸಾಟಕ್ಕೆ ಇಳಿಯಲಿದ್ದಾರೆ. ಪೋಲೆಂಡ್‌ನ‌ ಸ್ವಿಯಾಟೆಕ್‌ ಪಾಲಿಗೆ ಇದು ದ್ವಿತೀಯ ಫ್ರೆಂಚ್‌ ಓಪನ್‌ ಫೈನಲ್‌ ಆದರೆ, ಅಮೆರಿಕದ ಕೊಕೊ ಗಾಫ್ಗೆ ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌!

Advertisement

ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ದಿಢೀರ್‌ ನಿವೃತ್ತಿ ಘೋಷಿಸಿದ್ದರಿಂದ ಐಗಾ ಸ್ವಿಯಾಟೆಕ್‌ಗೆ ವಿಶ್ವದ ನಂ.1 ಆಟಗಾರ್ತಿ ಎನಿಸುವ ಯೋಗ ಲಭಿಸಿತು. ಅಂದಿನಿಂದ ಇದಕ್ಕೆ ತಕ್ಕ ಪ್ರದರ್ಶನವನ್ನೇ ನೀಡುತ್ತ ಬಂದಿರುವುದು ಸ್ವಿಯಾಟೆಕ್‌ ಹೆಗ್ಗಳಿಕೆ. ಸೆಮಿಫೈನಲ್‌ನಲ್ಲಿ ದರಿಯಾ ಕಸತ್ಕಿನಾ ಅವರನ್ನು ಮಣಿಸುವ ಮೂಲಕ ಸ್ವಿಯಾಟೆಕ್‌ ಅವರ ಸತತ ಗೆಲುವಿನ ಓಟ 34ಕ್ಕೆ ಏರಿದೆ. ಇದರೊಂದಿಗೆ ಸೆರೆನಾ ವೀನಸ್‌ ಅವರ ಸಾಧನೆಯನ್ನು ಸಮನಾಗಿಸಿದ್ದಾರೆ. ಫೈನಲ್‌ ಗೆದ್ದರೆ ಅಕ್ಕ ವೀನಸ್‌ ವಿಲಿಯಮ್ಸ್‌ ಅವರ ಸತತ 35ನೇ ಗೆಲುವಿನ ದಾಖಲೆಯನ್ನು ಸರಿದೂಗಿಸಲಿದ್ದಾರೆ.

ಐಗಾ ಸ್ವಿಯಾಟೆಕ್‌ ತನ್ನ ಏಕೈಕ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಪ್ಯಾರಿಸ್‌ನಲ್ಲೇ ಗೆದ್ದಿರುವುದು ವಿಶೇಷ. ಅದು 2020ರ ಫ್ರೆಂಚ್‌ ಓಪನ್‌ ಪಂದ್ಯಾವಳಿ. ಫೈನಲ್‌ನಲ್ಲಿ ಅಮೆರಿಕದ ಸೋಫಿಯಾ ಕೆನಿನ್‌ ಅವರನ್ನು 6-4, 6-1 ನೇರ ಸೆಟ್‌ಗಳಿಂದ ಮಣಿಸಿ ಟ್ರೋಫಿ ಎತ್ತಿದ್ದರು. ಈ ಬಾರಿಯೂ ಅಮೆರಿಕನ್‌ ಆಟಗಾರ್ತಿಯೇ ಎದುರಾಗಿರುವುದು ವಿಶೇಷ.

ಮೇಲ್ನೋಟ ಹಾಗೂ ಸತತ ಸಾಧನೆಯ ಲೆಕ್ಕಾಚಾರದಲ್ಲಿ 21 ವರ್ಷದ ಸ್ವಿಯಾಟೆಕ್‌ ಅವರೇ ನೆಚ್ಚಿನ ಆಟಗಾರ್ತಿ. ಇಲ್ಲಿಗೆ ಬರುವ ಮೊದಲು ಸತತ 5 ಟೆನಿಸ್‌ ಕೂಟಗಳಲ್ಲಿ ಪ್ರಶಸ್ತಿಯನ್ನೆತ್ತಿದ ಹಿರಿಮೆ ಇವರದು. ದೋಹಾ, ಇಂಡಿಯನ್‌ ವೆಲ್ಸ್‌, ಮಿಯಾಮಿ, ಸ್ಟಟ್‌ಗಾರ್ಟ್‌ ಮತ್ತು ರೋಮ್‌ ಟೂರ್ನಿಗಳಲ್ಲಿ ಸ್ವಿಯಾಟೆಕ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದರು. ಇದಕ್ಕೆ ಇನ್ನೊಂದು ಪ್ಯಾರಿಸ್‌ ಪ್ರಶಸ್ತಿ ಸೇರ್ಪಡೆಯಾದರೆ ಅಚ್ಚರಿಯಿಲ್ಲ.

ಗಾಫ್: ಬಾಲಕಿಯರ ಚಾಂಪಿಯನ್‌
18 ವರ್ಷದ ಕೊಕೊ ಗಾಫ್ ಪಾಲಿನ ಹೆಗ್ಗಳಿಕೆಯೆಂದರೆ, 2018ರಲ್ಲಿ ಇದೇ ಕೂಟದ ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿ ಮೂಡಿಬಂದದ್ದು. ಫೈನಲ್‌ ಹಾದಿಯಲ್ಲಿ ಸಾಧಿಸಿದ 6 ಗೆಲುವಿನ ವೇಳೆ ಒಂದೂ ಸೆಟ್‌ ಕಳೆದುಕೊಳ್ಳದಿರುವುದು ಗಾಫ್ ಅವರ ಮತ್ತೊಂದು ಸಾಧನೆ. ಆಲ್‌ ಅಮೆರಿಕನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಲೋನ್‌ ಸ್ಟೀಫ‌ನ್ಸ್‌ ಅವರನ್ನು ಕೆಡವಿದ ಸಾಹಸ ಇವರದು.

Advertisement

ಆರಂಭದಲ್ಲಿ ತುಸು ನಿಧಾನ ಗತಿಯಲ್ಲಿ ಆಡುವ ಗಾಫ್, ಒಮ್ಮೆ ಲಯ ಕಂಡುಕೊಂಡ ಬಳಿಕ ಅತ್ಯಂತ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಾರೆ. ಆಗ ಇವರನ್ನು ತಡೆಯುವುದು ಕಷ್ಟ.

ಕೊಕೊ ಗಾಫ್ 2004ರ ಬಳಿಕ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದ ಅತೀ ಕಿರಿಯ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಅಂದು 17ರ ಹರೆಯದ ಮರಿಯಾ ಶರಪೋವಾ ವಿಂಬಲ್ಡನ್‌ ಫೈನಲ್‌ಗೆ ಲಗ್ಗೆಯಿರಿಸಿ, 2 ಬಾರಿಯ ಹಾಲಿ ಚಾಂಪಿಯನ್‌ ಸೆರೆನಾ ವಿಲಿಯಮ್ಸ್‌ಗೆ ಸೋಲುಣಿಸಿ ಚಾಂಪಿಯನ್‌ ಆಗಿ ಮೂಡಿಬಂದಿದ್ದರು. ಕೊಕೊ ಗಾಫ್ ಕಳೆದ 21 ವರ್ಷಗಳಲ್ಲಿ ರೊಲ್ಯಾಂಡ್‌ ಗ್ಯಾರಸ್‌ ಫೈನಲ್‌ ಪ್ರವೇಶಿಸಿದ ಅತೀ ಕಿರಿಯ ಆಟಗಾರ್ತಿ ಎಂಬುದನ್ನೂ ಮರೆಯುವಂತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next