Advertisement

ಬೀದಿಗಿಳಿದು ಪ್ರತಿಭಟನೆ ನಡೆಸಿದ ಸರಕು ಸಾಗಣೆದಾರರು

03:45 AM Apr 07, 2017 | Team Udayavani |

ಬೆಂಗಳೂರು: ಎಂಟು ದಿನ ಕಳೆದರೂ ಕೇಂದ್ರ ಸರ್ಕಾರ ಬೇಡಿಕೆಗೆ ಸ್ಪಂದಿಸದ ಕಾರಣ ಗುರುವಾರ ಬೀದಿಗಿಳಿದ ಸರಕು ಸಾಗಣೆದಾರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನವದೆಹಲಿಯಲ್ಲಿ ಶುಕ್ರವಾರ ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವಾಲಯ ಸಭೆ ಆಯೋಜಿಸಿದ್ದು, ಕೇಂದ್ರ ಸರ್ಕಾರ ಸರಕು ಸಾಗಣೆದಾರರ ಬೇಡಿಕೆಗೆ ಸ್ಪಂದಿಸುವುದೇ
ಎಂಬುದನ್ನು ಕಾದು ನೋಡಬೇಕಿದೆ. ಮುಷ್ಕರದ ನಡುವೆಯೂ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಆಹಾರಧಾನ್ಯ, ಬೇಳೆಕಾಳು, ತರಕಾರಿ, ಹಣ್ಣು ಪೂರೈಕೆ ಬಹುತೇಕ ಸಹಜ ಸ್ಥಿತಿಯತ್ತ ಮರಳುತ್ತಿದೆ.

Advertisement

ಆದರೆ ವಾರದಿಂದ ಸಕ್ಕರೆ ಪೂರೈಕೆಯಾಗದ ಕಾರಣ ತಾತ್ಕಾಲಿಕ ಅಭಾವ ಸೃಷ್ಟಿಯಾಗಿದ್ದು, ದರವೂ 1.50 ರೂ. ಹೆಚ್ಚಳವಾಗಿರುವುದರಿಂದ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಕಳೆದ ಎಂಟು ದಿನಗಳಿಂದ ಮುಷ್ಕರ
ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಮೋಟಾರು ಸಾಗಣೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಆರ್‌.ಷಣ್ಮುಖಪ್ಪ ನೇತೃತ್ವದಲ್ಲಿ ಸರಕು ಸಾಗಣೆದಾರರು ಗುರುವಾರ ಶೇಷಾದ್ರಿ ರಸ್ತೆಯ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಷಣ್ಮುಖಪ್ಪ, “ಎಂಟು ದಿನಗಳಿಂದ
ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ.

ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟ ಬೇಡಿಕೆಗಳ ಬಗ್ಗೆ ಸದ್ಯದಲ್ಲೇ ಸಭೆ ಕರೆದು ಚರ್ಚಿಸುವುದಾಗಿ ರಾಜ್ಯ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ದೊರಕದಿರುವುದು ಬೇಸರ ತಂದಿದೆ.
ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ’ ಎಂಂದು ಹೇಳಿದರು. ಕರ್ನಾಟಕ ರಾಜ್ಯ ಎಲ್‌ಪಿಜಿ ಸಾಗಣೆದಾರರ ಸಂಘ ಸೇರಿದಂತೆ ನಾನಾ ಸಂಘಟನೆಗಳ ಪ್ರಮುಖರು, ಸರಕು ಸಾಗಣೆದಾರರು ಪಾಲ್ಗೊಂಡಿದ್ದರು.

ಎಪಿಎಂಸಿಗೆ ಅಗತ್ಯ ವಸ್ತುಗಳ ಪೂರೈಕೆ:
ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಗುರುವಾರ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯ, ಬೇಳೆಕಾಳು ದಾಸ್ತಾನು ಪೂರೈಕೆಯಾಗಿತ್ತು. ಇದರಿಂದ ಗ್ರಾಹಕರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು.
ಹಲವು ದಿನಗಳ ಬಳಿಕ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಸಹಜ ಸ್ಥಿತಿಗೆ ಮರಳಿದಂತಿತ್ತು. ಮಾರುಕಟ್ಟೆಗಳಿಗೆ ಅಗತ್ಯ ಪ್ರಮಾಣದಲ್ಲಿ ತರಕಾರಿ, ಹಣ್ಣು ಪೂರೈಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.

ಸಕ್ಕರೆ ಅಭಾವ: ದರ ಹೆಚ್ಚಳ: ಎಪಿಎಂಸಿಗೆ ಗುರುವಾರ 365 ಲಾರಿಗಳಲ್ಲಿ ಆಹಾರ ಧಾನ್ಯ, ಬೇಳೆಕಾಳು ಇತರೆ ವಸ್ತುಗಳು ಪೂರೈಕೆಯಾಗಿವೆ. ಆದರೆ ವಾರದಿಂದ ಸಕ್ಕರೆ ಪೂರೈಕೆಯಾಗದ ಕಾರಣ ಕೊರತೆ ಕಾಣಿಸಿಕೊಳ್ಳಲಾರಂಭಿಸಿದೆ. ಇದರಿಂದ ಸಕ್ಕರೆ ಬೆಲೆ 40 ರೂ.ನಿಂದ 41.50 ರೂ.ಗೆ ಏರಿಕೆಯಾಗಿದೆ ಎಂದು ಎಪಿಎಂಸಿ
ಆಹಾರಧಾನ್ಯ ಮತ್ತು ಬೇಳೆಕಾಳು ವರ್ತಕರ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next