ಹಸಿವಾದಾಗ ತಿನ್ನುವುದು ಸಹಜ ಅನ್ನುವ ನಾವು, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವಾಗಲೂ ಅಸಹ್ಯ ಪಡದ ನಾವು, ತಾಯಿ ಎದೆಹಾಲು ಉಣಿಸುವುದನ್ನು ವಿಚಿತ್ರವಾಗಿ ನೋಡುವುದೇಕೆ?
ಆಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಕಿಕ್ಕಿರಿದ ಜನಸಂದಣಿಯ ನಡುವೆ ಹೇಗೋ ಅಡ್ಜಸ್ಟ್ ಮಾಡಿಕೊಂಡು ಸೀಟ್‌ನಲ್ಲಿ ಕೂತಿದ್ದಳು. ಪಕ್ಕದಲ್ಲಿ ಕೂತ ಹೆಂಗಸು ಆಕೆಯನ್ನೇ ದುರುಗುಟ್ಟಿ ನೋಡತೊಡಗಿದಳು, ಆ ಕಡೆ ಸೀಟಿನ ಹೆಂಗಸರು ಮುಖ ತಿರುಗಿಸಿ ಕೂತರು. ಕೆಲವರು ಗುಸುಗುಸು ಮಾತಾಡಿದರೆ ಇನ್ನೂ ಕೆಲವು ಕಣ್ಣುಗಳು ಕದ್ದು ಮುಚ್ಚಿ ಆಕೆಯನ್ನು ನೋಡತೊಡಗಿದವು. ಇದರಿಂದ ಆಕೆಗೆ ಸಾಕಷ್ಟು ಮುಜುಗರವಾಯ್ತು.
ಆದರೆ, ಸುತ್ತಲಿನವರ ಬಗ್ಗೆ ಗಮನ ನೀಡದೆ ಅನಿವಾರ್ಯವಾಗಿ ತನ್ನ ಕಾರ್ಯವನ್ನು ಮುಂದುವರಿಸಿದಳು. ಅಷ್ಟಕ್ಕೂ ಆಕೆ ಮಾಡಿದ್ದೇನೆಂದರೆ, ತನ್ನ ಮೂರು ತಿಂಗಳ ಹಸುಗೂಸಿಗೆ ಹಾಲುಣಿಸಿದ್ದು. ಪುಟ್ಟ ಮಗು ಎಲ್ಲಿ, ಯಾವಾಗ ಹಸಿವು ಅನುಭವಿಸುತ್ತದೋ ದೇವರೇ ಬಲ್ಲ. ಆಗ ಮಗುವಿಗಿಂತ ಹೆಚ್ಚು ಚಡಪಡಿಸುವುದು ತಾಯಿ. ಪ್ರಯಾಣಿಸುವ ಬಸ್ಸಿನಲ್ಲಿ, ಶಾಪಿಂಗ್‌ಗೆ ಹೋದ ಮಾಲ್‌ನಲ್ಲಿ, ಅಥವಾ ಸಮಾರಂಭಕ್ಕೆ ಹೋದಾಗ…ಹೀಗೆ, ಮಕ್ಕಳು ಹಸಿವಿನಿಂದ ಅಳತೊಡಗಿದರೆ ತಾಯಿಯ ಕಸಿವಿಸಿ, ಹಿಂಸೆ ಹೇಳತೀರದ್ದು. ಯಾಕಂದ್ರೆ, ಎದೆಹಾಲೂಡುವ ತಾಯಿಯನ್ನೂ ಸಮಾಜದ ವಕ್ರ ದೃಷ್ಟಿ ಬಿಡುವುದಿಲ್ಲ.
ಹಸಿವಾದಾಗ ದೊಡ್ಡವರು ತಿನ್ನುವುದು ಸಹಜ ಅನ್ನುವ ನಾವು, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವಾಗಲೂ ಅಸಹ್ಯ ಪಡದ ನಾವು, ಒಬ್ಬ ತಾಯಿ ತನ್ನ ಮಗುವಿಗೆ ಎದೆಹಾಲು ಉಣಿಸುವುದನ್ನು ವಿಚಿತ್ರವಾಗಿ ನೋಡುವುದು ವಿಪರ್ಯಾಸ. ಸಣ್ಣ ಮಗುವಿರುವ ತಾಯಂದಿರು ಮನೆಯಿಂದ ಹೊರಗೆ ಕಾಲಿಡುವುದಕ್ಕೇ ಅಂಜುವುದು ಇದೇ ಕಾರಣಕ್ಕೆ. ಸ್ತನ್ಯಪಾನದ ಮಹತ್ವವನ್ನು ಅರ್ಥ ಮಾಡಿಸುವ ಪ್ರಯತ್ನಗಳ ಜೊತೆಜೊತೆಗೇ, ಈ ಕುರಿತೂ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಬಾಲಿವುಡ್ ನಟಿ ನೇಹಾ ದೂಫಿಯಾ, ಸೋಶಿಯಲ್ ಮೀಡಿಯಾದಲ್ಲಿ “ಫ್ರೀಡಂ ಟು ಫೀಡ್’ ಎಂಬ ಅಭಿಯಾನ ಶುರು ಮಾಡಿದ್ದಾರೆ. ಹಲವು ತಾಯಂದಿರು ಅಭಿಯಾನಕ್ಕೆ ಬೆಂಬಲ ಸೂಚಿಸಿ, ಎದೆಹಾಲು ಉಣಿಸುವಾಗ ತಾವು ಅನುಭವಿಸಿದ ಮುಜುಗರವನ್ನು ಮುಕ್ತವಾಗಿ ಹಂಚಿಕೊಂಡಿರುವುದು ಸ್ವಾಗತಾರ್ಹ. ಹೀಗೆ, ತಾಯಂದಿರ ಧ್ವನಿಗೊಂದು ವೇದಿಕೆ ಸಿಕ್ಕಿದರೆ, ಸಮಾಜದಲ್ಲಿ ಬದಲಾವಣೆ ಆಗಲು ಸಾಧ್ಯ. ಜಾಗತಿಕವಾಗಿ ಎಷ್ಟೇ ಜಾಗೃತಿ ಮೂಡಿಸಿದರೂ, ನಮ್ಮನ್ನು ನಾವು ಜಾಗೃತಗೊಳಿಸದಿದ್ದರೆ ಯಾವ ಅಭಿಯಾನವೂ ಯಶಸ್ವಿಯಾಗದು. ಇನ್ನಾದರೂ ಎದೆ ಹಾಲುಣಿಸುವ ಸಂಗತಿಯನ್ನು ವಿಚಿತ್ರವೆಂಬಂತೆ ನೋಡುವುದನ್ನು ಬಿಡುವ ಮನಸ್ಸು ಎಲ್ಲರಿಗೂ ಬರಲಿ.
-ದೀಪ್ತಿ ಉಜಿರೆ