Advertisement

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಸವಣ್ಣನವರು

04:15 PM Apr 18, 2018 | Sharanya Alva |

ಮಾನವ ಹಕ್ಕುಗಳ ಹಿನ್ನೆಲೆಯಲ್ಲಿ ವಾಕ್‌ ಸ್ವಾತಂತ್ರ್ಯದ ಹಕ್ಕನ್ನು ಬಹುತೇಕ ರಾಷ್ಟ್ರಗಳು ತಮ್ಮ ಸಂವಿಧಾನದಲ್ಲಿ ನಮೂದಿಸಿದ್ದರೂ ಜಗತ್ತಿನಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಇಂದಿಗೂ ಹೋರಾಟಗಳು ನಡೆಯುತ್ತಿವೆ. ಪ್ರತಿಯೊಂದು ಬರಹಕ್ಕೂ, ಅಭಿವ್ಯಕ್ತಿಗೂ ರಾಜಸತ್ತೆಯ ಪರವಾನಗಿ ತೆಗೆದುಕೊಳ್ಳಬೇಕೆಂಬ ಸರ್ಕಾರದ ಕ್ರಮವನ್ನು ವಿರೋಧಿಸಿ ಖ್ಯಾತ ಕವಿ ಜಾನ್‌ ಮಿಲ್ಟನ್‌ ಇಂಗ್ಲೆಂಡಿನ ಸಂಸತ್ತಿಗೆ 17ನೇ ಶತಮಾನದಲ್ಲಿ “ಏರಿಯೊ ಪೆಗೆಟಿಕಾ’ ಎಂಬ ಪ್ರಬಂಧ ವನ್ನು ಬರೆಯುತ್ತಾನೆ. ಆದರೆ ಭಾರತದಲ್ಲಿ 12ನೇ ಶತಮಾನದಲ್ಲೇ ಯಾವ ಹಕ್ಕೊತ್ತಾಯವಿಲ್ಲದೇ ರಾಜಸತ್ತೆಯ ಚೌಕಟ್ಟಿನಲ್ಲಿಯೇ ಇಂಥ ಹಕ್ಕುಗಳು ಜನಸಾಮಾ ನ್ಯರಿಗೆ ಸಿಕ್ಕಿದ್ದವು. ಎಲ್ಲಾ ಸಮುದಾಯದವರು ಬರೆದ ವಚನಗಳ ಪ್ರಮಾಣವೇ ಇದಕ್ಕೆ ಸಾಕ್ಷಿ.

Advertisement

ವಚನಗಳ ಅಂತರಾಳದಲ್ಲಿ ಪ್ರತಿಬಿಂಬಿತವಾಗಿರುವುದು ಸಾರ್ವತ್ರಿಕ ಸತ್ಯದ ಮುಖಗಳು. ಓದುಗರ ಪ್ರಜ್ಞೆಯ ಆಳಕ್ಕಿಳಿದು ಕೆಣಕುವ ಶಕ್ತಿ ಬಸವಣ್ಣನವರ ಮತ್ತು ಶರಣರ ಮಾತುಗಳಿಗಿದೆ. ಅಲ್ಲಿ ಕಾಣುವ ಮನೋವ್ಯಾಪಾರಗಳು ಎಲ್ಲರ ಎದೆಯಾಳದಲ್ಲೂ ನಡೆಯುವ ನಿತ್ಯ ಹೋರಾಟಗಳು. ಅಲ್ಲಿ ಗೋಚರಿಸುವ ವಿಚಾರಗಳು ಎಲ್ಲರ ಚಿತ್ತದಲ್ಲೂ ನಡೆಯಬೇಕಾದ ಹುಡುಕಾಟಗಳು. ವಚನಗಳ ವಿಶಾಲತೆಗೆ ತೆರೆದುಕೊಳ್ಳುತ್ತಾ ಹೋದಷ್ಟು ನಮ್ಮ ಅನುಭಾವದ ಒಡಲು ತುಂಬಿಕೊಳ್ಳುತ್ತಾ ಹೋಗುತ್ತದೆ. 

ಸಮಾಜದ ಎಲ್ಲ ಜಾತಿ, ಕುಲ, ವರ್ಗ, ವರ್ಣ, ಕಾಯಕಗಳಿಂದ ಬಂದು ಒಂದೆಡೆ ಕಲೆತ ಜನರಿಂದ ಇಂಥ ಅನುಭಾವ ಸಾಹಿತ್ಯ ಹುಟ್ಟಿದ್ದು ಹೇಗೆ? ಜಡ್ಡುಗಟ್ಟಿದ ವ್ಯವಸ್ಥೆಯ ಕಟ್ಟು ಕಟ್ಟಳೆಗಳನ್ನೆಲ್ಲಾ ಮುರಿಯುವ ಮಹಾ ಬಲ ಶರಣರ ಮನಸ್ಸನ್ನು ಹೊಕ್ಕಿಲ್ಲಾದರೂ ಹೇಗೆ? ಈ ಎಲ್ಲ ಪ್ರಶ್ನೆಗಳು ಅವರಿಗೆ ಸಿಕ್ಕ ಅಭಿವ್ಯಕ್ತಿ ಸ್ವಾತಂತ್ರ್ಯದತ್ತ ಬೊಟ್ಟು ಮಾಡಿ ತೋರಿಸುತ್ತವೆ. ಆ ದಿನಗಳಾದರೂ ಹೇಗಿದ್ದವು? ಶೂದ್ರರು, ಅಸ್ಪೃಶ್ಯರು, ದೀನ-ದಲಿತರು, ಮಹಿಳೆಯರು ತಮ್ಮ ದನಿಯನ್ನೇ ಕಳೆದುಕೊಂಡಿದ್ದರು. ಬಾಯಿ ಬಿಡುವುದೆಂದರೆ ಅಪಾಯವನ್ನು ಆಹ್ವಾನಿಸಿದಂತೆ, ತಲೆ ಎತ್ತುವುದೆಂದರೆ ಕಠಿಣ ಶಿಕ್ಷೆಗಳನ್ನು ಮೈಮೇಲೆ ಎಳೆದುಕೊಂಡಂತೆ. ಮಾತುಗಳು ಗಂಟಲಲ್ಲೇ ಹೂತು, ಅಭಿಪ್ರಾಯಗಳು ಎದೆಯಲ್ಲಿ ಸಮಾಧಿಯಾಗಿದ್ದವು. ಪ್ರತಿಭಟಿಸುವ ಶಕ್ತಿಯೇ ಪಲಾಯನಗೈದಿತ್ತು. ದೇವರು, ಧರ್ಮದ ಹೆಸರಿನಲ್ಲಿ ಛಿದ್ರವಾಗಿದ್ದ ಅಂದಿನ ಸಮಾಜದಲ್ಲಿ ಕೋಳ ತೊಡದೇ ಮನುಷ್ಯ ಅಕ್ಷರಶಃ ಬಂಧಿಯಾಗಿದ್ದ. ಏನನ್ನು ಯೋಚಿಸಬೇಕು, ಏನನ್ನು ಯೋಚಿಸಬಾರದು ಎಂದು ನಿರ್ದೇಶಿಸುತ್ತಾ ಕಟ್ಟುಪಾಡು ಹಾಕುವ ಧರ್ಮಶಾಸ್ತ್ರಗಳ ಅಡಿಯಲ್ಲಿ ಸಿಕ್ಕಿಕೊಂಡ ಮನುಷ್ಯ ಹೇಗೆ ಯೋಚಿಸಬೇಕೆಂಬ ಶಕ್ತಿಯನ್ನೇ ಕಳೆದುಕೊಂಡಿದ್ದ. ಭಯದಲ್ಲಿ, ಅಂಧಾನುಕರಣೆಯಲ್ಲಿ ಸಹಜವಾಗಿ ಚಿಂತನೆ ನಡೆಸುವುದನ್ನೇ ಮರೆತು ಬಿಟ್ಟಿದ್ದ.

ಬಹುಶಃ ಜಾಗತಿಕ ಇತಿಹಾಸದಲ್ಲೇ ಸಾಮೂಹಿಕ ಶಿಕ್ಷಣಕ್ಕೆ ಚಾಲನೆ ನೀಡಿದವರು ಬಸವಣ್ಣ. ಅಕ್ಷರಜ್ಞಾನ ಅರಿವಿನ ಜ್ಞಾನಕ್ಕೆ ಸೋಪಾನ. ಭಯದಲ್ಲಾಗಲಿ, ಸಿದ್ಧ ಯೋಚನೆಗಳಿಗೆ ಬದ್ಧವಾಗುವ ಮನಸ್ಥಿತಿಯಲ್ಲಾಗಲಿ, ಅಂಧಾನುಕರಣೆಯಲ್ಲಾಗಲಿ ಜ್ಞಾನ ಹುಟ್ಟಲಾರದು. ಹೀಗಾಗಿ ಮುಕ್ತ ವಾತಾವರಣದಲ್ಲಿ ಅಂಥ ಜ್ಞಾನ ಸಂಪಾದನೆಗೆ ಅವಕಾಶ ಕಲ್ಪಿಸಿಕೊಟ್ಟರು. ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ ಎಂಬುದನ್ನು ಸಾಧಿಸಿ ತೋರಿಸಿದರು. ಅದಕ್ಕೇ ಅನೇಕ ಆಧುನಿಕ ಸಂಶೋಧಕರು ಬಸವಣ್ಣನವರನ್ನು ಶ್ರೇಷ್ಟ ಶಿಕ್ಷಣ ತಜ್ಞ ಎಂದು ಗುರುತಿಸಿದ್ದಾರೆ. ವಿದ್ಯೆಯಿಂದ ವಂಚಿತರಾದ ಎಲ್ಲಾ ರಂಗದ ಜಾತಿಯ ಜನರಿಗೆ ಹಾಗೂ ಮಹಿಳೆಯರಿಗೆ ಅಲ್ಲಿ ಮುಕ್ತ ಅವಕಾಶವಿತ್ತು. ಕಾಯಕ ಕೇಂದ್ರ ಶಿಕ್ಷಣವನ್ನು ಕಲಿಸಲಾಗುತ್ತಿತ್ತು.

ದೂರ ದೂರದ ರಾಜ್ಯಗಳಿಂದ ಬಂದ ಕಾಶ್ಮೀರದ ರಾಜ ಮೋಳಿಗೆ ಮಾರಯ್ಯ, ಪತ್ನಿ ಮಹಾದೇವಮ್ಮ, ಸೋದರಿ ಬೊಂತಾದೇವಿಯರಂಥ ಅರಸು ಪರಿವಾರದವರಿಗೂ, ಸೌರಾಷ್ಟ್ರದಿಂದ ಬಂದ ಆದಯ್ಯನಂತಹ ಆಸಕ್ತರಿಗೂ ಕನ್ನಡ ಕಲಿಯಲು ಸಾಧ್ಯವಾಗಿದ್ದು ಇಂಥ ಓದಿನ ಮನೆಗಳಿಂದಲೇ. ಇಂದಿಗೂ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕಾಣುವ ಸಾಲೀಮಠ, ಓದಿಸುವ ಮಠ ಮತ್ತು ಗುರುಮಠಗಳು ಅವುಗಳ ಪಳೆಯುಳಿಕೆಗಳು. ಹೀಗೆ ಶೋಷಿತರ ದನಿಗೆ ಉಸಿರಾಗಿ ಬಂದ ಬಸವಣ್ಣನವರು ರಾಜಸತ್ತೆಯ ಸಾಮ್ರಾಜ್ಯದಲ್ಲಿ ಪ್ರಜಾಸತ್ತೆಯ ಆಶಯಗಳನ್ನು ಜಾರಿಗೆ ತಂದಿದ್ದರು. ಜನಪದ ಕವಿ ಇದನ್ನು ತುಂಬು ಹೃದಯದಿಂದ ನೆನೆದಿದ್ದಾನೆ: “”ಸಾಧು ಸಾಧೆಲೆ ಬಸವ, ಓದು ಕಲಿಯಿತು ಜಗವು, ಹೋದಹೋದಲ್ಲಿ ಹೊಸ ಮಾತು ಕೇಳಿದವು, ಮೇದಿನಿಗೆ ಬಂತು ಹೊಸಬೆಳಕು.” ವಿದ್ಯೆಯ ಕಣ್ಣು ಪಡೆದವರಿಗೆ ವೈಚಾರಿಕ ಸ್ವಾತಂತ್ರ್ಯ ಸಿಕ್ಕರೆ ಏನಾಗಬೇಡ? ವಿಚಾರ ಸ್ವಾತಂತ್ರ್ಯದ ವಾತಾವರಣ ಅಲ್ಲಿ ನಿರ್ಮಾಣ ವಾದದ್ದರಿಂದಲೇ ತಲೆತಲಾಂತರದಿಂದ ರಕ್ತದಲ್ಲಿ ಬೆರೆತು ಹೋಗಿದ್ದ ದೈನ್ಯತೆಯನ್ನು, ಕೀಳರಿಮೆಯನ್ನು ದಾಟಲು ಶರಣರಿಗೆ ಸಾಧ್ಯವಾಯಿತು.

Advertisement

ಮಾತನ್ನು ಹತ್ತಿಕ್ಕುವುದೆಂದರೆ ಯೋಚಿಸುವುದನ್ನು ನಿಲ್ಲಿಸುವುದು. ಯೋಚಿಸದ ಬುದ್ಧಿ ಪ್ರಶ್ನಿಸಲಾರದು. ಪ್ರಶ್ನಿಸಲಾರದ ಮನಸ್ಸು ವ್ಯವಸ್ಥೆ ಎಷ್ಟೇ ಕ್ರೂರವಾಗಿದ್ದರೂ, ತನ್ನ ಸ್ಥಿತಿ ಎಷ್ಟೇ ಚಿಂತಾಜನಕವಾಗಿದ್ದರೂ ಮರು ಮಾತಾಡದೇ ಅದೆಲ್ಲವನ್ನೂ ದೈನ್ಯತೆಯಿಂದ ಒಪ್ಪಿಕೊಂಡಿರುತ್ತದೆ. ಬುದ್ಧಿ ಎಲ್ಲಿ ಕೆಲಸ ಮಾಡುವುದಿಲ್ಲವೋ ಮನುಷ್ಯನ ಬದುಕು ವಿಚಾರಗಳಿಂದ ದೂರ ಸರಿಯುತ್ತದೆ. ಆಗ ತನ್ನ ಆಲೋಚನೆಗಳ ವಿಸ್ತಾರ ದಕ್ಕದೆ ಸಹಜವಾಗಿಯೇ ಮನುಷ್ಯನ ವ್ಯಕ್ತಿತ್ವ ಕುಬ್ಜವಾಗುತ್ತದೆ.
ಪ್ರತಿಯೊಬ್ಬರ ಅಭಿಪ್ರಾಯಕ್ಕೆ, ಮಾತಿಗೆ ಜಾಗ ಸಿಕ್ಕಾಗಲೇ ಸಮಾಜ ಚಲನಶೀಲವಾಗಿರುತ್ತದೆ. ಅಭಿವ್ಯಕ್ತಿ ಸ್ವಾತಂತ್ರವು ಸ್ವಂತಿಕೆಯ ಹುಡುಕಾಟದ ಒಂದು ಪ್ರಧಾನ ಮಾರ್ಗ. ಅದೊಂದು ಅಸ್ಮಿತೆಯ ಅಭಿವ್ಯಕ್ತಿ. ತನ್ನತನದ ಹುಡುಕಾಟ. ಮುಕ್ತ ಚಿಂತನೆಗಳನ್ನು ಹೊಂದಿರುವ ಸಮಾಜದಲ್ಲಿ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ, ಗೌರವ. ಶರಣರು ಅಂಥ ಮುಕ್ತ ಸಮಾಜವನ್ನು ನಿರ್ಮಿಸಿಕೊಂಡರು. ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ಹುಟ್ಟಿಸಿದ ಹೆಗ್ಗುರುತಂತೆ ವಚನಗಳು ಮುಕ್ತ ಶೈಲಿಯಲ್ಲಿ, ಮುಕ್ತ ಕಾವ್ಯಪ್ರಕಾರದಲ್ಲಿ ಮುಕ್ತ ಚಿಂತನೆಗಳಾಗಿ ಕಾಣಿಸಿಕೊಂಡವು.

ಮಾನವ ಹಕ್ಕುಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಡಿಪಾಯ. ಅದೇ ಮಾನವನ ಅಸ್ತಿತ್ವದ ಬೇರು. ಸತ್ಯದ ತಾಯಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೆಂದರೆ ಮಾನವ ಹಕ್ಕುಗಳಿಗೆ ಅವಮಾನ ಮಾಡಿದಂತೆ. ಮಾನವನ ಅಸ್ತಿತ್ವವನ್ನೇ ನಿಗ್ರಹಿಸಿದಂತೆ. ಸತ್ಯವನ್ನು ಹತ್ತಿಕ್ಕಿದಂತೆ. ಹೀಗಾಗಿ ಬಸವಣ್ಣನವರು ಶೋಷಣೆಯ ಮೂಲಕ್ಕೆ ಕೈ ಹಾಕಿದರು. ತಮ್ಮ ಪ್ರಖರ ಮತ್ತು ಪ್ರಾಮಾಣಿಕ ಚಿಂತನೆಗಳಿಂದ ಅವುಗಳ ಅಸ್ತಿತ್ವವನ್ನೇ ಪ್ರಶ್ನಿಸಿದರು. ಆ ಮೂಲಕ ಅವುಗಳನ್ನು ಮುಂದಿಟ್ಟಕೊಂಡು ದಬ್ಟಾಳಿಕೆ ನಡೆಸುವವರನ್ನು ನಿಸ್ಸಹಾಯಕಗೊಳಿಸಿದರು. ಮುಂಬರುವ ಜನಾಂಗದ ಆಲೋಚನಾ ಕ್ರಮವನ್ನೇ ಬದಲಿಸಿದರು. ದ್ವೇಷ, ಕುತ್ಸಿತ, ಕುಹಕಗಳ ಛಾಯೆ ಕೂಡ ಇಲ್ಲದೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಗಟ್ಟಿತನ ಅವರಲ್ಲಿತ್ತು.
“”ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗವು ಮೆಚ್ಚಿ ಅಹುದಹುದೆನಬೇಕು.”
ಮಾತು, ಅಭಿವ್ಯಕ್ತಿಗೆ ಬಸವಣ್ಣನವರು ಭಾಷ್ಯ ಬರೆಯುವುದು ಹೀಗೆ. ಅಭಿವ್ಯಕ್ತಿಯ ರೂಪುರೇಷೆಗಳನ್ನಿಲ್ಲಿ ಕಟೆದು ತೋರಿಸಿದಂತೆ ಭಾಸವಾಗುತ್ತದೆ. ಮಾಣಿಕ್ಯದ ದೀಪ್ತಿಯಂತೆ ವಿಚಾರಗಳ ಕಾಂತಿಯನ್ನು ಸೂಸಬಲ್ಲ ಮಾತಿಗೆ ಸ್ಫಟಿಕದ ಸಲಾಕೆಯ ಖಾಚಿತ್ಯವಿರಬೇಕು. ಜಗದ ನ್ಯಾಯಾಧೀಶನಾದ ದೇವರ ತಲೆ ಕೂಡ ಅಂಥ ಮಾತಿಗೆ ತೂಗಬೇಕು. ಅಂದರೆ ಆ ಮೂಲಕ ಲಿಂಗ ಸ್ವರೂಪಿಯಾದ ಇಡೀ ಲೋಕದ ಮನಸ್ಸನ್ನು ಅದು ತಲುಪಿ, ಅಂತರಾತ್ಮವನ್ನು ಎಚ್ಚರಿಸುವಂತಿರಬೇಕು. ಇದು ಅಭಿವ್ಯಕ್ತಿಯ ಆಳ, ಶಕ್ತಿ ಮತ್ತು ವಿಸ್ತಾರ.

ವಿಚಾರಗಳ ಸಶಕ್ತ ಅಭಿವ್ಯಕ್ತಿಗೆ ಮಣ್ಣಿನ ಭಾಷೆಯೇ ಸರಿ. ಆಯಾ ನೆಲದ ಸಂವೇದನೆ ನೆಲದ ನೆಲೆಯಿಂದಲೇ ಚಿಗುರಬೇಕು. ಈ ಸತ್ಯ ಬಲ್ಲ ಬಸವಣ್ಣನವರು ಬುದ್ಧನಂತೆ ಜನಸಾಮಾನ್ಯರ ಆಡು  ಮಾತಿನಲ್ಲಿಯೇ ಧರ್ಮವನ್ನು ಕಟ್ಟಲು ಮುಂದಾದರು. ಮಣ್ಣಿನ ಸೊಗಡು ತುಂಬಿದ ಮಣ್ಣಿನ ಜನರ ಮಾತುಗಳಿಗೆ ಬಲ ಬಂತು. ಅದುವರೆಗೆ ಮೌನದಲ್ಲಿದ್ದ ಅವರ ಅಂತರಂಗ ಬಿಚ್ಚಿ ಕೊಂಡಿತು. ಅದುವರೆಗೆ ಹುದುಗಿ ಹೋಗಿದ್ದ ಭಾವನೆಗಳು ತೆರೆದುಕೊಂಡವು. ತಾನು ಬದಲಾಗದೆ ತನ್ನ ಸ್ಥಿತಿಗತಿಗೆ ಕಾರಣವಾದ ಸಮಾಜವನ್ನು ಬದಲಿಸುವುದು ಸಾಧ್ಯವಿಲ್ಲ. ಹೊಸ ವಿಚಾರಗಳು ಶರಣರ ಬದುಕನ್ನು ಪ್ರವೇಶಿಸುತ್ತಿದ್ದಂತೆ ಅವರ ಯೋಚನಾ ರೀತಿ, ಜೀವನ ನಡೆಸುವ ವಿಧಾನ, ಮಾತನಾಡುವ ಶೈಲಿ ಎಲ್ಲವೂ ಬದಲಾದವು.

ವೈಯಕ್ತಿಕ ಅರಿವಿನ ಜೊತೆ ಸಾಮಾಜಿಕ ಪ್ರಜ್ಞೆಯೂ ಜಾಗೃತಗೊಂಡಿತು. ಕ್ರಮೇಣ ಸಮಾಜದಲ್ಲಿ ನಿರ್ಭಯವಾಗಿ ಬದುಕುವ ಗಟ್ಟಿ ಜೀವಗಳಾದರು. ಅನುಭವ ಮಂಟಪದ ಮುಕ್ತ ಚರ್ಚೆಯ ವಾತಾವರಣ ಇತಿಹಾಸದಲ್ಲಿಯೇ ಒಂದು ಅಪೂರ್ವ ಮೈಲಿಗಲ್ಲು. ಸಂವಾದದಿಂದ ಮನಸ್ಸು ಪೂರ್ವಗ್ರಹಗಳಿಂದ ಮುಕ್ತವಾಗುತ್ತದೆ. ಅನುಭವ ಮಂಟಪದ ಚಿಂತನೆಗಳಲ್ಲಿ ಶರಣರು ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು. ಸಾಮಾಜಿಕ ಜಟಿಲತೆಗಳಿಗೆ ಮೂಲ ಮದ್ದು ಹುಡುಕುವ ಆಲೋಚನೆಗಳಲ್ಲಿ ತಾದಾತ್ಮವಾಗಿ ಪಾಲ್ಗೊಂಡರು. ಆ ಮೂಲಕ ಹಂತ ಹಂತವಾಗಿ ತಮ್ಮ ಚಿಪ್ಪಿ ನಿಂದಲೂ ಹೊರಬಂದರು.
“”ಒಬ್ಬರು ನಡೆದಾಚರಣೆಯಲ್ಲಿ ನಡೆಯರು
ಒಬ್ಬರು ಹಿಡಿದ ಶೀಲವ ಹಿಡಿಯರು
ಒಬ್ಬರು ನುಡಿದ ಭಾಷೆಯ ನುಡಿಯರು
ಅದೇನು ಕಾರಣವೆಂದಡೆ, ತಮ್ಮ ಲಿಂಗ ಮಚ್ಚು ನುಡಿವರು
ಇದು ಕಾರಣ ಅಖಂಡೇಶ್ವರಾ, ನಿಮ್ಮ ಶರಣರು
ಪರಮಸ್ವತಂತ್ರಶೀಲರು.”
ಇಲ್ಲಿ ಲಿಂಗವೆಂದರೆ ತನ್ನೊಳಗಿನ ಪ್ರಜ್ಞೆ, ಅವಿರಳ ಜ್ಞಾನ, ಅಂತರಾತ್ಮದ ದನಿ. ಅದು ಹೇಳಿದಂತೆ ಹೇಳುವ, ನಡೆಯುವ ದಿಟ್ಟತನ ತೋರಿದ ಶರಣರು ಮುಕ್ತ ಚಿಂತಕರಾಗಿದ್ದರು. ಬಸವಣ್ಣನವರು ಇವರ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ಭಿನ್ನಾಭಿಪ್ರಾಯಗಳು ವಿರೋಧಗಳನ್ನು ಸೃಷ್ಟಿಸಿ ಒಡಕುಗಳನ್ನು ಮೂಡಿಸಬಾರದು. ಒಡಕಿನಿಂದ ಕೂಡಿದ ಸಮಾಜದಲ್ಲಿ ದ್ವೇಷ ಬೂದಿ ಮುಚ್ಚಿದ ಕೆಂಡದಂತಿರುತ್ತದೆ. ಆಗ ಧರ್ಮ ಎನ್ನುವುದು ಜನರ ನಡುವೆ ಕೆಡವಲಾಗದ ಗೋಡೆಗಳನ್ನು ಕಟ್ಟುತ್ತಾ ಹೋಗುತ್ತದೆ. ಆದ್ದರಿಂದ ಜಾತಿ ಅವಮಾನಗಳಿಂದ ಭುಗಿಲೆದ್ದು ಕ್ರೋಧಗೊಳ್ಳುವ ಬದಲು ಅವನ್ನು ಮೀರಿ ನಿಲ್ಲುವುದನ್ನು ಶರಣರು ಕಲಿತರು. ಅವರು ತುಳಿದದ್ದು ಸ್ವಾಭಿಮಾನದ, ಘನತೆಯ, ಗೌರವದ ಮಾರ್ಗ.

*ಕೆ ಆರ್ ಮಂಗಳಾ

Advertisement

Udayavani is now on Telegram. Click here to join our channel and stay updated with the latest news.

Next