Advertisement

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

12:55 AM Aug 06, 2022 | Team Udayavani |

ಕುನ್ವರ್‌ ಸಿಂಗ್‌ – 1777-1858
ಬಿಹಾರದಲ್ಲಿ ನಡೆದ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದವರು ಕುನ್ವರ್‌ ಸಿಂಗ್‌. ಆಗ ಅವರಿಗೆ 80 ವರ್ಷ. ಜಗದೀಶ್‌ಪುರದ ರಾಜಮನೆತನಕ್ಕೆ ಸೇರಿದ್ದ ಅವರು, ಗೆರಿಲ್ಲಾ ಯುದ್ಧ ಮಾದರಿ ಅನುಸರಿಸುತ್ತಿದ್ದರು. ಹೀಗಾಗಿ 1858ರಲ್ಲಿ ಜಗದೀಶ್‌ಪುರದಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಂಗ್ರಾಮದಲ್ಲಿ ಅವರ ಸೇನೆ ಗೆದ್ದಿತ್ತು. ಹಾಗೆಯೇ ಜಗದೀಶ್‌ಪುರ ಕೋಟೆಯಲ್ಲಿ ತನ್ನ ರಾಜ್ಯದ ಧ್ವಜ ಹಾರಾಡಿಸಿದ್ದರು.

Advertisement

ವಾಸುದೇವ್‌ ಫಡ್ಕೆ – 1845-1883
1875ರಲ್ಲಿ ರಾಮೋಶಿ ಸಮುದಾಯದ 300 ಮಂದಿಯನ್ನು ಸೇರಿಸಿ, ಬ್ರಿಟಿಷರ ವಿರುದ್ಧ ಸಶಸ್ತ್ರ ಸೇನಾ ದಂಗೆ ಸಾರಿದ್ದರು ವಾಸುದೇವ್‌ ಬಲ್ವಂತ್‌ ಫಡ್ಕೆ. ಬ್ರಿಟಿಷ್‌ ಯೋಧರ ವಿರುದ್ಧ ಸಮರ ಸಾರಿ ಪುಣೆಯ ಪ್ರದೇಶವನ್ನು ಒಂದಷ್ಟು ದಿನಗಳ ಕಾಲ ತಮ್ಮ ಹಿಡಿತದಲ್ಲೇ ಇರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಇವರನ್ನು ಭಾರತದ ಮೊದಲ ಸಶಸ್ತ್ರ ದಂಗೆಯ ಪಿತಾಮಹ ಎಂದೇ ಕರೆಯಲಾಗುತ್ತದೆ. ಇವರು ಬ್ರಿಟಿಷರಿಂದ ಬಂಧಿತರಾಗಿ ಕಡೆಗೆ ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಕೈಗೊಂಡು ಸಾವನ್ನಪ್ಪಿದರು.

ಚಾಪೆಕರ್‌ ಸಹೋದರರು
ದಾಮೋದರ್‌ ಹರಿ(1869-1898), ಬಾಲಕೃಷ್ಣ ಹರಿ(1873-1899), ವಾಸುದೇವ್‌ ಹರಿ(1880-1899)
ಎಂಬ ಮೂವರು ಸಹೋದರರು ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಇವರು ತಮ್ಮ 20ರ ಆಸುಪಾಸಿನ ವಯಸ್ಸಿನಲ್ಲಿದ್ದಾಗಲೇ ಬ್ರಿಟಿಷ್‌ ಅಧಿಕಾರಿ ವಾಲ್ಟರ್‌ ಚಾರ್ಲ್ಸ್‌ ರ್‍ಯಾಂಡ್‌ನ‌ನ್ನು ಹತ್ಯೆ ಮಾಡಿದ್ದರು. ಈತ ಪುಣೆಯಲ್ಲಿ ಭೀಕರ ಪ್ಲೇಗ್‌ ಅಟ್ಟಹಾಸ ಮಾಡುತ್ತಿದ್ದಾಗ, ಯಾವುದೇ ಕ್ರಮ ತೆಗೆದುಕೊಳ್ಳದೇ ಜನರನ್ನೇ ಹಿಂಸೆ ಮಾಡುತ್ತಿದ್ದ. ದಾಮೋದರ್‌ ಅವರನ್ನು 1898ರ ಎಪ್ರಿಲ್‌ನಲ್ಲಿ ಮತ್ತು ಬಾಲಕೃಷ್ಣ ಹಾಗೂ ವಾಸುದೇವ್‌ ಅವರನ್ನು 1899ರಲ್ಲಿ ಬ್ರಿಟಿಷರು ನೇಣಿಗೇರಿಸಿದ್ದರು.

ನಾನಾ ಸಾಹೇಬ್‌ (1824-1859)
1857ರ ಬ್ರಿಟಿಷರ ವಿರುದ್ಧದ ದಂಗೆಯ ನೇತೃತ್ವ ವಹಿಸಿದ್ದವರು ನಾನಾ ಸಾಹೇಬ್‌. ಅಲ್ಲದೆ ಇದಾದ ಬಳಿಕ ಬ್ರಿಟಿಷರ ಮುಂದೆ ಶರಣಾಗಿದ್ದರು. ಕಾನ್ಪುರದ ಇವರು ಪೇಶ್ವಾ ಬಾಜಿ ರಾವ್‌ ಅವರ ದತ್ತು ಪುತ್ರ ಕೂಡ ಆಗಿದ್ದರು. ಆದರೆ ಬ್ರಿಟಿಷರ ವಿರುದ್ಧದ ದಂಗೆ ಅನಂತರ, ಇವರಿಗೆ ಬರುತ್ತಿದ್ದ ಪಿಂಚಣಿಯನ್ನು ನಿಲ್ಲಿಸ ಲಾಗಿತ್ತು. ಕಡೆಗೆ ಇವರು ನೇಪಾಲಕ್ಕೆ ಹೋಗಿದ್ದರು. ಅಲ್ಲೇ ನಿಧನ ಹೊಂದಿದರು ಎಂಬ ಮಾತುಗಳಿವೆ. ಆದರೂ ಇಂದಿಗೂ ಇವರ ಸಾವಿನ ಬಗ್ಗೆ ನಿಗೂಢವಿದೆ.

ವಿಷ್ಣು ಶಾಸ್ತ್ರಿ ಚಿಪ್ಳೂಣ್ಕಕರ್
(1850-1882)
1880ರಲ್ಲಿ ಇವರು ಶಾಲಾಪತ್ರಾಂಕ್‌ ಎಂಬ ಪತ್ರಿಕೆಯನ್ನು ಆರಂಭಿಸಿ, ಇದರ ಮೂಲಕ ಬ್ರಿಟಿಷರ ವಿರುದ್ಧ ಲೇಖನ ಬರೆಯುತ್ತಿದ್ದರು. ಮೂಲತಃ ಇವರು ಮರಾಠಿ ಲೇಖಕ. ಜತೆಗೆ ಗೋಪಾಲ್‌ ಗಣೇಶ್‌ ಅಗರ್ಕರ್‌ ಮತ್ತು ಬಾಲ ಗಂಗಾಧರ್‌ ತಿಲಕ್‌ ಅವರ ಜತೆಗೆ ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಕೇಸರಿ ಪತ್ರಿಕೆಯನ್ನು ಆರಂಭಿಸಿದ್ದರು. ಇವರು ಟೈಫಾಯ್ಡ ನಿಂದಾಗಿ ಮಡಿದರು.

Advertisement

ಲಾಲಾ ಲಜಪತ ರಾಯ್‌ (1865-1928)
ಬ್ರಿಟಿಷರ ಸಿಮೋನ್‌ ಆಯೋಗವನ್ನು ವಿರೋಧಿಸಿ ನಡೆದ ಅಹಿಂಸಾತ್ಮಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಭಾರತದಲ್ಲಿನ ರಾಜಕೀಯ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಲು ಈ ಆಯೋಗ ರಚಿಸಲಾಗಿದ್ದು, ಭಾರತೀಯರೇ ಇರಲಿಲ್ಲ. ಇದನ್ನು ವಿರೋಧಿಸಿ ಲಾಲಾ ಲಜಪತ ರಾವ್‌ ಲಾಹೋರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ ಬ್ರಿಟಿಷರು ನಡೆಸಿದ ಲಾಠಿಚಾರ್ಜ್‌ ನಲ್ಲಿ ಗಂಭೀರವಾಗಿ ಗಾಯಗೊಂಡ ಇವರು, 15 ದಿನಗಳ ಬಳಿಕ ಮೃತಪಟ್ಟರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next