ಮಡಿಕೇರಿ: ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಅಕ್ಟೋಬರ್‌ನಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಸಂಘಟನ ಚತುರ, ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆಯು ಆಂಧ್ರಪ್ರದೇಶದ ವಿಜಯವಾಡದಿಂದ ಹೊರಟು ಮಂಡ್ಯದ ಆದಿಚುಂಚನಗಿರಿಯ ಮೂಲಕ ರವಿವಾರ ಕೊಡಗು ಜಿಲ್ಲೆಗೆ ಆಗಮಿಸಿತು.
ಮೆರವಣಿಗೆ ಮೂಲಕ ಕುಶಾಲನಗರಕ್ಕೆ ಆಗಮಿಸಿದ ಪ್ರತಿಮೆಗೆ ಕುಶಾಲನಗರ ಗೌಡ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪುಷ್ಪನಮನದ ಮೂಲಕ ಗೌರವ ಸಲ್ಲಿಸಿದರು. ಪ್ರತಿಮೆ ಹೊತ್ತ ವಾಹನದ ಮುಂಭಾಗದಲ್ಲಿ ರಾಮಯ್ಯ ಗೌಡರ ಭಾವಚಿತ್ರದೊಂದಿಗೆ ಅಲಂಕೃತ ಬೆಳ್ಳಿರಥ ಸಾಗುತ್ತಿದೆ. ಗುಡ್ಡೆಹೊಸೂರು, ಸುಂಟಿಕೊಪ್ಪದ ಮೂಲಕ ಸಂಜೆ ಮಡಿಕೇರಿಯ ಸುದರ್ಶನ ವೃತ್ತಕ್ಕೆ ಆಗಮಿಸಿತು.
ರಾಮಯ್ಯ ಗೌಡರ ಸಹವರ್ತಿ ಸ್ವಾತಂತ್ರ್ಯ ಹೋರಾಟಗಾರ ಅಪ್ಪಯ್ಯ ಗೌಡರ ಪ್ರತಿಮೆ ಬಳಿ ನಾಡಿನ ಹಿರಿಯರು, ಜನಪ್ರತಿನಿಧಿಗಳು, ಕೆದಂಬಾಡಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಗೌರವ ಸಲ್ಲಿಸಿದರು. ಕೊಡಗು ಗೌಡ ಸಮಾಜದ ಆವರಣದಲ್ಲಿ ರಥ ತಂಗಿದ್ದು, ಆ. 29ರಂದು ಸುಳ್ಯದೆಡೆಗೆ ಸಾಗಲಿದೆ. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಸೇರಿದಂತೆ ಅನೇಕರು ಹಾಜರಿದ್ದರು.
ಆದಿಚುಂಚನಗಿರಿಯಲ್ಲಿ ಸ್ವಾಗತ
ಸುಳ್ಯ: ಮಂಡ್ಯದ ಆದಿಚುಂಚನಗಿರಿಗೆ ರವಿವಾರ ತಲುಪಿದ ಪ್ರತಿಮೆಗೆ ಭವ್ಯ ಸ್ವಾಗತ ಕೋರಲಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ ಪುರಪ್ರವೇಶಕ್ಕೆ ಚಾಲನೆ ನೀಡಿದರು.
ಪ್ರಸನ್ನನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ನಾಗಮಂಗಲ ಶಾಸಕ ಸುರೇಶ್ ಗೌಡ, ಪುತ್ತೂರು ಶಾಸಕ ಸಂಜೀವ ಮಠಂದೂರು, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾ ಪ್ರಸಾದ್ ಕೆ.ವಿ., ದ.ಕ. ಜಿಲ್ಲೆಯ ಯುವ ಒಕ್ಕಲಿಗರ ಸಂಘದ ಅಧ್ಯಕ್ಷ ಅಕ್ಷಯ್ ಕೆ.ಸಿ., ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉತ್ಸವ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಸಹಿತ ಹಲವು ಗಣ್ಯರು, ದ.ಕ. ಮತ್ತು ಕೊಡಗು ಜಿಲ್ಲೆಯ ನಾಗರಿಕರು ಉಪಸ್ಥಿತರಿದ್ದರು.
ಪ್ರತಿಮೆಯು ಮಡಿಕೇರಿಯ ಮೂಲಕ ಆ. 29ರಂದು ಬೆಳಗ್ಗೆ 9ಕ್ಕೆ ಸಂಪಾಜೆ ಗೇಟಿನ ಬಳಿಗೆ ಬರಲಿದೆ. ಅಲ್ಲಿಂದ ಅದ್ದೂರಿಯಾಗಿ ಸ್ವಾಗತಿಸಿ ಮಂಗಳೂರಿಗೆ ತರಲಾಗುವುದು.