Advertisement

ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಉಚಿತ ಚಿಕಿತ್ಸೆ

05:58 PM Apr 27, 2021 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆಯಿಂದ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತಿರುವ ಹಿನ್ನೆಲೆಯಲ್ಲಿ ಏ. 29ರಿಂದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆ ಆರಂಭಿಸಲು ಸಂಸದ ಪಿ.ಸಿ.ಗದ್ದಿಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕ ಡಾ|ವೀರಣ್ಣ ಚರಂತಿಮಠ ಅವರ ಜತೆ ಸಮಾಲೋಚನೆ ನಡೆಸಿ ನಿರ್ಧರಿಸಲಾಯಿತು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ನಗರದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆ ನೀಡಲು ತಿರ್ಮಾನಿಸಲಾಗಿದ್ದು, ಆಸ್ಪತ್ರೆಯಲ್ಲಿ 135 ಆಕ್ಸಿಜನ್‌ ಬೆಡ್‌ ಹಾಗೂ 320 ಜನರಲ್‌ ಬೆಡ್‌ ಸೇರಿ ಒಟ್ಟು 500 ಬೆಡ್‌ ಗಳ ವ್ಯವಸ್ಥೆ ಇವೆ. 15 ಸಾವಿರ ಕಿಲೋ ಲೀಟರ್‌ ಲಿಕ್ವಿಡ್‌ ಆಕ್ಸಿಜನ್‌ ಸ್ಟಾಕ್‌ ಇದ್ದು, ಪ್ರತಿದಿನ 900 ಕೆಜಿ ಸಿಲೆಂಡರ್‌ಗಳ ವ್ಯವಸ್ಥೆ, 12 ವೆಂಟಿಲೇಟರ್‌ ಇವೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಡಾ|ವೀರಣ್ಣ ಚರಂತಿಮಠ ತಿಳಿಸಿದರು.

ಕುಮಾರೇಶ್ವರ ಆಸ್ಪತ್ರೆಯಲ್ಲಿ ಸರಕಾರದಿಂದ ರೆಫರ್‌ ಮಾಡಲಾದ ಕೋವಿಡ್‌ ರೋಗಿಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ. ಆ ವೆಚ್ಚವನ್ನು ಸರಕಾರದಿಂದ ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸುವರ್ಣ ಆರೋಗ್ಯ ಟ್ರಸ್ಟ್‌ (ಎಬಿಪಿಕೆ) ಮೂಲಕ ಪಾವತಿ ಮಾಡಲಾಗುತ್ತಿದೆ. ನೇರವಾಗಿ ಕೋವಿಡ್‌ ಚಿಕಿತ್ಸೆಗೆ ಒಳಗಾದಲ್ಲಿ ಅಂತಹ ರೋಗಿಗಳಿಗೆ ಸರಕಾರ ನಿಗದಿಪಡಿಸಿದ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದನ್ನು ರೋಗಿಗಳು ಪಾವತಿ ಮಾಡಬೇಕಾಗುತ್ತದೆ ಎಂದರು.

ಕುಮಾರೇಶ್ವರ ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರ ಸಿಬ್ಬಂದಿ ನಿಯೋಜಿಸುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ತಿಳಿಸಿದರು. ಆಸ್ಪತ್ರೆಗೆ ರೋಗಿಗಳು ಬರುವ ಮುಖ್ಯದ್ವಾರದಲ್ಲಿ ಪೊಲೀಸ್‌ ಸಿಬ್ಬಂದಿ ನೇಮಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಯಿತು. ಕೋವಿಡ್‌ ಚಿಕಿತ್ಸೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಫ್ರಂಟ್‌ಲೆçನ್‌ ವರ್ಕಸ್‌ ಗಳಿಗೆ ಇನ್ಸೂರೆನ್ಸ್‌ಗೆ ಒಳಪಡಿಸಲು ಕ್ರಮ ಜರುಗಿಸುವಂತೆ ತಿಳಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಟಿ.ಭೂಬಾಲನ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎ.ಎನ್‌.ದೇಸಾಯಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಡಿ.ಬಿ.ಪಟ್ಟಣಶೆಟ್ಟಿ, ಬಿವಿವಿ ಸಂಘದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಅಶೋಕ ಮಲ್ಲಾಪುರ, ಮೆಡಿಕಲ್‌ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ ಸಜ್ಜನ ಬೇವೂರ, ವೈದ್ಯಕೀಯ ಅಧೀಕ್ಷಕಿ ಡಾ| ಭುವನೇಶ್ವರಿ, ಡಾ| ಸಾಲಿಮಠ, ಡಾ| ಮಹಾಂತೇಶ, ಆಯುವೇದಿಕ್‌ ಕಾಲೇಜಿನ ಪ್ರಾಚಾರ್ಯ ಡಾ| ದಿಲೀಪ್‌ ನಾಟಿಕಾರ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next