Advertisement

ಉಚಿತ ಸಾಧನ, ಸಲಕರಣೆ ವಿತರಣೆ

02:38 PM Jan 15, 2023 | Team Udayavani |

ಚಾಮರಾಜನಗರ: ಲೋಕಸಭಾ ಸದಸ್ಯ ವಿ. ಶ್ರೀನಿವಾಸಪ್ರಸಾದ್‌ ಅವರು ಕೇಂದ್ರ ಸರ್ಕಾರದ ವಿಶೇಷ ಆಡಿಪ್‌ ಯೋಜನೆಯಡಿ ಜಿಲ್ಲೆಯ ದಿವ್ಯಾಂಗ ಫ‌ಲಾನುಭವಿಗಳಿಗೆ ಉಚಿತ ಸಾಧನ, ಸಲಕರಣೆಗಳನ್ನು ನಗರದಲ್ಲಿ ವಿತರಣೆ ಮಾಡಿದರು.

Advertisement

ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ (ದಿವ್ಯಾಂಗಜನ್‌) ಇಲಾಖೆ, ಆರ್ಟಿಫಿಶಿಯಲ್‌ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್‌ ಕಾರ್ಫೋರೇಷನ್‌ ಆಫ್ ಇಂಡಿಯಾ (ಆಲಿಂಕೋ), ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಕಿ ಫ‌ಲಾನುಭವಿಗಳಿಗೆ ಸಾಧನಗಳನ್ನು ವಿತರಿಸಲಾಯಿತು.

ಡಿಸೆಂಬರ್‌ ತಿಂಗಳಲ್ಲಿ ಉಚಿತವಾಗಿ ವಿತರಣೆ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ 2022ರ ಜುಲೈ ತಿಂಗಳಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ನಡೆಸಿ ಗುರುತಿ ಸಲಾಗಿದ್ದ 1693 ದಿವ್ಯಾಂಗ ಫ‌ಲಾನುಭವಿಗಳಿಗೆ 1 ಕೋಟಿ 20 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸಾಧನ, ಸಲಕರಣೆಗಳನ್ನು ಡಿಸೆಂಬರ್‌ ತಿಂಗಳಲ್ಲಿ ಉಚಿತವಾಗಿ ವಿತರಿಸಲಾಗಿತ್ತು. 2ನೇ ಹಂತದ ಸಾಮಾಜಿಕ ಅಧಿಕಾರಿತಾ ಶಿಬಿರದಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್‌ ಕಾರ್ಯಕ್ರಮ ಉದ್ಘಾಟಿಸಿ, ಬಾಕಿ ಉಳಿದ ದಿವ್ಯಾಂಗರಿಗೆ ಅಗತ್ಯವುಳ್ಳ ಸಾಧನ, ಸಲಕರಣೆಗಳನ್ನು ಸಾಂಕೇತಿಕವಾಗಿ ವಿತರಿಸಿದರು.

ವಿಶಿಷ್ಟ ಕಾರ್ಯಕ್ರಮ: ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಂಗವಿಕಲತೆಯಿಂದ ಬಳಲುತ್ತಿರುವವರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ನೀಡುವ ಉದ್ದೇಶದಿಂದ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂಗವಿಕಲರಿಗೆ ಅನುಕಂಪ ನೀಡಿದರೆ ಸಾಲದು, ಆಸರೆಯಾಗಿ ನಿಲ್ಲುವ ಸದುದ್ದೇಶದಿಂದ ಕೇಂದ್ರಸರ್ಕಾರ ದೇಶದ 67 ಲೋಕಸಭಾ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ವರ್ಚುವೆಲ್‌ ಮೂಲಕ ಕಾರ್ಯಕ್ರಮ ಆಯೋಜಿಸಿದೆ ಎಂದರು.

ದಿವ್ಯಾಂಗರಲ್ಲಿ ಸಾಕಷ್ಟು ಮಂದಿ ಬಡವರಾಗಿದ್ದಾರೆ. ಅಗತ್ಯ ಸಾಧನ, ಸಲಕರಣೆಗಳನ್ನು ಕೊಳ್ಳುವ ಶಕ್ತಿ ಅವರಲ್ಲಿಲ್ಲ. ಅಂತಹವರನ್ನು ಗುರುತಿಸಿ ಉಚಿತವಾಗಿ ವಿತರಿಸುತ್ತಿರುವುದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ ಸದಸ್ಯನಾದ ನನ್ನಲ್ಲಿ ಧನ್ಯತಾಭಾವ ಮೂಡಿಸಿದೆ ಎಂದರು.

Advertisement

ಸರ್ಕಾರಗಳು ಕಾಳಜಿ ವಹಿಸಿವೆ : ಶಾಸಕ ಎನ್‌. ಮಹೇಶ್‌ ಮಾತನಾಡಿ, ಸಮಾಜದಲ್ಲಿ ದಿವ್ಯಾಂಗರು ಇತರರಂತೆ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು. ಮಾನವೀಯ ಅಂತಃಕರಣವನ್ನು ದಿವ್ಯಾಂಗರಿಗೂ ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಳಜಿ ವಹಿಸಿವೆ ಎಂದರು.

ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ಮಾತನಾಡಿ, ಕೇಂದ್ರಸರ್ಕಾರವು ದಿವ್ಯಾಂಗರಿಗೆ ವಿಶಿಷ್ಠ ಗುರುತಿನ ಚೀಟಿ ನೀಡಿ ಶೇ. 5ರಷ್ಟು ಮೀಸಲಾತಿ ಕಲ್ಪಿಸಿದೆ. ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಯುಡಿಐಡಿ ಕಾರ್ಡ್‌ ಒದಗಿಸಿದೆ. ಪ್ರತಿಯೊಬ್ಬರೂ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮನೆ ಬಾಗಿಲಿಗೆ ಸಲಕರಣೆ: ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಜಿಲ್ಲೆಯ ದಿವ್ಯಾಂಗರಿಗೆ ಸಾಧನ, ಸಲಕರಣೆಗಳನ್ನು ವಿತರಿಸಲು ನಡೆದ ಮೊದಲ ಕಾರ್ಯಕ್ರಮದಲ್ಲಿ 1500 ಮಂದಿಗೆ ವಿತರಿಸಿ ಶೇ. 92ರಷ್ಟು ಪ್ರಗತಿ ಸಾಧಿಸಿದ್ದು, ಬಾಕಿ ಉಳಿದ ದಿವ್ಯಾಂಗರಿಗೆ ಇಂದು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ವಿಶೇಷಚೇತನರು ಸಾಧನ, ಸಲಕರಣೆಯಿಂದ ವಂಚಿತರಾಗಿದ್ದರೆ, ಅವರನ್ನು ನೋಂದಣಿ ಮಾಡಿಸಿ ವೈದ್ಯಕೀಯ ತಪಾಸಣೆ ನಡೆಸಿ ಅವಶ್ಯ ಸಲಕರಣೆಗಳನ್ನು ಅವರವರ ಮನೆಗಳಿಗೆ ತಲುಪಿಸಲಾಗುವುದು ಎಂದರು.

ಗಣ್ಯರು ದಿವ್ಯಾಂಗರಿಗೆ ಸಾಧನ, ಸಲಕರಣೆಗಳನ್ನು ವಿತರಿಸಿದರು. ನಗರಸಭೆ ಅದ್ಯಕ್ಷೆ ಸಿ.ಎಂ. ಆಶಾ, ಜಿ.ಪಂ. ಸಿಇಒ ಕೆ.ಎಂ. ಗಾಯತ್ರಿ, ಎಸ್‌ಪಿ ಟಿ.ಪಿ. ಶಿವಕುಮಾರ್‌, ಉಪವಿಭಾಗಾಧಿಕಾರಿ ಗೀತಾಹುಡೇದ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗೀತಾಲಕ್ಷ್ಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ದೀಪಾ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಆಲಿಂಕೋ ಸಂಸ್ಥೆಯ ಅಧಿಕಾರಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next