Advertisement

ಹಿಂದುಳಿದ ವರ್ಗಗಳಿಗೆ ಉಚಿತ ಕೌಶಲಾಭಿವೃದ್ಧಿ ತರಬೇತಿ

12:04 AM Jul 28, 2022 | Team Udayavani |

ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಗಮಗಳು ಮತ್ತು ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಹಿಂದುಳಿದ ವರ್ಗಗಳಿಗೆ ಸೇರಿದ 25 ಸಾವಿರ ಯುವಕ/ಯುವತಿಯರಿಗೆ ಅಲ್ಪಾವಧಿ ಕೋರ್ಸ್‌ಗಳ ಮೂಲಕ ಕೌಶಲ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದ ಸಂಸ್ಥೆಗಳಾದ ಐಟಿಐ, ಜಿಟಿಟಿಸಿ, ಕೆಜಿಟಿಟಿಐಗಳಲ್ಲಿ ಉಚಿತವಾಗಿ ಕೌಶಲಾಭಿವೃದ್ಧಿ ತರಬೇತಿ ನೀಡಲು ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ ಆರಂಭಿಸಲಾಗಿದೆ.ಇದಕ್ಕಾಗಿ ಉಡುಪಿ ಜಿಲ್ಲೆಗೆ 450 ಹಾಗೂ ದ.ಕ. ಜಿಲ್ಲೆಗೆ 750 ಗುರಿ ನಿಗದಿ ಪಡಿಸಲಾಗಿದೆ.

Advertisement

ಅರ್ಹತೆ
ಅರ್ಜಿ ಸಲ್ಲಿಸಲು ಬಯಸಿರುವ ಅಭ್ಯರ್ಥಿಗಳು 10ನೇ ತರಗತಿ, ದ್ವಿತೀಯ ಪಿಯುಸಿ, ಡಿಪ್ಲೊಮಾ, ಪದವಿ, ಎಂಜಿನಿಯರಿಂಗ್‌ ವ್ಯಾಸಂಗ ಪೂರ್ಣಗೊಳಿಸಿರಬೇಕು. ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕುಟುಂಬದ ವಾರ್ಷಿಕ ವರಮಾನ, ಆದಾಯ ಮಿತಿ ಇರುವುದಿಲ್ಲ. ಪ್ರವರ್ಗ- 2ಎ, 3ಎ ಮತ್ತು 3ಬಿಗೆ ಸೇರಿದ ಅರ್ಜಿ ದಾರರ ಕುಟುಂಬದ ವಾರ್ಷಿಕ ವರಮಾನ, ಆದಾಯ 8 ಲ.ರೂ.ಗಿಂತ ಕಡಿಮೆ ಇರಬೇಕು. ಅರ್ಜಿ ದಾರರ ವಯಸ್ಸು 18ರಿಂದ 25 ವರ್ಷಗಳ ಒಳಗಿರಬೇಕು. ಅಭ್ಯರ್ಥಿಯು ಯಾವುದೇ ಉದ್ಯೋಗದಲ್ಲಿರಬಾರದು.

ಕೋರ್ಸ್‌ಗಳ ಹಂಚಿಕೆ ಹೇಗೆ?
ಅರ್ಜಿ ಸಲ್ಲಿಸುವಾಗ ಆದ್ಯತೆಯ ಸಂಸ್ಥೆ ಮತ್ತು ಕೋರ್ಸ್‌ ಆಯ್ಕೆ ಮಾಡಬಹುದು. ಅಭ್ಯರ್ಥಿ ಅಂಕಪಟ್ಟಿ ಆಧಾರದಲ್ಲಿ ಮೆರಿಟ್‌ ಪಟ್ಟಿಯನ್ನು ಸಾಫ್ಟ್ವೇರ್‌ ಸ್ವಯಂ ಆಯ್ಕೆ ಮಾಡುತ್ತದೆ. ಅರ್ಹತೆ ಹಾಗೂ ಅರ್ಜಿಯಲ್ಲಿ ನೀಡಿರುವ ಆಯ್ಕೆಯ ಆಧಾರದಲ್ಲಿ ಸೀಟು ಲಭ್ಯತೆಯನ್ನು ಪರಿಗಣನೆಗೆ ತೆಗೆದುಕೊಂಡು ಸಂಸ್ಥೆ ಮತ್ತು ಕೋರ್ಸ್‌ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು //www.kaushalkar.comಗೆ ಲಾಗಿನ್‌ ಆಗಬಹುದು. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಲಭ್ಯ ಕೋರ್ಸ್‌ಗಳು
ಬ್ಯಾಟರಿ ಎಲೆಕ್ಟ್ರಿಕ್‌ ವೆಹಿಕಲ್‌, ಆಟೋ ಎಲೆಕ್ಟ್ರಿಕ್‌ ಮೈಂಟೇನೆನ್ಸ್‌, ಅಡ್ವಾನ್ಸ್‌ ಪ್ಲಂಬಿಂಗ್‌, ಅಡ್ವಾನ್ಸ್‌ ಆಟೋಮೊಬೈಲ್‌ ಎಂಜಿನಿಯರಿಂಗ್‌, ಏರ್‌ಕಂಡಿಷನರ್‌, ರೆಫ್ರಿಜರೇಟರ್‌ ತಂತ್ರಜ್ಞಾನ, ಟ್ಯಾಲಿ ಇಆರ್‌ಪಿ, ಬೇಸಿಕ್‌ ಮೆಟ್ರೋಲಜಿ, ರೋಬೋಟ್‌ ಟೆಕ್ನೀಶಿಯನ್‌ ಸಹಿತ 80ಕ್ಕೂ ಅಧಿಕ ಕೋರ್ಸ್‌ಗಳು ಲಭ್ಯವಿವೆ. ಗರಿಷ್ಠ 24 ದಿನಗಳ ಕೋರ್ಸ್‌ ಹಾಗೂ ಕನಿಷ್ಠ 2 ದಿನಗಳ (ಗಂಟೆಯ ಲೆಕ್ಕಚಾರದಲ್ಲಿ ) ಕೋರ್ಸ್‌ಗಳು ಕೂಡ ಇರಲಿವೆ.

Advertisement

ಬೇಕಿರುವ ದಾಖಲೆಗಳು
ಆಧಾರ್‌ ಕಾರ್ಡ್‌, ಆಧಾರ್‌ ಜೋಡಣೆ ಹೊಂದಿರುವ ಮೊಬೈಲ್‌ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ, 10ನೇ ತರಗತಿ, ದ್ವಿತೀಯ ಪಿಯುಸಿ, ಡಿಪ್ಲೊಮಾ, ಪದವಿ, ಎಂಜಿನಿಯರಿಂಗ್‌ ಅಂಕಪಟ್ಟಿಗಳನ್ನು ಡಿಜಿ ಲಾಕರ್‌ನಲ್ಲಿ ಅಪ್‌ಲೋಡ್‌ ಮಾಡಿರಬೇಕು.

ಪ್ರಯೋಜನಗಳು
ಆಯ್ಕೆಯಾದವರಿಗೆ ಆಯ್ದ ತರಬೇತಿ ಸಂಸ್ಥೆಗಳಾದ ಐಟಿಐ, ಜಿಟಿಟಿಸಿ, ಕೆಟಿಟಿಐ ಮೂಲಕ ಅಲ್ಪಾವಧಿ ಕೋರ್ಸ್‌ಗಳನ್ನು ಉಚಿತವಾಗಿ ನೀಡಿ ಪ್ರಮಾಣ ಪತ್ರ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಕ್ಕಾಗಿ ಕ್ಯಾಂಪಸ್‌ ಸಂದರ್ಶನದ ವ್ಯವಸ್ಥೆ ಮಾಡಲಾಗುತ್ತದೆ.

ಆ. 29 ಕೊನೆಯ ದಿನ
ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ ಮೂಲಕ ಹಿಂದುಳಿದ ವರ್ಗಗಳಿಗೆ ಸೇರಿದ ಯುವಕ/ಯುವತಿಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಆ. 29 ಕೊನೆಯ ದಿನವಾಗಿದೆ.
– ಮಂಜು ಡಿ., ಜಿಲ್ಲಾ ವ್ಯವಸ್ಥಾಪಕರು,
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಉಡುಪಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next