Advertisement

40 ವರ್ಷದಿಂದ ಉಚಿತ ನಾಟಿ ಔಷಧ ನೀಡುವುದೇ ಕಾಯಕ!

03:46 PM Nov 07, 2022 | Team Udayavani |

ಮಂಡ್ಯ: ನಾಗರಹಾವು ಸೇರಿದಂತೆ ವಿಷಜಂತುಗಳು ಕಚ್ಚಿದರೆ ಅದರ ವಿಷವನ್ನು ನಾಟಿ ಔಷಧ ಮೂಲಕ ಪರಿಹರಿಸುವ ಮೂಲಕ ಡಿ.ಸ್ವಾಮಿ ಅವರು ಎಲೆಮರೆಕಾಯಿಯಂತೆ ಕಾಯಕ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗ್ರಾಮದ ಡಿ.ಸ್ವಾಮಣ್ಣ ನಾಟಿ ಔಷಧ ಸ್ವಾಮಣ್ಣ ಎಂದೇ ಚಿರಪರಿಚಿತರಾಗಿದ್ದಾರೆ. 17ನೇ ವಯಸ್ಸಿನಲ್ಲೇ ತಂದೆಯಿಂದ ನಾಟಿ ಔಷಧ ವಿದ್ಯೆ ಕಲಿತ ಅವರು, ಕಳೆದ 40 ವರ್ಷಗಳಿಂದ ಈ ಕಾಯಕ ಮಾಡಿಕೊಂಡು ಬಂದಿದ್ದಾರೆ.

Advertisement

ತಂದೆಯಿಂದ ಬಳುವಳಿ: ತಂದೆ ದಾಸಪ್ಪ ಅವರು ಈ ಹಿಂದಿನಿಂದಲೂ ನಾಟಿ ಔಷಧ ದಾಸಪ್ಪ ಎಂದೇ ಖ್ಯಾತಿಯಾಗಿದ್ದಾರೆ. ತಂದೆ ಕಲಿಸಿದ ವಿದ್ಯೆಯನ್ನು ಸ್ವಾಮಣ್ಣ ಮುಂದುವರಿಸಿದ್ದಾರೆ. ಅಲ್ಲದೇ, ತಾಯಿ ಅಂಕಮ್ಮ ಕೂಡ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಮಾಡಿಸುವ ಕಾಯಕ ಮಾಡುತ್ತಿದ್ದರು.

ಹಲವು ರೋಗಗಳಿಗೂ ಔಷಧ: ನಾಗರಹಾವು, ಮಂಡಲ ಹಾವು ಸೇರಿ ವಿಷಕಾರಿ ಹಾವು ಕಚ್ಚಿದರೆ ಔಷಧ ನೀಡುವುದಲ್ಲದೆ, ಇಸುಬು ರೋಗ, ವಿವಿಧ ರೀತಿಯ ಮಚ್ಚೆ, ಗಾಯಗಳಿಂದ ಉಂಟಾದ ಹಳೆಯ ಮಚ್ಚೆಗಳನ್ನೂ ಗುಣಪಡಿಸುತ್ತಾರೆ. ಮಹಿಳೆಯರಲ್ಲಿ ಹೆಚ್ಚು ಕಂಡು ಬರುವ ಮಚ್ಚೆಗಳಿಗೂ ಔಷಧ ನೀಡುತ್ತಾರೆ. ಕೈಕಾಲು ಉಳುಕಿದರೆ ಉಳುಕು ತೆಗೆಯುತ್ತಾರೆ. ಜತೆಗೆ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಕಾಯಕ ಮಾಡುತ್ತಾರೆ.

ಗಿಡಮೂಲಿಕೆ ಸಂಗ್ರಹ: ನಾಟಿ ಔಷಧ ತಯಾರಿಸಲು ಕಾಡು, ಬೆಟ್ಟಗುಡ್ಡಗಳಿಂದ ಗಿಡಮೂಲಿಕೆ ಸಂಗ್ರಹಿಸಿ ಅದನ್ನು ಒಣಗಿಸಿ ನಾಟಿ ಔಷಧ ತಯಾರಿಸುತ್ತಾರೆ. ಅದಕ್ಕಾಗಿ ಪ್ರತಿದಿನ ಗಿಡಮೂಲಿಕೆ ಸಂಗ್ರಹ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ವಾರದಲ್ಲಿ ಐದಾರು ದಿನ ರೋಗಿಗಳು ಇವರ ಬಳಿ ನಾಟಿ ಔಷಧ ಪಡೆಯುತ್ತಾ ಗುಣಮುಖರಾಗುತ್ತಿದ್ದಾರೆ.

ಉಚಿತ ಸೇವೆ: ತಂದೆಯಿಂದ ಕಲಿತ ವಿದ್ಯೆಯನ್ನು ದುಡ್ಡಿಗಾಗಿ ಮಾರಿಕೊಳ್ಳದೆ ಉಚಿತವಾಗಿ ನಾಟಿ ಔಷಧ ನೀಡುತ್ತಿದ್ದಾರೆ. ಇದುವರೆಗೂ ಸಾಕಷ್ಟು ಮಂದಿಗೆ ಔಷಧ ನೀಡಿದ್ದಾರೆ. ಗ್ರಾಮದಲ್ಲಿಯೇ 200ಕ್ಕೂ ಹೆಚ್ಚು ಮಂದಿಗೆ ಔಷಧ ನೀಡಿದ್ದಾರೆ. ಆದರೆ, ಯಾರ ಬಳಿಯೂ ಹಣ ಪಡೆಯುವುದಿಲ್ಲ. ಇವರ ನಾಟಿ ಔಷಧದಿಂದ ಗುಣಮುಖರಾಗುವ ರೋಗಿಗಳು ಮತ್ತೆ ಇವರ ಮನೆಗೆ ಭೇಟಿ ನೀಡಿ ಅಭಿನಂದಿಸಿ ಉಡುಗೊರೆ ನೀಡುತ್ತಾರೆ.

Advertisement

ಕಬ್ಬು ಕಟಾವು ಮಾಡಿ ಜೀವನ: ಸ್ವಾಮಿ ಅವರಿಗೆ ಯಾವುದೇ ಜಮೀನಿಲ್ಲ. ಕಬ್ಬು ಕಟಾವು ಮಾಡಿ ಜೀವನ ನಡೆಸುತ್ತಾರೆ. ಅವರ ಮಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳನ್ನು ಮದುವೆ ಮಾಡಿಕೊಟ್ಟಿರುವ ಅವರು, ತಮ್ಮ ಮೊಮ್ಮಕ್ಕಳಿಗೂ ನಾಟಿ ಔಷಧ ನೀಡುವ ವಿದ್ಯೆ ಕಲಿಸುತ್ತಿದ್ದಾರೆ. ಶ್ರೀರಂಗಪಟ್ಟಣದ ಬನ್ನಿಮಂಟಪ ಕಿರಂಗೂರು ಗೇಟ್‌ನಿಂದ ಪಾಂಡವಪುರಕ್ಕೆ ತೆರಳುವ ಮಾರ್ಗಮಧ್ಯೆ ಸಿಗುವ ಗ್ರಾಮದ ಬೆಣ್ಣೆ ಇಡ್ಲಿ ಶಿವಣ್ಣ ಹೋಟೆಲ್‌ನಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಬಲಭಾಗದಲ್ಲಿಯೇ ಅವರ ಮನೆ ಸಿಗುತ್ತದೆ. ನಾಟಿ ಔಷಧ ನೀಡುವ ಸ್ವಾಮಣ್ಣ ಮನೆ ಎಂದರೆ ಯಾರಾದರೂ ತೋರಿಸುತ್ತಾರೆ.

ಕಸಾಪದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಇವರ ಸೇವೆಯನ್ನು ಕೆಲವು ಸಂಘ-ಸಂಸ್ಥೆಗಳು ಗುರುತಿಸಿ ಅಭಿನಂದಿಸಿವೆ. ಇತ್ತೀಚೆಗೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ತಮ್ಮ ತಂದೆಯಿಂದ ಕಲಿತ ವಿದ್ಯೆ ಮುಂದುವರಿಸಿದ್ದೇನೆ. ಬರುವ ಎಲ್ಲಾ ವರ್ಗದ ಜನರಿಗೂ ಉಚಿತವಾಗಿ ಔಷಧ ನೀಡುತ್ತಿದ್ದೇನೆ. ಪ್ರತಿದಿನ ಮನೆ ಬಳಿ ಬರುವ ರೋಗಿಗಳಿಗೆ ಔಷಧ ನೀಡುತ್ತಿದ್ದೇನೆ. ಇದುವರೆಗೂ ಸಾಕಷ್ಟು ಮಂದಿಗೆ ನಾಟಿ ಔಷಧ ನೀಡಿದ್ದು, ಗುಣಮುಖರಾಗಿದ್ದಾರೆ. ಹಾವು ಕಚ್ಚಿದ ಯಾರೇ ಬಡವರು ಇಲ್ಲಿಗೆ ಬಂದು ನಾಟಿ ಔಷಧ ಪಡೆಯಬಹುದು. – ಡಿ.ಸ್ವಾಮಿ, ನಾಟಿ ವೈದ್ಯ, ದರಸಗುಪ್ಪೆ, ಶ್ರೀರಂಗಪಟ್ಟಣ

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next