Advertisement

ಜನಪ್ರತಿನಿಧಿಗಳ ಮೋಜಿಗೆ ಉಚಿತ ಸದಸ್ಯತ್ವದ ಬೇಡಿಕೆ

03:45 AM Feb 08, 2017 | Team Udayavani |

ವಿಧಾನಸಭೆ: ರಾಜ್ಯದಲ್ಲಿರುವ ಖಾಸಗಿ ಕ್ಲಬ್‌ಗಳಲ್ಲಿ ಶಾಸಕರು, ಸಂಸದರು ಹಾಗೂ ವಿಧಾನಪರಿಷತ್‌ ಸದಸ್ಯರಿಗೆ ಉಚಿತವಾಗಿ “ಗೌರವ ಸದಸ್ಯತ್ವ’ ಕೊಡಬೇಕು ಎಂದು ವಿಧಾನಸಭೆಯ ಕ್ಲಬ್‌ ಸದನ ಸಮಿತಿ ಶಿಫಾರಸು ಮಾಡಿದೆ.

Advertisement

ಕ್ಲಬ್‌ಗಳ ನಿಯಂತ್ರಣ ಕುರಿತು ಶಾಸಕ ಎನ್‌.ಎ.ಹ್ಯಾರಿಸ್‌ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸದನ ಸಮಿತಿ ಮಂಗಳವಾರ ಸದನದಲ್ಲಿ ವರದಿ ಮಂಡಿಸಿದೆ. ರಾಜಧಾನಿ ಬೆಂಗಳೂರಿನ ಕೆಲವು ಕ್ಲಬ್‌ಗಳಲ್ಲಿ ಸದಸ್ಯತ್ವ ಸಿಗುವುದೇ ಕಷ್ಟ. ಉಳಿದಂತೆ ಬೆಂಗಳೂರು ಸೇರಿದಂತೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿರುವ ಖಾಸಗಿ ಕ್ಲಬ್‌ಗಳಲ್ಲಿ ಸದಸ್ಯತ್ವ ಪಡೆಯಲು ಕನಿಷ್ಟ 1 ಲಕ್ಷ ರೂ.ನಿಂದ 25 ಲಕ್ಷ ರೂ.ವರೆಗೆ ಸದಸ್ಯತ್ವ ಶುಲ್ಕ ಇದೆ. ಶಾಸಕರು, ಸಂಸದರು ಹಾಗೂ ವಿಧಾನಪರಿಷತ್‌ ಸದಸ್ಯರಿಗೆ ಶುಲ್ಕ ಅನ್ವಯವಾಗಬಾರದು.

ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರಿಗೆ ಖಾಸಗಿ ಕ್ಲಬ್‌ಗಳಲ್ಲಿ ಉಚಿತ ಸದಸ್ಯತ್ವ ಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಆದೇಶ ಹೊರಡಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಗೆ ವಿಶೇಷ ಹಕ್ಕು ಮತ್ತು ವಿನಾಯಿತಿ ಇರುವ ಹಿನ್ನೆಲೆಯಲ್ಲಿ ಆಯಾ ಪ್ರದೇಶಾವಾರು ಜನಪ್ರತಿನಿಧಿಗಳು ಕ್ಲಬ್‌ಗಳಲ್ಲಿ ಸದಸ್ಯರಾಗಬಯಸಿದಲ್ಲಿ ಅಂತವರಿಗೆ ಗೌರವ ಸದಸ್ಯತ್ವ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. 

ವಿಧಾನಸಭೆಯ ಹಾಲಿ ಮತ್ತು ಮಾಜಿ ಸದಸ್ಯರ ಉಪಯೋಗಕ್ಕಾಗಿ ಸ್ಥಾಪಿಸುವ ಉದ್ದೇಶದ ಸಾಂವಿಧಾನಿಕ ಕ್ಲಬ್‌ ಆದಷ್ಟು ಶೀಘ್ರ ಕಾರ್ಯ ನಿರ್ವಹಿಸುವಂತಾಗಲು ಜಾಗ ನೀಡುವುದೂ ಸೇರಿದಂತೆ ಇತರ ಕ್ರಮ ಕೈಗೊಳ್ಳಬೇಕು. ಇದೇ ವರ್ಷದಿಂದ ಕ್ಲಬ್‌ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಬೇಕು. ಉಳಿದಂತೆ ಖಾಸಗಿ ಕ್ಲಬ್‌ ಗಳಲ್ಲಿ ಸದಸ್ಯತ್ವ ಶುಲ್ಕ ನಿಗದಿಪಡಿಸುವ ಸಂಬಂಧ  ಸರ್ಕಾರವು ಸೂಕ್ತ ಮಾನದಂಡ ಅಳವಡಿಸಬೇಕು. ಶುಲ್ಕ ನಿಗದಿ ಮುನ್ನ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು.

ಭಾರತೀಯ ಸಂಪ್ರದಾಯದ ಉಡುಪು ಧರಿಸಿ ಕ್ಲಬ್‌ಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಕ್ಲಬ್‌ಗಳನ್ನು ತೆರವಿಗೆ ಕ್ರಮ, ಯಾವ ಚಟುವಟಿಕೆಗಾಗಿ ಕ್ಲಬ್‌ ಗಳು ಮಾನ್ಯತೆ ಪಡೆದಿರುತ್ತವೆಯೋ ಅದರನ್ವಯ ಬಳಕೆಯಾಗುತ್ತಿದೆಯೇ ಎಂಬುದರ ಪರಿಶೀಲನೆಗೆ ಉಸ್ತುವಾರಿ ಸಮಿತಿ ರಚಿಸಬೇಕು. ಸದಸ್ಯತ್ವ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಸರ್ಕಾರವೇ ಮಾನದಂಡ ರೂಪಿಸಬೇಕು. ಶುಲ್ಕ ನಿಗದಿಯನ್ನು ಸರ್ಕಾರದ ಗಮನಕ್ಕೆ ತರಬೇಕು. ಈ ಎಲ್ಲಾ ವಿಚಾರಗಳನ್ನು ಕ್ಲಬ್‌ಗಳು ತಮ್ಮ ಬೈಲಾಗಳಲ್ಲಿ ಅಳವಡಿಸಿಕೊಳ್ಳಲು ಸೂಚಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

Advertisement

ಶಾಸಕರಿಗೆ ಸದಸ್ಯತ್ವ ನಿರಾಕರಣೆ
ಬೆಂಗಳೂರಿನಲ್ಲಿರುವ ಕೆಲ ಕ್ಲಬ್‌ಗಳಲ್ಲಿ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಸದಸ್ಯತ್ವಕ್ಕೆ ನಿರಾಕರಣೆ ಮತ್ತು ಸಾಂಪ್ರದಾಯಿಕ ಉಡುಪು ಧರಿಸಿದರೆ ಪ್ರವೇಶ ನಿರಾಕರಿಸಿದ್ದರಿಂದ ತೀವ್ರ ವಿವಾದ ಎದ್ದಿತ್ತು. ಇದನ್ನು ಬಗೆಹರಿಸುವ ಸಲುವಾಗಿ ಸರ್ಕಾರವೇ ಈ ಸಮಿತಿ ರಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next