Advertisement

ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಿಪಿಎಲ್ ಗ್ರಾಹಕರಿಗೆ ಉಚಿತ “ಬೆಳಕು”

06:07 PM May 13, 2022 | Team Udayavani |

ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪ್ರಮಾಣವನ್ನು 40 ಯುನಿಟ್ ನಿಂದ 75  ಯುನಿಟ್ ಗೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. ಇದರಿಂದ ಇಂಧನ ಇಲಾಖೆಗೆ ವಾರ್ಷಿಕ 979 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದ್ದು, ಇದೇ ತಿಂಗಳಿಂದ ಯೋಜನೆಯ ಲಾಭ ಫಲಾನುಭವಿಗಳಿಗೆ ಲಭ್ಯವಾಗಲಿದೆ.

Advertisement

ಇದಕ್ಕೆ ಸಂಬಂಧಪಟ್ಟ ಕಡತ ಈಗಾಗಲೇ ಹಣಕಾಸು ಇಲಾಖೆಗೆ ರವಾನೆಯಾಗಿದ್ದು, ಇನ್ನೆರಡು ದಿನದಲ್ಲಿ ಅಧಿಕೃತ ಆದೇಶ ಪ್ರಕಟವಾಗಲಿದೆ. ಆದರೆ ಇದಕ್ಕೆ ಸಂಬಂಧಪಟ್ಟ ಎಲ್ಲ ಪ್ರಕ್ರಿಯೆಗಳನ್ನು ಇಂಧನ ಇಲಾಖೆ ಪೂರ್ಣಗೊಳಿಸಿದ್ದು, ಭಾಗ್ಯಜ್ಯೋತಿ ಹಾಗೂ ಕುಟಿರ ಜ್ಯೋತಿ ಯೋಜನೆ ವ್ಯಾಪ್ತಿಯಲ್ಲಿ ಬರುವವರೂ ಸೇರಿದಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳ ಮನೆಯಲ್ಲಿ ಇನ್ನು ಮುಂದೆ ವಿದ್ಯುತ್ “ನಿರಂತರ”ವಾಗಲಿದೆ.

ಮಾಜಿ ಉಪ ಪ್ರಧಾನಿ ದಿ. ಬಾಬು ಜಗಜೀವನ್ ರಾಮ್ ಅವರ ೧೧೫ ಜಯಂತಿ ಸಮಾರಂಭದಲ್ಲಿ ಗ್ರಾಮೀಣ ಪ್ರದೇಶದ ಭಾಗ್ಯ ಜ್ಯೋತಿ ಹಾಗೂ ಕುಟಿರ ಜ್ಯೋತಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳಿಗೆ ಹಾಲಿ ಉಚಿತವಾಗಿ ನೀಡುತ್ತಿದ್ದ 40 ಯುನಿಟ್ ವಿದ್ಯುತ್ ಅನ್ನು 75 ಯುನಿಟ್ ಹೆಚ್ಚಿಸಲಾಗುವುದು ಎಂದು ಏಪ್ರೀಲ್  5 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಇಂಧನ ಇಲಾಖೆಗೆ ಕಡತ ರವಾನೆಯಾಗಿತ್ತು.

ಇದನ್ನೂ ಓದಿ :  ಆ್ಯಸಿಡ್ ದಾಳಿಕೋರ ನಾಗೇಶ್‌ ಕೊನೆಗೂ ಅರೆಸ್ಟ್: ಸ್ವಾಮೀಜಿಯಂತೆ ವೇಷ ಧರಿಸಿದ್ದ!

ಇದಕ್ಕೆ ತಕ್ಷಣ ಸ್ಪಂದಿಸಿರುವ ಇಂಧನ ಸಚಿವ ವಿ.ಸುನೀಲ್ ಕುಮಾರ್ ಉಚಿತ ವಿದ್ಯುತ್ ಪ್ರಮಾಣ ಹೆಚ್ಚಳಕ್ಕೆ ಸೂಚಿಸಿದ್ದರು.  ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಂಡಿರುವ ಇಂಧನ ಇಲಾಖೆ ಕೇವಲ ಒಂದು ತಿಂಗಳ ಅವಧಿಯಲ್ಲೇ ಕ್ರಮ ತೆಗೆದುಕೊಂಡಿದೆ.

Advertisement

ರಾಜ್ಯದಲ್ಲಿ 75 ಯುನಿಟ್ ಒಳಗೆ ವಿದ್ಯುತ್ ಬಳಸುವ ಗೃಹ ಬಳಕೆದಾರರ ಸಂಖ್ಯೆ 1,46,65,910 ರಷ್ಟು ಇದೆ. ಈ ಪೈಕಿ ಭಾಗ್ಯ ಜ್ಯೋತಿ ಹಾಗೂ ಕುಟಿರ ಜ್ಯೋತಿ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಳಕೆದಾರರ ಸಂಖ್ಯೆ 39,26,065 ರಷ್ಟು ಇದೆ. ಈ ಗ್ರಾಹಕರು ವಾರ್ಷಿಕ 1,356,92  ಮಿಲಿಯನ್ ಯುನಿಟ್ ಬಳಕೆ ಮಾಡುತ್ತಾರೆ. ಒಟ್ಟಾರೆಯಾಗಿ ಈ ಯೋಜನೆಯ ಫಲಾನುಭವಿಗಳನ್ನೂ ಒಳಗೊಂಡಂತೆ ಪರಿಶಿಷ್ಟ ಜಾತಿಯ ಗ್ರಾಹಕರಿಗೆ 694.15 ಕೋಟಿ ರೂ, ಪರಿಶಿಷ್ಟ ಪಂಗಡದ ಗ್ರಾಹಕರಿಗೆ 285.42  ಕೋಟಿ ರೂ. ಸೇರಿದಂತೆ 979 ಕೋಟಿ ರೂ.ನ್ನು ಸಬ್ಸಿಡಿ ರೂಪದಲ್ಲಿ ಇಂಧನ ಇಲಾಖೆ ನೀಡಲಿದೆ.

ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ನಿಯಮಾವಳಿ ರೂಪಿಸಿ ಆರ್ಥಿಕ ಇಲಾಖೆಗೆ ಕಳುಹಿಸಿಕೊಟ್ಟಿದೆ.  ಒಟ್ಟಾರೆಯಾಗಿ ಈ ಸಬ್ಸಿಡಿ ಯೋಜನೆಗೆ 979  ಕೋಟಿ ರೂ. ಹೆಚ್ಚುವರಿ ಸಹಾಯಧನ ಅಗತ್ಯವಾಗಿದ್ದು, 75 ಯುನಿಟ್ ವರೆಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತದೆ. ಈ ವ್ಯವಸ್ಥೆ ಮೇ 1 ರಿಂದಲೇ ಜಾರಿಗೆ ಬರಲಿದೆ. ಈ ಪ್ರವರ್ಗದ ಗ್ರಾಹಕರಿಗೆ ಮಾಪಕ ವ್ಯವಸ್ಥೆ ಕಡ್ಡಾಯವಾಗಿರಲಿದೆ. ಯೋಜನೆ ವ್ಯಾಪ್ತಿಗೆ ಬರಲು ಇಲಾಖೆ ನಿಯಮಗಳನ್ನು ರೂಪಿಸಿದ್ದು, ಏಪ್ರೀಲ್ ಅಂತ್ಯದೊಳಗಾಗಿ ಬಾಕಿ ವಿದ್ಯುತ್ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಿರಬೇಕಾಗುತ್ತದೆ. ನೇರ ನಗದು ವರ್ಗಾವಣೆ ಮೂಲಕ ಸಹಾಯಧನ ನೀಡುವುದರಿಂದ ಗ್ರಾಹಕರು ತಮ್ಮ ಬ್ಯಾಂಕ್ ಪಾಸ್ ಬುಕ್ ಅನ್ನು ದಾಖಲೆಯ ಜತೆಗೆ ಅಡಕಗೊಳಿಸಬೇಕಾಗುತ್ತದೆ.

ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ ಸಂರ‍್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಕಲ್ಯಾಣ ಯೋಜನೆಗಳ ಜಾರಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದೆಂಬ ಕಾರಣಕ್ಕೆ ಕೇವಲ ಒಂದೇ ತಿಂಗಳಲ್ಲಿ ಸೂಕ್ತ ಪ್ರಕ್ರಿಯೆ ಪರ‍್ಣಗೊಳಿಸಲಾಗಿದ್ದು, ಇದೇ ತಿಂಗಳಿಂದ ಅನ್ವಯವಾಗುವಂತೆ ಯೋಜನೆ ಜಾರಿಗೊಳಿಸುತ್ತೇವೆ.
ವಿ.ಸುನೀಲ್ ಕುಮಾರ್, ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next