Advertisement

ಬಡವರಿಗೆ ಉಚಿತ ಕಾನೂನು ಸಲಹೆ

03:32 PM Nov 30, 2017 | |

ಹಾವೇರಿ: ಸಾರ್ವಜನಿಕರು ತಮ್ಮ ಹಕ್ಕು ಬಾಧ್ಯತೆಗಳಿಗೆ ಯಾವುದೇ ತೊಂದರೆಯಾದರೆ ಪ್ರಾಧಿಕಾರಿಗಳಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳಿಗೆ ಕಾನೂನು ರೀತಿ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಎಸ್‌.ವಿ. ಕುಲಕರ್ಣಿ ಹೇಳಿದರು.

Advertisement

ನಗರದ ಇಜಾರಿಲಕಮಾಪುರದಲ್ಲಿ ಬಾಲಕಿಯರ ಸರ್ಕಾರಿ ಪಪೂ ವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ವಿದ್ಯಾಲಯದ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ಜನಾಂಗದವರು ತಮ್ಮ ಕಾನೂನಾತ್ಮಕ ಸಮಸ್ಯೆಗಳಿಗೆ ಉಚಿತ ಸಲಹೆಯನ್ನು  ಸಹ ಪಡೆದುಕೊಳ್ಳಬಹುದು. ಪ್ರಾಧಿಕಾರದಲ್ಲಿ ಸದಸ್ಯ ಕಾರ್ಯದರ್ಶಿಗಳು ಹಾಗೂ ನುರಿತ ತಜ್ಞರ ತಂಡ ಕಾನೂನಾತ್ಮಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಸಾರ್ವಜನಿಕರಿಗೆ ಉಚಿತ ಸೇವೆ ಮತ್ತು ಸಹಾಯವನ್ನು ನೀಡುತ್ತಾರೆ ಎಂದರು.

27-11-1949 ರಂದು ಸಂವಿಧಾನ ಅಂಗೀಕಾರವಾದ ಅಂಗವಾಗಿ ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ. 2015ರ ಪೂರ್ವದಲ್ಲಿ ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು. 2015ರಿಂದ ಸಂವಿಧಾನ ದಿನವೆಂದು ಆಚರಿಸಲಾಗುತ್ತಿದೆ ಎಂದರು. ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವೈ.ಎಲ್‌. ಲಾಡಖಾನ್‌ ಮಾತನಾಡಿ, ಭಾರತದ ಪ್ರಜೆಗಳಾದ ನಾವು ಹಕ್ಕು ಮತ್ತು ಬಾಧ್ಯತೆಗಳ ಬಗ್ಗೆ ಪೂರ್ಣ ಪ್ರಮಾಣದ ಜ್ಞಾನವನ್ನು ಪಡೆದುಕೊಳ್ಳಬೇಕು. ಹೆಣ್ಣು ಮತ್ತು ಗಂಡು ಎಂಬ ಭೇದಭಾವಗಳನ್ನು ತೊರೆದು ಎಲ್ಲರೂ ಸತ್ಪಜೆಗಳಾಗಬೇಕು. ಯಾರಿಗಾದರೂ ಕಾನೂನಾತ್ಮಕ ಸಮಸ್ಯೆಗಳಿದ್ದರೆ ಕೂಡಲೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯನ್ನು ಸಂಪರ್ಕಿಸಿ ತಮ್ಮ ಕಾನೂನು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು ಎಂದರು.

ಬಡವರು, ಆರ್ಥಿಕವಾಗಿ ಹಿಂದುಳಿದವರು, ಎಸ್‌ಸಿ, ಎಸ್‌ಟಿ ಜನಾಂಗದವರು, ಮಹಿಳೆಯರು ಹಾಗೂ ಇತರರೂ ಉಚಿತ ಕಾನೂನು ಸೇವೆಗಳ ಸೌಲಭ್ಯಗಳನ್ನು ಪಡೆದುಕೊಂಡು ಕಾನೂನಾತ್ಮಕ ಸಮಸ್ಯೆಗಳಿಂದ ಹೊರಬರಬೇಕು ಎಂದರು. ಉಪನ್ಯಾಸಕ ರಾಜು, ವಕೀಲರಾದ ಐ.ಐ. ಚನ್ನಪಟ್ಟಣ, ನಗರ ಠಾಣೆ ಪಿಎಸ್‌ಐ ಮಹಾಂತೇಶ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಶಿವಪ್ಪ ಎನ್‌. ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಅಭಿಯೋಜಕ ಸಿದ್ಧಾರೂಢ ಗೆಜ್ಜಿಹಳ್ಳಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ನೀರಲಗಿ, ಪ್ರಧಾನ ಕಾರ್ಯದರ್ಶಿ ಡಿ.ಎನ್‌. ನಾಯ್ಡು, ಬಿಇಒ ಸುರೇಶ ಹುಗ್ಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next