Advertisement

ಸಾವಿರಾರು ರೋಗಿಗಳಿಗೆ ಉಚಿತ ಆರೋಗ್ಯದಾನ 

06:18 AM Jan 04, 2019 | |

ನೆಲ್ಯಾಡಿ : ಪುತ್ತೂರು ಸಮೀಪದ ಮಿತ್ತೂರಿನಲ್ಲಿ ದಶಕಗಳಿಂದ ಸಾವಿರಾರು ಮಂದಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದ್ದ ಮಿತ್ತೂರು ಸುಬ್ರಹ್ಮಣ್ಯ ಭಟ್‌ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.  600ಕ್ಕಿಂತಲೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿ ಆ ಮೂಲಕ ಸಾವಿರಾರು ಜನರು ಉಚಿತ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. 100ಕ್ಕೂ ಅಧಿಕ ಗಣ್ಯರು, ಸ್ವಾಮೀಜಿಗಳು ಮಾತ್ರವಲ್ಲದೆ ಹಲವು ವೈದ್ಯರು ಕೂಡ ಇವರಿಂದ ಉಚಿತ ಆರೋಗ್ಯ ಸೇವೆಯನ್ನು ಪಡೆದುಕೊಂಡು ರೋಗದಿಂದ ಮುಕ್ತಿ ಗಳಿಸಿಕೊಂಡಿದ್ದಾರೆ.

Advertisement

ಸ್ವಯಂ ಚಿಕಿತ್ಸೆ ಕಲಿಸುತ್ತಾರೆ
ಪುತ್ತೂರಿನಿಂದ 8 ಕಿ.ಮೀ. ದೂರದ ಮಿತ್ತೂರಿಲ್ಲಿ ತಮ್ಮ ಹಳೆಯ ವಿಶಾಲ ಮನೆಯನ್ನೇ ರೋಗಿಗಳ ಚಿಕಿತ್ಸೆಗಾಗಿ ಅವರು ಮೀಸಲಿಟ್ಟಿದ್ದಾರೆ. ದೂರದಿಂದ ಬರುವವರಿಗೆ ರಾತ್ರಿ ತಂಗಲು ವ್ಯವಸ್ಥೆಯನ್ನೂ ಮಾಡಿದ್ದಾರೆ. ಕೆಲವು ಕಾಯಿಲೆಗಳಿಗೆ ನಿರ್ದಿಷ್ಟ ಬಿಂದುವನ್ನು ಗುರುತಿಸಿ ರೋಗಿಗಳೇ ಸ್ವತಃ ಒತ್ತುವ (ಅಕ್ಯುಪ್ರಷರ್‌) ವಿಧಾನವನ್ನು ತಿಳಿಸಿಕೊಡುತ್ತಾರೆ. ಗೊತ್ತುಪಡಿಸಿದ ನಿರ್ದಿಷ್ಟ ಬಿಂದುವನ್ನು ತಾವು ಸೂಚಿಸಿದಂತೆ ಒತ್ತುತ್ತಾ ಇದ್ದಲ್ಲಿ ಕೆಲವು ದಿನಗಳೊಳಗೆ ಕಾಯಿಲೆ ಪೂರ್ತಿ ನಿವಾರಣೆಯಾಗುತ್ತದೆ ಎಂದು ಭಟ್‌ ಹೇಳುತ್ತಾರೆ.

ಕ್ಯಾನ್ಸರ್‌ ಕೂಡ ಗುಣಮುಖ!
ಹೃದಯ, ಕ್ಯಾನ್ಸರ್‌ನಂತಹ ಕಾಯಿಲೆಗಳೂ ತಾವು ಸೂಚಿಸಿದ ರೀತಿಯಲ್ಲಿ ಅನುಸರಿಸಿದರೆ ಪೂರ್ತಿ ವಾಸಿಯಾಗುತ್ತವೆ. ಇದಕ್ಕೆ ಇಲ್ಲಿ ಚಿಕಿತ್ಸೆ ಹೊಂದಿ ಗುಣಮುಖರಾದ ಸಾವಿರಾರು ರೋಗಿಗಳೇ ಸಾಕ್ಷಿ.

ಅಡ್ಡಪರಿಣಾಮ ಭೀತಿಯಿಲ್ಲ
ಅಕ್ಯುಪ್ರಷರ್‌, ಸುಜೋಕು, ನಾಡಿ ಶೋಧನೆ, ಹಾಗೂ ಸಾಯಿ ವೈಬ್ರೋ ಚಿಕಿತ್ಸಾ ಪದ್ಧತಿಯ ಮೂಲಕ ರೋಗ ಪತ್ತೆ ಹಚ್ಚಿ ಕಾಯಿಲೆ ಗುಣಪಡಿಸುವುದು ಇವರ ವಿಶೇಷ ಸಾಧನೆ. ಅದರೊಂದಿಗೆ ಕೆಲ ಸಣ್ಣ ಪುಟ್ಟ ಕಾಯಿಲೆಗಳಿಗೆ ಮನೆಯಲ್ಲಿಯೇ ಯಾವುದೇ ವೆಚ್ಚವಿಲ್ಲದೇ ತಾವೇ ತಯಾರಿಸಿಕೊಳ್ಳಬಹುದಾದ ಮದ್ದನ್ನೂ ಅವರು ತಿಳಿಸಿಕೊಡುತ್ತಾರೆ. ಈ ಚಿಕಿತ್ಸಾ ಪದ್ಧತಿಯಲ್ಲಿ ಯಾವುದೇ ಔಷಧಗಳು ಇಲ್ಲದ ಕಾರಣ ಅಡ್ಡಪರಿಣಾಮದ ಭೀತಿಯೂ ಇಲ್ಲವೆನ್ನುತ್ತಾರೆ ಡಾ| ಭಟ್‌.

ಹಲವಾರು ಪ್ರಶಸ್ತಿ
ಕೃಷಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಡಾ| ಸುಬ್ರಹ್ಮಣ್ಯ ಭಟ್‌ ಅವರ ಸೇವೆಯನ್ನು ಗುರುತಿಸಿ ವರ್ಚುಯಲ್‌ ವಿಶ್ವವಿದ್ಯಾಲಯವು ಗೌರವ ಡಾಕ್ಟರೆಟ್‌ ಅನ್ನು ಪ್ರದಾನ ಮಾಡಿದೆ. ಇದರೊಂದಿಗೆ ಹಲವು ಪ್ರಶಸ್ತಿಗಳೂ ಅವರನ್ನು ಅರಸಿಕೊಂಡು ಬಂದಿವೆ.

Advertisement

ಗುಣಪಡಿಸುವುದು ದೇವರು!
ಸಾವಿರಾರು ರೋಗಿಗಳ ಪಾಲಿಗೆ ಧನ್ವಂತರಿಯಾಗಿ ಉಚಿತ ಚಿಕಿತ್ಸೆ ನೀಡಿ ಗುಣಪಡಿಸಿದರೂ ‘ಎಲ್ಲರಲ್ಲೂ ಗುಣಪಡಿಸುವುದು ನಾನಲ್ಲ. ಆ ದೇವರು’ ಎಂದು ಹೇಳುವ ಭಟ್‌, ರೋಗಿಗಳು ಕುಳಿತುಕೊಳ್ಳುವ ಹಾಲ್‌ನಲ್ಲೇ ಈ ಫ‌ಲಕವನ್ನು ಅಳವಡಿಸಿದ್ದಾರೆ.

 ಗುರುಮೂರ್ತಿ ಎಸ್‌. ಕೊಕ್ಕಡ

Advertisement

Udayavani is now on Telegram. Click here to join our channel and stay updated with the latest news.

Next