ಚಿಕ್ಕಮಗಳೂರು: ಸರಕಾರಿ ಬಸ್ಸಿನಲ್ಲಿ ಶೋಭಾ ಕರಂದ್ಲಾಜೆ ಅವರಿಗೂ ಫ್ರೀ ಎಂಬ ಕಾಂಗ್ರೆಸ್ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶನಿವಾರ ಗರಂ ಆಗಿದ್ದು, ಹೆಣ್ಮಕ್ಕಳಿಗೆ ಕೊಟ್ಟಿರುವುದು ಖುಷಿಯಾಗಿದೆ, ಒಳ್ಳೆಯದಾಗಲಿ. ಪ್ರವಾಸ ಮಾಡಬಹುದು, ಬೇರೆ ಕಡೆ ಹೋಗಬಹುದು.ಆದರೆ ಶೋಭನಿಗೂ ಫ್ರೀ ಎಂಬ ದುರಾಂಕಾರದ ಮಾತನ್ನ ಕಾಂಗ್ರೆಸ್ ಹೇಳುತ್ತದೆ, ಇದಕ್ಕೆ ಜನರೇ ಉತ್ತರ ಕೊಡುತ್ತಾರೆ. ನಾನೇನೂ ಹೇಳಲ್ಲ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ”ಪಠ್ಯ ಪುಸ್ತಕದಲ್ಲಿ ನಮ್ಮ ಮಕ್ಕಳು ಏನು ಕಲಿಯಬೇಕೆಂದು ನಾವೇ ನಿರ್ಧಾರ ಮಾಡಬೇಕು. ಅವರ ಬೆಳವಣಿಗೆ ಪ್ರಗತಿ, ಅಭ್ಯುದಯಕ್ಕೆ ಚರಿತ್ರೆ ತಿಳಿದುಕೊಳ್ಳಬೇಕು. ನಮ್ಮ ದೇಶವನ್ನು ತಿಳಿದುಕೊಳ್ಳಲು ಏನು ಕಲಿಸಬೇಕು ಅದೇ ಆಧಾರದಲ್ಲಿ ಕಲಿಸಬೇಕು. ಪಠ್ಯ ಪುಸ್ತಕ ಅನ್ನೋದು ಪಾರ್ಟಿ, ಜಾತಿ, ಧರ್ಮದ ವಿಚಾರವಲ್ಲ. ನಾವು ಸಂವಿಧಾನ್ಮಕವಾಗಿ ಏನನ್ನ ಒಪ್ಪಿಕೊಂಡಿದ್ದೇವೋ, ಅದನ್ನೇ ಕಲಿಯುವಂತಹ ಅವಕಾಶವಾಗಬೇಕು.ಒಂದು ಸರ್ಕಾರ ಬಂದಾಗ ಒಂದು ಪಠ್ಯ, ಇನ್ನೊಂದು ಸರ್ಕಾರ ಬಂದಾಗ ಮತ್ತೊಂದು ಪಠ್ಯ ಸರಿಯಲ್ಲ” ಎಂದು ಕಿಡಿ ಕಾರಿದರು.
”ನಮ್ಮ ದೇಶ ಭಕ್ತರ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ, ನಮ್ಮ ಸಂಸ್ಕೃತಿಯ ಬಗ್ಗೆ ಕಲಿಸುವ ಅನಿವಾರ್ಯತೆ ಇದೆ. ಈ ದೃಷ್ಟಿಯಿಂದ ರಾಜ್ಯ ಸರ್ಕಾರ ಯೋಚನೆ ಮಾಡಲಿ. ಕಾಂಗ್ರೆಸ್ ಪಠ್ಯ, ಬಿಜೆಪಿಯ ಪಠ್ಯ ಅನ್ನೋದಕ್ಕಿಂತ ಹೆಚ್ಚು ನಮ್ಮ ಮಕ್ಕಳು ಏನನ್ನ ಕಲಿಯಬೇಕು. ಮುಂದಿನ ಪೀಳಿಗೆ ಎಲ್ಲಿಗೆ ಹೋಗಬೇಕು, ಏನಾಗಬೇಕು ಇದರ ಆಧಾರದಲ್ಲಿ ಪಠ್ಯ ಕೊಡುವುದು ಒಳ್ಳೆಯದು” ಎಂದರು.