Advertisement

ಎಸ್ಸಿ, ಎಸ್ಟಿಯವರಿಗೆ ಉಚಿತ ವಿದ್ಯುತ್‌ ಪೂರೈಕೆಗೆ ತೊಡಕು

12:31 PM Sep 06, 2022 | Team Udayavani |

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ “ರೈತ ವಿದ್ಯಾನಿಧಿ’ ಅನುಷ್ಠಾನದ ಆರಂಭಿಕ ದಿನಗಳಲ್ಲಿ ಎದುರಾದ ಫ‌ಲಾನುಭವಿಗಳ ಆಯ್ಕೆ ಸಮಸ್ಯೆ ಮತ್ತೂಂದು ಬಹುನಿರೀಕ್ಷಿತ “ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಾಸಿಕ 75 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ಪೂರೈಕೆ’ ಯೋಜನೆಯಲ್ಲೂ ಎದುರಾಗಿದೆ.

Advertisement

ಇದರಿಂದ ಒಂದೆಡೆ ಯೋಜನೆ ಅನುಷ್ಠಾನವು ಅಧಿಕಾರಿಗಳಿಗೆ ಸವಾಲಾಗಿದ್ದರೆ, ಮತ್ತೂಂದೆಡೆ ಘೋಷಣೆಯಾಗಿ ತಿಂಗಳುಗಳು ಕಳೆದರೂ ಫ‌ಲಾನುಭವಿಗಳಿಗೆ ಅದರ ಲಾಭ ಮರೀಚಿಕೆಯಾಗಿದೆ. ತೊಡಕಾದ ತಾಂತ್ರಿಕ ಕಾರಣಗಳಿಂದಾಗಿಯೇ ಆದೇಶ ಬರೀ “ಪರಿಷ್ಕರಣೆ’ಗೆ ಸೀಮಿತಗೊಳ್ಳುತ್ತಿದೆ.

ಸಾಮಾನ್ಯವಾಗಿ ಬಡತನ ರೇಖೆಗಿಂತ ಕೆಳಗಿನವರ ಲೆಕ್ಕ ಸರ್ಕಾರದ ಬಳಿಯೇ ಇರುತ್ತದೆ. ಅದನ್ನು ಆಧರಿಸಿಯೇ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಯೋಜನೆ ಅನುಷ್ಠಾನಗೊಳಿ ಸಲಾಗಿದೆ. ಆದರೆ, ಈಚೆಗೆ ಘೋಷಿಸಲ್ಪಟ್ಟ ಉದ್ದೇಶಿತ ಯೋಜನೆ ಅಡಿ ಬರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡತನರೇಖೆಗಿಂತ ಕೆಳಗಿರುವ ಅರ್ಹ ಫ‌ಲಾನುಭವಿಗಳನ್ನು ವರ್ಗೀಕರಿಸಬೇಕಾಗಿದೆ. ಈ ವರ್ಗದ ಗ್ರಾಹಕರನ್ನು ಪ್ರತ್ಯೇಕಿಸುವುದು ಸವಾಲಾಗಿದೆ.

ಸಮಸ್ಯೆ ಏನು?: ಪರಿಶಿಷ್ಟ ಜಾತಿ ಮತ್ತು ಪಂಗಡದ ಬಳಕೆದಾರರನ್ನು ವರ್ಗೀಕರಿಸುವ ಕೆಲಸ ಸಮಾಜ ಕಲ್ಯಾಣ ಇಲಾಖೆ ಮಾಡಬೇಕಾ ಗುತ್ತದೆ. ಒಂದು ವೇಳೆ ಅದರ ಪಟ್ಟಿ ಮಾಡಿದರೂ, ಅವರಲ್ಲಿ ಬಡತನ ರೇಖೆಗಿಂತ ಕೆಳಗಿನವರು ಯಾರೆಂಬುದನ್ನು ಪ್ರತ್ಯೇಕಿಸಬೇಕಾಗುತ್ತದೆ. ಇದು ಸಾಧ್ಯವಾದರೂ ಮನೆ ಮಾಲೀಕತ್ವ ಆ ಫ‌ಲಾನು ಭವಿ ಹೆಸರಿನಲ್ಲಿ ಇರಬೇಕಾಗುತ್ತದೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಇದರಲ್ಲಿ ಹೊಂದಾಣಿಕೆ ಕಂಡುಬರುತ್ತಿಲ್ಲ. ಇಂತಹ ಹಲವಾರು ಗೊಂದಲ ಗಳಿಂದ ಯೋಜನೆ ಅನುಷ್ಠಾನ ಕಷ್ಟವಾಗುತ್ತಿದೆ (ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದ ಆರಂ ಭಿಕ ದಿನಗಳಲ್ಲೂ ಈ ಸಮಸ್ಯೆ ಎದುರಾಗಿತ್ತು). ಇದೇ ಕಾರಣಕ್ಕೆ ಹಲವು ಬಾರಿ ಆದೇಶ ಪರಿಷ್ಕರಿಸಿ ಹೊರಡಿಸಲಾಗಿದೆ. ಆದಾಗ್ಯೂ ಕಗ್ಗಂಟಾಗುತ್ತಿದೆ ಎಂದು ಇಂಧನ ಇಲಾಖೆ ಉನ್ನತ ಅಧಿಕಾರಿ ಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಯೋಜನೆಯ ಫ‌ಲಾನುಭವಿಗಳಾಗಲು ಜಾತಿ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಅದನ್ನು ಆಯಾ ತಾಲೂಕು ತಹಶೀಲ್ದಾರರಿಂದ ಪಡೆಯಬೇಕಾಗುತ್ತದೆ. ಜಾತಿ ಪ್ರಮಾಣಪತ್ರ ಪಡೆದರೂ ಆರ್‌.ಆರ್‌. ನಂಬರ್‌ ಫ‌ಲಾನುಭವಿ ಹೆಸರಿನಲ್ಲಿ ಇರುವುದಿಲ್ಲ. ಇದು ಅನುಷ್ಠಾನದ ವೇಳೆ ಕಂಡುಬಂದಿದೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಹೇಳುವುದಾದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಬರುವ ಬಹುತೇಕ ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಂತೂ ಶೇ. 80ರಷ್ಟು ಜನ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ. ಅಂತಹವರು ವಾಸ್ತವವಾಗಿ ಯೋಜನೆಗೆ ಅರ್ಹರಾಗಿದ್ದರೂ, ನಿಯಮಗಳ ಪ್ರಕಾರ ಸೌಲಭ್ಯ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

Advertisement

ಖಾತೆ ಹೊಂದಿರಬೇಕು; ಆಧಾರ್‌ ಲಿಂಕ್‌ ಆಗಿರಬೇಕು : ಯೋಜನೆ ಅಡಿ ಫ‌ಲಾನುಭವಿಗೆ ನೇರ ಹಣ ವರ್ಗಾವಣೆ ಮಾಡಲಾಗುತ್ತದೆ. ಒಂದು ವೇಳೆ ಜಾತಿ ಪ್ರಮಾಣಪತ್ರ ಹಾಗೂ ಆರ್‌.ಆರ್‌. ನಂಬರ್‌ ಹೊಂದಿಕೆಯಾದರೂ, ಕೆಲವು ಸಲ ಆ ಫ‌ಲಾನುಭವಿಯ ಬ್ಯಾಂಕ್‌ ಖಾತೆ ಇರುವುದಿಲ್ಲ. ಕೆಲ ಪ್ರಕರಣಗಳಲ್ಲಿ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ನಂಬರ್‌ ಜೋಡಣೆ ಆಗಿರುವುದಿಲ್ಲ. ಇದೆಲ್ಲವೂ ಸರಿಯಾಗಿದ್ದರೂ ಸ್ಥಿತಿವಂತನಾಗಿದ್ದು ಬಿಪಿಎಲ್‌ ಕಾರ್ಡ್‌ ಹೊಂದಿದವರನ್ನೂ ಕಾಣುತ್ತಿದ್ದೇವೆ. ಹಾಗಾಗಿ, ಇಂತಹ ಹಲವು ತಾಂತ್ರಿಕ ತೊಂದರೆಗಳು ಅನುಷ್ಠಾನದ ವೇಳೆ ಕಂಡುಬರುತ್ತಿವೆ. ಈ ಸಂಬಂಧ ಮತ್ತಷ್ಟು ಸ್ಪಷ್ಟೀಕರಣ ಕೇಳಲಾಗುತ್ತಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದರು.  “ಸಮಾಜ ಕಲ್ಯಾಣ ಇಲಾಖೆ ಸಹಕಾರ ಈ ನಿಟ್ಟಿನಲ್ಲಿ ಅಗತ್ಯವಾಗಿದೆ. ಜತೆಗೆ ಫ‌ಲಾನುಭವಿಗಳ ವಾಸಸ್ಥಳಕ್ಕೆ ಖುದ್ದು ವಿದ್ಯುತ್‌ ಸರಬರಾಜು ಕಂಪನಿ (ಎಸ್ಕಾಂ)ಯ ಸಿಬ್ಬಂದಿ ಭೇಟಿ ನೀಡಿ, ವಿಡಿಯೋ ಚಿತ್ರೀಕರಣ ಮಾಡಿ ಅವರ ಸ್ಥಿತಿಗತಿಯನ್ನು ಖಾತ್ರಿಪಡಿಸಿಕೊಳ್ಳಬೇಕು. ಅದನ್ನು ಆಧರಿಸಿ ಫ‌ಲಾನುಭವಿಗಳ ಆಯ್ಕೆ ಮಾಡುವುದು ಹೆಚ್ಚು ಸೂಕ್ತ’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next