ಮುದ್ದೇಬಿಹಾಳ: ಕೊರೊನಾ ಎರಡನೇ ಅಲೆಯಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ಕುಟುಂಬದವರ ಮಕ್ಕಳಿಗೆ ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ 2021-22ನೇ ಸಾಲಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲು ಇಲ್ಲಿನ ಅಹಿಲ್ಯಾದೇವಿ ಹೋಳ್ಕರ್ ಶೈಕ್ಷಣಿಕ ಸಂಸ್ಥೆ ತೀರ್ಮಾನಿಸಿ ರಾಜ್ಯದಲ್ಲೇ ವಿನೂತನ ಮಾದರಿಯ ಸ್ಪಂದನೆಗೆ ಮುಂದಾಗಿದೆ.
ಶುಕ್ರವಾರ ಇಲ್ಲಿನ ಅಭ್ಯುದಯ ಸೈನ್ಸ್ ಪಿಯು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷರೂ ಆಗಿರುವ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಈ ವಿಷಯ ತಿಳಿಸಿ, ಇದಕ್ಕಾಗಿ ಸಿದ್ಧಪಡಿಸಿರುವ ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸಿದರು. ಈಗಾಗಲೇ ನಮ್ಮ ಸಂಸ್ಥೆಯಿಂದ ಮುದ್ದೇಬಿಹಾಳ ಪಟ್ಟಣದಲ್ಲಿ ಅಭ್ಯುದಯ ಸೈನ್ಸ್ ಪಿಯು ಕಾಲೇಜು ಆರಂಭಿಸಿ ಈ ಭಾಗದ ಶೈಕ್ಷಣಿಕ ಚಟುವಟಿಕೆ ಹೆಚ್ಚುವಂತೆ ನೋಡಿಕೊಳ್ಳಲಾಗಿದೆ.
ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಡಿ ತಾಲೂಕಿನ ಜನರಿಗೆ ಉತ್ತಮ, ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಮುದ್ದೇಬಿಹಾಳ ಪಟ್ಟಣ, ಅಡವಿ ಹುಲಗಬಾಳ ಮತ್ತು ಕೋಳೂರ-ಯರಗಲ್ಲ ವ್ಯಾಪ್ತಿಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆಯ ಕನ್ನಡ, ಇಂಗ್ಲಿಷ್ ಮಾಧ್ಯಮದ, ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯ ಹೊಂದಿರುವ ಶಾಲಾ ಕಟ್ಟಡಗಳನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಶೈಕ್ಷಣಿಕ ಚಟುವಟಿಕೆ ನಡೆಸಲು 2019-20ನೇ ಸಾಲಿನಲ್ಲೇ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲಾಗಿದೆ. ಆದರೆ ಕೊರೊನಾ ಮೊದಲ ಅಲೆಯಿಂದ 2020-21ನೇ ಸಾಲಿನಲ್ಲಿ ಶಾಲೆ ಆರಂಭಿಸುವುದು ಆಗಿರಲಿಲ್ಲ ಎಂದು ತಿಳಿಸಿದರು. ಕೊರೊನಾ ಲಾಕ್‌ಡೌನ್ ಸೇರಿ ಹಲವು ಸಂಕಷ್ಟಗಳಿಗೆ ದಾನಿಗಳು ಊಟೋಪಚಾರ, ಆಹಾರ ಸಾಮಗ್ರಿ ಕಿಟ್ ನೀಡುವ ಮೂಲಕ ಸ್ಪಂ ದಿಸಿದ್ದಾರೆ.
ಆದರೆ ಇವುಗಳು ನಿಜವಾದ ಅರ್ಹರಿಗೆ ತಲುಪಿಲ್ಲ. ಹೆಚ್ಚಿನ ಪ್ರಮಾಣ ಅನರ್ಹರ ಪಾಲಾಗಿವೆ. ನಾವೂ ನಮ್ಮ ಸಂಸ್ಥೆಯಿಂದ ಇಂಥ ಕಾರ್ಯ ಮಾಡಲು ತೀರ್ಮಾನಿಸಿದ್ದೇವು. ಆದರೆ ಕೊರೊನಾ ಮಹಾಮಾರಿ ನಿಲ್ಲುವ ಲಕ್ಷಣ ಕಂಡು ಬರುತ್ತಿಲ್ಲ. ಹಾಗಾಗಿ ಅದಕ್ಕಿಂತ ಉತ್ತಮ ಯೋಜನೆಯಾಗಿರುವ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿ ಜಾರಿಗೊಳಿಸಲಾಗುತ್ತಿದೆ. ಆಯಾ ಭಾಗದಲ್ಲಿರುವ ಶಾಲೆಗಳಲ್ಲಿ ಆಯಾ ಭಾಗದ ಮಕ್ಕಳಿಗೇ ಪ್ರವೇಶ ನೀಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೆಗೂ ಯಾವುದೇ ಶುಲ್ಕ ಪಡೆಯುವುದಿಲ್ಲ.
ಯಾರು ಬೇಕಾದರೂ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬಹುದು ಎಂದರು. ಗುಣಮಟ್ಟದ ಶಿಕ್ಷಣಕ್ಕಾಗಿ ಕಾರವಾರ, ಮಂಗಳೂರು, ಕೇರಳ ಭಾಗದ ನುರಿತ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಪ್ರತಿ ಶಾಲೆಯಲ್ಲಿ ಅಂದಾಜು 2000 ಮಕ್ಕಳವರೆಗೂ ದಾಖಲಾತಿ ಸೌಲಭ್ಯ ಇದೆ. ಉಚಿತ ಶಿಕ್ಷಣ ಕುರಿತು ಈಗಾಗಲೇ ತಾಲೂಕಿನ ಎಲ್ಲ ಕಡೆ ಪ್ರಚಾರ ಆರಂಭಿಸಲಾಗಿದೆ. ಈ ಸೌಲಭ್ಯ ಪಡೆಯಲು ಮುದ್ದೇಬಿಹಾಳ ತಾಲೂಕಿನವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಈ ತಾಲೂಕಿಗೆ ಹೊಂದಿಕೊಂಡಿರುವ ಅಕ್ಕಪಕ್ಕದ ತಾಲೂಕಿನ ಬಡವರಿಗೂ ಸೌಲಭ್ಯ ವಿಸ್ತರಿಸಲಾಗುತ್ತದೆ ಎಂದು ಮದರಿ ತಿಳಿಸಿದರು. ಸಂಸ್ಥೆಯ ರವಿ ಜಗಲಿ, ವೈ.ಕೆ. ಹೊಸಮನಿ, ವಿ.ಸಿ. ನಾಯೊRàಡಿ ಪತ್ರಿಕಾಗೋಷ್ಠಿಯಲ್ಲಿದ್ದರು.