Advertisement

ಬೆಂಗಳೂರು: ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಅತ್ಯಂತ ಮಹತ್ವದ್ದಾಗಿರುವ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯದಿಂದ ಎಲ್ಲ ಸಾರಿಗೆ ನಿಗಮಗಳಿಗೆ ಶೇ.55ರಷ್ಟು ಆದಾಯ ಖೋತಾ ಆಗಲಿದೆ ಎಂದು ಅಂದಾಜಿಸಲಾಗಿದ್ದು, ಉಳಿದ ಆದಾಯವು ನಿಯಮಿತ ಡೀಸೆಲ್‌ ಪಾವತಿಗೂ ಸಾಕಾಗುವುದಿಲ್ಲ. ಅದನ್ನು ಭರಿಸುವುದು ಹೇಗೆ ಎಂಬುದೇ ಸವಾಲಾಗಿದೆ.

Advertisement

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ನಾಲ್ಕೂ ನಿಗಮಗಳಲ್ಲಿ 22ರಿಂದ 23 ಸಾವಿರ ಬಸ್‌ಗಳಿದ್ದು, ನಿತ್ಯ 82 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರಿಂದ ನಿತ್ಯ ಅಂದಾಜು 22ರಿಂದ 24 ಕೋಟಿ ರೂ. ಆದಾಯ ಬರುತ್ತಿದೆ. ಇದರಲ್ಲಿ ಅರ್ಧದಷ್ಟಿರುವ ಮಹಿಳಾ ಪ್ರಯಾಣಿ ಕರಿಗೆ ಉಚಿತ ಸೌಲಭ್ಯ ಕಲ್ಪಿಸುವುದರಿಂದ ಸಹಜವಾಗಿ ಆದಾಯ 50 ರಷ್ಟು ಕುಸಿಯಲಿದೆ. ಅದರಂತೆ 12ರಿಂದ 13 ಕೋಟಿ ರೂ. ಆಗಲಿದ್ದು, ಇದು ನಿತ್ಯ ಎಲ್ಲ ನಾಲ್ಕು ನಿಗಮಗಳು ಪಾವತಿಸುವ ಡೀಸೆಲ್‌ ಬಿಲ್‌ನ ಒಟ್ಟಾರೆ ಮೊತ್ತವಾಗಿದೆ. ಇದನ್ನು ಲಿಖಿತ ನಿಯಮಗಳ ಪ್ರಕಾರ ನಿತ್ಯ ಪಾವತಿಸಬೇಕಿದೆ.

ಖೋತಾ ಆಗುವ ಆದಾಯವನ್ನು ಸರ್ಕಾರ ಯಾವ ರೀತಿ ಭರಿಸುತ್ತದೆ ಎಂಬುದರ ಮೇಲೆ ನಿಗಮಗಳ ಭವಿಷ್ಯ ನಿಂತಿದೆ. ಒಂದು ವೇಳೆ ವಾರ್ಷಿಕ ಅನುದಾನ ನೀಡುವುದಾಗಿ ಸರ್ಕಾರ ಹೇಳಿದರೆ, ಈಗಿರುವ ಸ್ಥಿತಿಯಲ್ಲಿ ವೇತನ ಮತ್ತು ಡೀಸೆಲ್‌ ಪಾವತಿ ಎರಡೂ ಕಷ್ಟಸಾಧ್ಯವಾಗಲಿದೆ. ಆಗ ಸಾಲದ ಮೊರೆ ಹೋಗುವುದು ಅನಿವಾರ್ಯ ಆಗಲಿದೆ. ಪ್ರತಿ ತಿಂಗಳು ಅನುದಾನ ಪೂರೈಸುವುದಾದರೂ ನಿಗಮಗಳು ಅಕ್ಷರಶಃ ಸವಾಲಿನ ದಿನಗಳನ್ನು ಕಳೆಯಬೇಕಾಗುತ್ತದೆ.

ಯಾಕೆಂದರೆ, ನಾಲ್ಕೂ ನಿಗಮಗಳು ನಿತ್ಯ 12 ಕೋಟಿ ರೂ. ಡೀಸೆಲ್‌ಗಾಗಿ ಖರ್ಚು ಮಾಡುತ್ತವೆ. ನಿಯಮಗಳ ಪ್ರಕಾರ ಇದನ್ನು ಪಾವತಿಸಬೇಕು. ಆದರೆ, ಈಗ 15 ದಿನಗಳಿಗೊಮ್ಮೆ ಪಾವತಿ ಆಗುತ್ತಿದೆ. ಬಂದ ಆದಾಯವೆಲ್ಲವೂ ಡೀಸೆಲ್‌ಗೆ ಹೋಗುವುದರಿಂದ ಈ ನಡುವೆ ಬರುವ ಉಪಕರಣಗಳ ಖರೀದಿ ಸೇರಿ ಯಾವುದೇ ರೀತಿಯ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕುವುದು ಅನಿವಾರ್ಯ ಆಗಲಿದೆ. ಇದು ಈಗ ಸಾರಿಗೆ ನಿಗಮಗಳ ನಿದ್ದೆಗೆಡಿಸಿದೆ. ಈ ಮಧ್ಯೆ ಉದ್ದೇಶಿತ ಯೋಜನೆಯಿಂದ ವಾರ್ಷಿಕ 3,000 ಕೋಟಿ ರೂ. ಆರ್ಥಿಕ ಹೊರೆಯ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನು ಮಾಸಿಕ ಅಥವಾ ವಾರ್ಷಿಕವಾಗಿ ಪಾವತಿಸಬೇಕೇ? ಅಥವಾ ಇಂತಿಷ್ಟು ಅನುದಾನವನ್ನು ಮುಂಚಿತವಾಗಿಯೇ ನೀಡಬೇಕೇ? ಇಂತಹ ಹಲವು ಅಂಶಗಳ ಬಗ್ಗೆ ಆರ್ಥಿಕ ಇಲಾಖೆಗಳು ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಮತ್ತೆ ಅವಲಂಬನೆಯತ್ತ ನಿಗಮಗಳು?: ಸಾರಿಗೆ ನಿಗಮಗಳು ಪ್ರತಿಯೊಂದಕ್ಕೂ ಸರ್ಕಾರಕ್ಕೆ ಕೈಚಾಚುವ ಬದಲು ಆರ್ಥಿಕವಾಗಿ ಸದೃಢಗೊಳಿಸಿ, ಸ್ವಾವಲಂಬಿ ಮಾಡಬೇಕು ಎನ್ನುವುದು ಮೊದಲಿನಿಂದಲೂ ಪ್ರಯತ್ನ ನಡೆದಿದೆ. ಆದರೆ, ಇದುವರೆಗೆ ಸಾಧ್ಯವಾಗಿಲ್ಲ. ಈಚೆಗೆ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚಿಸಲಾಗಿತ್ತು. ಅವರು ನಿಗಮಗಳ ಸ್ಥಿರಾಸ್ತಿಗಳ ಸಮರ್ಪಕ ಬಳಕೆ, ಮಾರ್ಗಗಳ ಪುನರ್‌ರಚನೆ, ಚಾಲಕ ಕಂ ನಿರ್ವಾಹಕ ಸೇರಿದಂತೆ ಹಲವಾರು ಶಿಫಾರಸುಗಳ ಜತೆಗೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಸರ್ಕಾರದ ಅನುದಾನ ಅವಲಂಬಿಸಬಾರದು ಎಂದು ಹೇಳಿದ್ದರು. ಆದರೆ, ಈಗ ಸಾರಿಗೆ ನಿಗಮಗಳ ಸರ್ಕಾರದ ಅವಲಂಬನೆ ಮತ್ತಷ್ಟು ಹೆಚ್ಚಾಗಲಿದೆ. ಪ್ರತಿ ತಿಂಗಳು ಕೆಎಸ್‌ಆರ್‌ಟಿಸಿಯಲ್ಲೇ ನೌಕರರ ವೇತನ ಮಾಸಿಕ 140 ಕೋಟಿ ರೂ. ಆಗುತ್ತದೆ. ಡೀಸೆಲ್‌ ಪಾವತಿ 140-150 ಕೋಟಿ ರೂ. ಆಗುತ್ತದೆ. ಮಹಿಳೆಯರಿಗೆ ಉಚಿತ ಬಸ್‌ ಸೌಲಭ್ಯದಿಂದ ಪ್ರತಿ ತಿಂಗಳು ಪ್ರತಿ ಹಂತದಲ್ಲಿ ನಿಗಮಗಳು ಸರ್ಕಾರದ ಮುಂದೆ ಕೈಚಾಚುವುದು ಅನಿವಾರ್ಯ ಆಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

100 ಕಿ.ಮೀ.ಗೆ ಸೀಮಿತ?: ಪ್ರತಿ ಮಹಿಳೆಗೆ ದಿನಕ್ಕೆ 100 ಕಿ.ಮೀ.ವರೆಗೆ ಸಂಚರಿಸುವ ಷರತ್ತು ವಿಧಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ. ವೋಲ್ವೋ, ಸ್ಲೀಪರ್‌ ಸೇರಿ ಪ್ರೀಮಿಯಂ ಸೇವೆಗಳನ್ನು ಹೊರತುಪಡಿಸಿ, ಸಾಮಾನ್ಯ ಬಸ್‌ಗಳಲ್ಲಿ ಈ ಉಚಿತ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದ್ದು, ಗರಿಷ್ಠ 100 ಕಿ.ಮೀ. ಸೀಮಿತಗೊಳಿಸುವ ಚಿಂತನೆ ನಡೆದಿದೆ. ಜತೆಗೆ ಅಂತಾರಾಜ್ಯಗಳಿಂದ ಬರುವ ರಾಜ್ಯದ ಮಹಿಳಾ ಪ್ರಯಾಣಿಕರಿಗೂ ಉಚಿತ ಸಾರಿಗೆ ಸೇವೆ ಒದಗಿಸುವ ಸಂಬಂಧ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಿಪೇಯ್ಡ್ ಪಾಸ್‌?: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆಗೆ ಸಾಧ್ಯವಾದಷ್ಟು ತಂತ್ರಜ್ಞಾನದ ಮೊರೆಹೋಗಲು ಚಿಂತನೆ ನಡೆಸಿರುವ ಸರ್ಕಾರ, ಪ್ರಿಪೇಯ್ಡ ಪಾಸ್‌, ಫೇಸ್‌ ಡಿಟೆಕ್ಷನ್‌ ಕ್ಯಾಮೆರಾ ಸೇರಿ ಹಲವು ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸಲು ಉದ್ದೇಶಿಸಿದೆ. ಮೊದಲೇ ಮಹಿಳಾ ಪ್ರಯಾಣಿಕರಿಗೆ “ನಮ್ಮ ಮೆಟ್ರೋ’ ಮಾದರಿಯಲ್ಲಿ ಪ್ರಿಪೇಯ್ಡ ಪಾಸು ವಿತರಿಸುವುದು. ಪ್ರಯಾಣಿಕರು ಸಂಚರಿಸಿದಂತೆಲ್ಲಾ ಕಾರ್ಡ್‌ನಲ್ಲಿ ಹಣ ಕಡಿತಗೊಳ್ಳುವ ವ್ಯವಸ್ಥೆ ಪರಿಚಯಿಸುವ ಚಿಂತನೆ ನಡೆದಿದೆ. ಆದರೆ, ಈ ಕಾರ್ಡ್‌ಸ್ವೈಪ್ ಮಾಡುವ ತಂತ್ರಜ್ಞಾನ ಕೂಡ ಅಗತ್ಯವಿದೆ. ಇನ್ನು ನಿತ್ಯ ಪ್ರತಿ ಬಸ್‌ನಲ್ಲಿ ಎಷ್ಟು ಪ್ರಯಾಣಿಕರು ಹತ್ತಿದರು, ಇಳಿದರು ಎಂಬುದರ ಲೆಕ್ಕಹಾಕಲಿಕ್ಕೂ ತಂತ್ರಜ್ಞಾನ ಅಳವಡಿಸುವ ಬಗ್ಗೆ ಚರ್ಚೆಗಳು ನಡೆದಿವೆ.

-ವಿಜಯ ಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next