Advertisement

ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬಸ್‌ ಪಾಸ್‌: ಸಿಎಂ

06:00 AM Jul 24, 2018 | Team Udayavani |

ರಾಮನಗರ/ಬೆಂಗಳೂರು: “ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ಕೊಡುವುದಾಗಿ’ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

Advertisement

ಚನ್ನಪಟ್ಟಣದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ನಾಗರಿಕರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಮಾತನಾಡಿದರು. ಮಂಗಳವಾರ ಬೆಂಗಳೂರಿನಲ್ಲಿ ಕರೆದಿರುವ ಸಾರಿಗೆ ಸೇರಿದಂತೆ ಇತರೆ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್‌ ಪಾಸ್‌ ನೀಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಪ್ರಕಟಿಸಿದರು.

ಉಚಿತ ಬಸ್‌ ಪಾಸ್‌ ನೀಡಲು 900 ಕೋಟಿ ರೂ. ಬೇಕು. ಸಾವಿರಾರು ರೂ. ಶುಲ್ಕ ಕೊಟ್ಟು ವ್ಯಾಸಂಗ ಮಾಡುವವರಿಗೆ ಉಚಿತ ಬಸ್‌ ಪಾಸ್‌ ಅಗತ್ಯವಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಎಬಿವಿಪಿ ಸಂಘಟನೆ ಮೂಲಕ ಬಿಜೆಪಿ ಸಣ್ಣತನದ ರಾಜಕೀಯ ಮಾಡುತ್ತಿದೆ. ಬಿಜೆಪಿ ಹಾಗೂ ಆ ಪಕ್ಷದ ಮುಖಂಡರ ರೀತಿಯಲ್ಲಿಯೇ ತಮಗೂ ರಾಜಕೀಯ ಮಾಡಲು ಬರುತ್ತೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ವಿದ್ಯಾರ್ಥಿಗಳ ಬಸ್‌ ಪಾಸ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸಭೆ ಕರೆದ ಬಗ್ಗೆ ಈವರೆಗೆ ನನಗೆ ಮಾಹಿತಿ ಇಲ್ಲ. ಸೂಚನೆ ಬಂದರೆ, ಮಾಹಿತಿಗಳೊಂದಿಗೆ ಸಭೆಗೆ ಹಾಜರಾಗುತ್ತೇನೆ ಎಂದು ಸಾರಿಗೆ ಇಲಾಖೆಯ  ಪ್ರಧಾನ ಕಾರ್ಯದರ್ಶಿ ಬಸವರಾಜು ಅವರು ಇದೇ ವೇಳೆ ಉದಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಎಷ್ಟು ಮಂದಿಗೆ ಅನುಕೂಲ?
ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ಎಂದು ಹೇಳಿರುವುರಿಂದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 44,57,535,ಸರ್ಕಾರಿ ಪಿಯು ಕಾಲೇಜಿನಲ್ಲಿ 3.53 ಲಕ್ಷ, ಸರ್ಕಾರಿ ಪದವಿ ಕಾಲೇಜಿನಲ್ಲಿ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ,  ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ  41,10,402 ವಿದ್ಯಾರ್ಥಿಗಳು,  ಖಾಸಗಿ ಪಿಯು ಕಾಲೇಜಿನಲ್ಲಿ 4.29 ಲಕ್ಷ ಹಾಗೂ  ಖಾಸಗಿ ಪದವಿ ಕಾಲೇಜಿನಲ್ಲಿ 1.25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು ಇವರು ಬಸ್‌ಪಾಸ್‌ ವಂಚಿತರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next