Advertisement

ಮೋಸದ ತಕ್ಕಡಿ ಮಾರಾಟ ಜಾಲ ಪತ್ತೆ

01:03 PM Mar 19, 2023 | Team Udayavani |

ಬೆಂಗಳೂರು: ತೂಕದ ಸ್ಕೇಲ್‌ನಲ್ಲಿ ಪಿಸಿಬಿ ಚಿಪ್‌ ಅಳವಡಿಸಿ ಗ್ರಾಹಕರಿಗೆ ವಂಚಿಸುತ್ತಿದ್ದ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕಾಮಾಕ್ಷಿಪಾಳ್ಯದ ಸೋಮಶೇಖರ್‌ (33), ಬಾಗಲಗುಂಟೆಯ ನವೀನ್‌ ಕುಮಾರ್‌ (30), ಕಾಮಾಕ್ಷಿಪಾಳ್ಯದ ವಿನೇಶ್‌ ಪಟೇಲ್ (22), ಅನ್ನಪೂಣೇಶ್ವರಿನಗರದ ರಾಜೇಶ್‌ ಕುಮಾರ್‌ (43), ಗೊಲ್ಲರಹಟ್ಟಿಯ ವ್ಯಾಟರಾಯನ್‌ (42), ನಾಗರ ಬಾವಿಯ ಮೇಘನಾಧಮ್‌ (38), ಕಾವೇರಿಪುರದ ಕೆ.ಲೋಕೇಶ್‌ (39), ಸುಂಕದಕಟ್ಟೆಯ ಎಸ್‌.ಆರ್‌. ಲೋಕೇಶ್‌ (24) ಹೆಗ್ಗನಹಳ್ಳಿ ಕ್ರಾಸ್‌ ಗಂಗಾಧರ್‌ (32), ಕಾಮಾಕ್ಷಿಪಾಳ್ಯದ ಚಂದ್ರಶೇಖರ್‌(41), ಸುಕಂದಕಟ್ಟೆಯ ಅನಂತಯ್ಯ(44), ಪಟ್ಟೆಗಾರಪಾಳ್ಯದ ರಂಗನಾಥ್‌(38), ಡಿ ಗ್ರೂಪ್‌ ಲೇಔಟ್‌ನ ಶಿವಣ್ಣ (51), ಪ್ರಕಾಶನಗರದ ಸನಾವುಲ್ಲಾ (65), ಹೆಗ್ಗನಹಳ್ಳಿಯ ವಿಶ್ವನಾಥ್‌(54), ಚಿಕ್ಕಬಸ್ತಿಯ ಮೊಹಮ್ಮದ್‌ ಈಶಾಕ್‌(30) ಮತ್ತು ಉಲ್ಲಾಳು ಉಪನಗರದ ಮಧುಸೂಧನ್‌(24) ಬಂಧಿತರು.

ಆರೋಪಿಗಳು ನ್ಯಾಯಬೆಲೆ ಅಂಗಡಿ, ಗುಜರಿ ಅಂಗಡಿ, ಕೋಳಿ, ಮೀನು, ಮಾಂಸ ಮಾರಾಟ ಅಂಗಡಿಗಳಲ್ಲಿ ಗ್ರಾಹಕರಿಗೆ ವಂಚಿಸುತ್ತಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕಾಮಾಕ್ಷಿಪಾಳ್ಯದ ಮಾರುತಿನಗರದ ವಿಘ್ನೇಶ್ವರ್‌ ಓಲ್ಡ್‌ ಪೇಪರ್‌ ಮಾರ್ಟ್‌ನಲ್ಲಿ ಮಾಲೀಕನು ರಿಮೋಟ್‌ ಮೂಲಕ ತೂಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ಗಣೇಶ್‌ ಎಂಬುವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕ ವಿನೇಶ್‌ ಪಟೇಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ವಂಚನೆ ಬೆಳಕಿಗೆ ಬಂದಿದೆ.

ಸೋಮಶೇಖರ್‌ ಮತ್ತು ನವೀನ್‌ಕುಮಾರ್‌ ಬಳಿ ತೂಕದ ಸ್ಕೇಲ್‌ ಖರೀದಿಸಿದ್ದಾಗಿ ತಿಳಿಸಿದ್ದಾನೆ. ಬಳಿಕ ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ವಂಚನೆಯ ಬೃಹತ್‌ ಜಾಲ ಬೆಳಕಿಗೆ ಬಂದಿದೆ. ಅಲ್ಲದೆ, ಇದೇ ರೀತಿಯ ತೂಕದ ಯಂತ್ರಗಳನ್ನು ಹಲವರಿಗೆ ಮಾರಾಟ ಮಾಡಿ ಗೋಲ್ಮಾಲ್‌ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳ ಹೇಳಿಕೆಯನ್ನು ಆಧರಿಸಿ ಇತರೆ ಆರೋಪಿಗಳ ಬಂಧನಕ್ಕಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ, ಒಂದು ವಿಶೇಷ ತಂಡ ರಚಿಸಿದ್ದರು. ಆ ತಂಡ ಕಾರ್ಯಾಚರಣೆ ನಡೆಸಿ ನ್ಯಾಯಬೆಲೆ ಅಂಗಡಿ, ಗುಜರಿ ಅಂಗಡಿ, ಕೋಳಿ, ಮೀನು, ಮಾಂಸ ಮಾರಾಟ ಅಂಗಡಿಗಳಲ್ಲಿ ಸೇರಿ ನಗರದ ವಿವಿಧೆಡೆ ದಾಳಿ ನಡೆಸಿ ಗ್ರಾಹಕರಿಗೆ ವಂಚಿಸುತ್ತಿದ್ದ 14 ಮಂದಿ ಆರೋಪಿಗಳನ್ನು ಬಂಧಿಸಿದೆ.

Advertisement

ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್‌ 420, 468,264, 34 ಜತೆಗೆ ಲೀಗಲ್‌ ಮೆಟ್ರಾಲಜಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

ಯೂಟ್ಯೂಬ್ ನೋಡಿ ವಂಚನೆ : ಆರೋಪಿಗಳ ಪೈಕಿ ಸೋಮಶೇಖರ್‌, ನವೀನ್‌ ಕುಮಾರ್‌ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಅನುಮತಿ ಪಡೆದುಕೊಂಡು ಸ್ಕೇಲ್‌ ಸರ್ವೀಸ್‌ ಮಾಡುವ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಕೇಲ್‌ ನಲ್ಲಿ ವಂಚನೆ ಹೇಗೆ ಮಾಡಬಹುದು ಎಂದು ಯುಟ್ಯೂಬ್‌ ನೋಡಿ ತೂಕದ ಯಂತ್ರದಲ್ಲಿ ವೈಯರ್‌ ಬದಲಾವಣೆ ಮಾಡುವುದನ್ನು ಕಲಿತುಕೊಂಡಿದ್ದರು. ಎಸ್‌.ಪಿ ರಸ್ತೆಯಿಂದ ವಸ್ತುಗಳನ್ನು ಖರೀದಿಸಿ ತಂದು ತೂಕದ ಯಂತ್ರದಲ್ಲಿ ಪ್ರಿಂಟೆಡ್‌ ಸರ್ಕ್ನೂಟ್‌ ಬೋರ್ಡ್‌ (ಪಿಸಿಬಿ) ಚಿಪ್‌ ನಲ್ಲಿ ಬದಲಾವಣೆ ಮಾಡಿ ಸ್ಕೇಲ್‌ ನಲ್ಲಿ ಹೆಚ್ಚುವರಿ ಬಟನ್‌ ಹಾಗೂ ರಿಮೋಟ್‌ ಅಳವಡಿಸುತ್ತಿದ್ದರು. ಇದೇ ರೀತಿ ಎರಡ್ಮೂರು ವರ್ಷಗಳಿಂದ ತೂಕದ ಸ್ಕೇಲ್‌ ನಲ್ಲಿ ಮಾರ್ಪಾಡು ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದರು. ಇಬ್ಬರು ಗ್ರಾಹಕರಿಂದ ಬಂದ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳು ತಮ್ಮದೇ ಆದ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ನಗರಾದ್ಯಂತ ಈ ಮಾಫಿಯಾವನ್ನು ಮಾಡುತ್ತಿದ್ದರು. ಆರೋಪಿಗಳು ಇನ್ನು ಹಲವು ಮಂದಿಗೆ ಮಾರ್ಪಾಡು ಮಾಡಿದ್ದ ತೂಕದ ಸ್ಕೇಲ್‌ಗ‌ಳನ್ನು ಮಾರಾಟ ಮಾಡಿದ್ದು, ಆರೋಪಿಗಳ ಬಂಧನವಾಗುತ್ತಿದ್ದಂತೆ ಅದರಲ್ಲಿ ಅಳವಡಿಸಿದ ರಿಮೋಟ್‌ಗಳನ್ನು ಕಿತ್ತೆಸೆದಿದ್ದಾರೆ. ಅದರಲ್ಲಿ ಮೆಟ್ರಾಲಜಿ ಇಲಾಖೆಯ ಅಧಿಕಾರಿಗಳ ಕೈವಾಡವಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಮೂರು ತಲೆಮಾರಿನಿಂದ ಸ್ಕೇಲ್‌ ಮಾರಾಟ: ಮತ್ತೂಂದೆಡೆ ಆರೋಪಿ ನವೀನ್‌ ವಿಚಾರಣೆಯಲ್ಲಿ ಈತನ ವಿರುದ್ಧ 2020ರಲ್ಲಿ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ತೂಕದ ಸ್ಕೇಲ್‌ ಬದಲಾವಣೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ದೂರು ನೀಡಿದ್ದ ಅಸಿಸ್ಟೆಂಟ್‌ ಕಂಟ್ರೋಲರ್‌ಗೆ ಆರೋಪಿ ಬೆದರಿಕೆ ಹಾಕಿದ್ದ. ಈ ಕುರಿತು ವಿಧಾನಸೌಧ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು. ನವೀನ್‌ ಕುಮಾರ್‌ ತಾತ ಮತ್ತು ಅಪ್ಪ ಕೂಡ ತೂಕದ ಯಂತ್ರ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಅದನ್ನು ನವೀನ್‌ ಕುಮಾರ್‌ ಮುಂದುವರಿಸಿಕೊಂಡು ಬಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next