ಬೆಂಗಳೂರು: ಮ್ಯಾಟ್ರಿಮೋನಿ ವೆಬ್‌ಸೈಟ್ ನಲ್ಲಿ ಪರಿಚಯವಾದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿದ ವ್ಯಕ್ತಿ, ಭಾರೀ ಮೊತ್ತದ ವಜ್ರ ತಂದಿದ್ದು ಅದನ್ನು ತರಲು ಏರ್‌ಪೋರ್ಟ್‌ನ ಅಧಿಕಾರಿಗಳಿಗೆ ಹಣ ಕೊಡಬೇಕಿದೆ ಎಂದು ನಂಬಿಸಿ 3.90 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೋಸ ಹೋದ ಮಹಿಳೆ ನೀಡಿರುವ ದೂರಿನ ಅನ್ವಯ, ಅರ್ಮಾನ್ ಮಲಿಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದೂರುದಾರ ಮಹಿಳೆ ವಿಧವೆ ಆಗಿದ್ದು ಮರು ವಿವಾಹ ಆಗಲು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ವಿವರ ಹಾಕಿದ್ದರು. ಇದನ್ನು ಗಮನಿಸಿದ ಅರ್ಮಾನ್ ಮಲಿಕ್ ಎಂಬಾತ, ತಾನು ದುಬೈನಲ್ಲಿ ಇರುವುದಾಗಿ ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದಾನೆ. ಜತೆಗೆ ಡಿ.28ರಂದು ಭಾರತಕ್ಕೆ ಬರಲಿದ್ದು, ಮದುವೆ ಮಾಡಿಕೊಳ್ಳುವುದಾಗಿ ಮಹಿಳೆಯನ್ನು ನಂಬಿಸಿದ್ದಾನೆ.
ಈ ಮಧ್ಯೆ ಡಿ.30ರಂದು ಏರ್‌ಪೋರ್ಟ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ, ಅರ್ಮಾನ್ ಮಲಿಕ್ ದೆಹಲಿ ವಿಮಾನ ನಿಲ್ದಾಣದಲ್ಲಿದ್ದು, ಆತ ಭಾರೀ ಪ್ರಮಾಣದ ವಜ್ರಾಭರಣ, ಲಗೇಜ್ ತಂದಿದ್ದಾನೆ.ಅದನ್ನು ಜಪ್ತಿ ಮಾಡಿಕೊಂಡಿದ್ದು ಅದಕ್ಕೆ ದಂಡ ಕಟ್ಟಿದರೆ ಆಭರಣ ಹಾಗೂ ಅರ್ಮಾನ್ ನನ್ನು ಬಿಟ್ಟು ಕಳುಹಿಸುವುದಾಗಿ ತಿಳಿಸಿದ್ದಾನೆ.
ಆತನ ಮಾತು ನಂಬಿದ ಮಹಿಳೆ, ಕರೆ ಮಾಡಿದ್ದ ವ್ಯಕ್ತಿ ಕಳಿಸಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ 3.90 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ಪುನಃ ಅರ್ಮಾನ್ ಕರೆ ಮಾಡಿಲ್ಲ. ಬೆಂಗಳೂರಿಗೂ ಬಂದಿಲ್ಲ. ಏರ್ ಪೋರ್ಟ್ ಸಿಬ್ಬಂದಿ ಹೆಸರಲ್ಲಿ ಕರೆ ಮಾಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಬಳಿಕ ಜ.2ರಂದು ಏರ್‌ಪೋರ್ಟ್ ಸಿಬ್ಬಂದಿ ಹೆಸರಲ್ಲಿ ಮಹಿಳೆಗೆ ಕರೆ ಮಾಡಿದ ಮತ್ತೂಬ್ಬ ವ್ಯಕ್ತಿ, 85 ಸಾವಿರ ರೂ. ನೀಡಿ ಪಾರ್ಸೆಲ್ ತೆಗೆದುಕೊಂಡು ಹೋಗುವಂತೆ ಹೇಳಿದ್ದಾನೆ. ಅಷ್ಟರಲ್ಲಾಗಲೇ ಮೋಸ ಹೋಗಿರುವ ಸಂಗತಿ ಅರಿತಿದ್ದ ಮಹಿಳೆ, ಹಣ ಕಳುಹಿಸದೆ, ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರ್ ವಂಚಕರ ತಂಡ ಮಹಿಳೆಗೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇಂತಹ ಆಮಿಷದ ಕರೆಗಳಿಗೆ ಸಾರ್ವಜನಿಕರು ಮಾರುಹೋಗಬಾರದು ಎಂದು ಪೊಲೀಸರು ಹೇಳಿದರು.