ಬೆಂಗಳೂರು: ಬ್ಯಾಂಕ್ ಖಾತೆ ಕೆವೈಸಿ ಅಪ್‌ಡೇಟ್, ಜಾಬ್ ಕೊಡಿಸುವುದು, ಹಣ ದ್ವಿಗುಣಗೊಳಿಸುವುದು, ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ವಂಚಿಸುತ್ತಿದ್ದ ಸೈಬರ್ ಕಳ್ಳರು ಇದೀಗ ಮಿಕ್ಸಿ ರಿಪೇರಿ ಹೆಸರಿನಲ್ಲೂ ಹಣ ಲಪಟಾಯಿಸಲು ಮುಂದಾಗಿದ್ದಾರೆ.
ಬೆನ್ಸನ್‌ಟೌನ್‌ನ ನಿವಾಸಿ ಮರಿಯಮ್ (49) ಮಿಕ್ಸಿ ರಿಪೇರಿಗಾಗಿ ಅಂತರ್ಜಾಲದಲ್ಲಿ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿ 84 ಸಾವಿರ ರೂ. ಕಳೆದುಕೊಂಡಿದ್ದಾರೆ. ಮರಿಯಮ್ ಮನೆಯಲ್ಲಿದ್ದ ಮಿಕ್ಸಿ ಹಾಳಾಗಿತ್ತು. ಇದನ್ನು ರಿಪೇರಿ ಮಾಡಲು ತಮ್ಮ ಮಿಕ್ಸಿ ಕಂಪನಿಯ ಕಸ್ಟಮರ್ ಕೇರ್ ನಂಬರ್ ಅನ್ನು ಅಂತಾರ್ಜಾಲದಲ್ಲಿ ಹುಡುಕಿದ್ದರು. ಆಗ ಅಲ್ಲಿ ಕಂಡು ಬಂದ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದರು. ಕರೆ ಸ್ವೀಕರಿಸಿದ ಅಪರಿಚಿತರು ನಿಮ್ಮ ಮನೆಗೆ ಮಿಕ್ಸಿ ರಿಪೇರಿ ಮಾಡಲು ಸಿಬ್ಬಂದಿ ಕಳುಹಿಸುತ್ತೇವೆ. ನಿಮ್ಮ ಮಾಹಿತಿ ತಿಳಿಸಿ ಎಂದು ಹೇಳಿದ್ದರು. ಅದರಂತೆ ಮರಿಯಮ್ ತಮ್ಮ ಮಾಹಿತಿ ಕೊಟ್ಟಿದ್ದರು. ಇದಾದ ಕೆಲ ಹೊತ್ತಿನಲ್ಲೇ ಮರಿಯಮ್ ಅವರ ಮೊಬೈಲ್ ಅಪರಿಚಿತ ನಂಬರ್‌ನಿಂದ ಕರೆ ಬಂದಿತ್ತು. ಮಿಕ್ಸಿ ರಿಪೇರಿಗೆ ನಿಮ್ಮ ಮನೆಗೆ ಬರುವ ಮುನ್ನ ನಾವು ಕಳುಹಿಸಿವ ಲಿಂಕ್ ಕ್ಲಿಕ್‌ಮಾಡಿ ಅದಕ್ಕೆ 100 ರೂ. ಸವೀಸ್ ಜಾರ್ಜ್ ಹಾಕುವಂತೆ ಸೂಚಿಸಿದ್ದರು.
ಅದರಂತೆ ಮರಿಯಮ್ ಲಿಂಕ್ ಕ್ಲಿಕ್‌ಮಾಡಿ 100 ರೂ. ಕಳುಹಿಸಿದ ಬಳಿಕ ಮರಿಯಮ್ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ 84 ಸಾವಿರ ರೂ. ಕಡಿತಗೊಂಡಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.