Advertisement

ಪೊಲೀಸ್‌ ಸಿಬ್ಬಂದಿಗೆ ಬಡ್ತಿಯಿಂದ ವಂಚನೆ

05:33 PM Apr 14, 2018 | |

ಶಿವಮೊಗ್ಗ: ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತೆ ಸುಪ್ರೀಂ ಕೋರ್ಟ್‌ ಹಾಗೂ ಇಲಾಖೆ ವರಿಷ್ಠ ಅಧಿಕಾರಿಗಳ ಆದೇಶವನ್ನು ಜಾರಿಗೊಳಿಸಲು ಜಿಲ್ಲಾ ಪೊಲೀಸ್‌ ಕಚೇರಿ (ಡಿಪಿಒ)ಹಿಂದೇಟು ಹಾಕುತ್ತಿರುವ ಪರಿಣಾಮ ಪೊಲೀಸ್‌ ಇಲಾಖೆಯ ನೂರಾರು ಸಿಬ್ಬಂದಿ ಬಡ್ತಿಯಿಂದ ವಂಚನೆಗೊಳಗಾಗಿದ್ದಾರೆ. 

Advertisement

ಕೋರ್ಟ್‌ ಹಾಗೂ ಹಿರಿಯ ಅಧಿಕಾರಿಗಳ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಡಿಪಿಒ ಅಧಿಕಾರಿಗಳು ಜಾಣತನ ತೋರುತ್ತಿರುವುದರಿಂದಾಗಿ ಬಡ್ತಿಯಿಂದ ವಂಚನೆಗೊಳಗಾಗಿರುವ ಸಿಬ್ಬಂದಿ ಇದೀಗ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ನಿರಂತರ ಅನ್ಯಾಯ:1998ರಲ್ಲಿ ಅಂದಿನ ಸರ್ಕಾರ ಜಿಲ್ಲೆಗೊಂದು ಮಹಿಳಾ ಪೊಲೀಸ್‌ ಠಾಣೆ ಆರಂಭಿಸಿತು. ಆಗ ಪ್ರತಿ ಠಾಣೆಗೆ 1 ಪಿಎಸ್‌ಐ, 2 ಎಎಸ್‌ಐ, 7 ರಿಂದ 8 ಮುಖ್ಯ ಪೇದೆ ಹಾಗೂ 21 ರಿಂದ 24 ಸಾಮಾನ್ಯ ಪೇದೆಯನ್ನೊಳಗೊಂಡ ಠಾಣೆ ಆರಂಭಗೊಂಡಿತು. ಪಿಎಸ್‌ಐ ಹುದ್ದೆಯೇನೋ ಭರ್ತಿ ಆಯಿತು. ಆದರೆ ಎಎಸ್‌ಐ ಮತ್ತು ಮುಖ್ಯ ಪೇದೆಯ ಕೊರತೆ ಎದುರಾಯಿತು.

ಆಗ ಮಹಿಳಾ ಸಿಬ್ಬಂದಿಗೆ ಹಿರಿತನ ಆಧರಿಸಿ ಒಂದು ಬಾರಿ ಪ್ರತ್ಯೇಕ ಬಡ್ತಿ ನೀಡಿ ಎಂದು ಸರ್ಕಾರ ಸೂಚಿಸಿತು. ಆಗ ಸೇವಾ ಹಿರಿತನ ಗಮನಿಸದೆ ಕೆಲವರಿಗೆ ಮಾತ್ರ ಬಡ್ಡಿ ನೀಡಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಯಿತು. ಮೀಸಲು ಕೋಟಾ ಅಡಿಯಲ್ಲಿ ಬರುವವರಿಗೆ ಎರಡೆರಡು ಬಡ್ತಿ ಸಿಕ್ಕಂತಾಯಿತು. ನಂತರದಲ್ಲಿ ಈ ರೀತಿಯ ಬಡ್ತಿಯನ್ನು ನಿಲ್ಲಿಸಲಾಯಿತು. ಇದರಿಂದಾಗಿ ಉಳಿದ ಮಹಿಳಾ ಸಿಬ್ಬಂದಿ ಬಡ್ತಿಯಿಂದ ವಂಚಿತರಾಗಬೇಕಾಯಿತು. ಅಷ್ಟು ಮಾತ್ರವಲ್ಲ ಆ ಠಾಣೆಯಲ್ಲಿ ಹುದ್ದೆ ಖಾಲಿ ಇರದೆ ಇದ್ದ ಕಾರಣ ಬಡ್ತಿ ನೀಡಲಿಲ್ಲ.

ತಮಗಾದ ಅನ್ಯಾಯವನ್ನು ಮಹಿಳಾ ಸಿಬ್ಬಂದಿ ಅಂದಿನ ಡಿಜಿ ಮತ್ತು ಐಜಿ ಗಮನಕ್ಕೆ ತಂದರು. ಇದನ್ನು ಗಮನಿಸಿದ ಸರಕಾರ ಮಹಿಳಾ ಮತ್ತು ಪುರುಷ ಸಿಬ್ಬಂದಿಯನ್ನೊಳಗೊಂಡಂತೆ ಸಾಮಾನ್ಯ ಹಿರಿತನ ಪದ್ಧತಿಯನ್ನು ಜಾರಿ ಮಾಡಿತು.ಯಾರ್ಯಾರು, ಯಾವಾಗ ನೇಮಕವಾಗಿದ್ದರೋ ಆ ದಿನಾಂಕದಿಂದ ಸಾಮಾನ್ಯ ಹಿರಿತನವನ್ನಾಗಿ ಪರಿಗಣಿಸಬೇಕು ಎಂದು ಸೂಚಿಸಿತು. ಈ ಪ್ರಕಾರ ರಾಜ್ಯದ ಐದಾರು ಜಿಲ್ಲೆಯಲ್ಲಿ ಬಡ್ತಿಗೆ ಅರ್ಹರಿಲ್ಲದಿದ್ದರೂ ಮುಂಬಡ್ತಿ ಪಡೆದಿದ್ದ ಮಹಿಳಾ ಸಿಬ್ಬಂದಿಯ ಪಟ್ಟಿ ಸಿದ್ಧಪಡಿಸಿ ಅಂತಹವರಿಗೆ ಹಿಂಬಡ್ತಿ ನೀಡಿ ಸಾಮಾನ್ಯ ಹಿರಿತನ ಪಟ್ಟಿ ತಯಾರಿಸಲಾಯಿತು. ಆದರೆ ಉಳಿದ ಜಿಲ್ಲೆಗಳನ್ನು ಹೀಗಾಗಲಿಲ್ಲ. ಇದರಿಂದಾಗಿ ಸಮಸ್ಯೆ ಉದ್ಭವವಾಯಿತು.

Advertisement

ಇದನ್ನು ಗಮನಿಸಿದ 2004 ರಲ್ಲಿ ಅಂದಿನ ಡಿಜಿ ಸಾಮಾನ್ಯ ಹಿರಿತನಕ್ಕನುಗುಣವಾಗಿ ಬಡ್ತಿ ನೀಡುವಂತೆ ರಾಜ್ಯದ ಎಲ್ಲಾ ಎಸ್ಪಿ ಕಚೇರಿಗೆ ಸೂಚನಾ ಪತ್ರ ಕಳಿಸಿದರು. ಆದರೆ ಬಹಳಷ್ಟು ಜಿಲ್ಲಾ ಮುಖ್ಯ ರಕ್ಷಣಾಧಿಕಾರಿಗಳು ಈ ವಿಷಯವನ್ನು ಬಹಿರಂಗ ಪಡಿಸಲಿಲ್ಲ. ಅಲ್ಲಿ ಬಡ್ತಿ
ನೀಡಿ ಅನ್ಯಾಯಕ್ಕೆ ಒಳಗಾದ ಸಿಬ್ಬಂದಿಗೆ ನ್ಯಾಯ ನೀಡುವ ಕೆಲಸವೂ ನಡೆಯಲಿಲ್ಲ. 

ಪವಿತ್ರ ಪ್ರಕರಣ- ಚಿಗುರೊಡೆದ ಆಸೆ: ಈ ನಡುವೆ ಬಡ್ತಿಯಲ್ಲಿ ತಮಗಾಗಿರುವ ಅನ್ಯಾಯ ಪ್ರಶ್ನಿಸಿ ಪವಿತ್ರ ಮತ್ತಿತರು ಸಲ್ಲಿಸಿದ ಮನವಿ ಆಧರಿಸಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಬಡ್ತಿಯಲ್ಲಿನ ತಾರತಮ್ಯ ನಿವಾರಿಸಬೇಕಿದೆ. ಈಗಾಗಲೇ ಹಲವು ಜಿಲ್ಲೆಯಲ್ಲಿ ಅಲ್ಲಿನ ಜಿಲ್ಲಾ ರಕ್ಷಣಾಧಿಕಾರಿಗಳು ಎಸ್ಸಿ/ ಎಸ್ಟಿ ಸಿಬ್ಬಂದಿಯ ಪಟ್ಟಿ ತಯಾರಿಸಿ ಅರ್ಹರಲ್ಲದವರಿಗೆ ಹಿಂಬಡ್ತಿ ನೀಡಿ ಈ ಹಿಂದೆ ಆಗಿದ್ದ ಲೋಪವನ್ನು ಸರಿಪಡಿಸಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಹಿಂದಿನ ಪರಿಸ್ಥಿತಿಯೇ ಮುಂದುವರಿದಿದ್ದು, ಹಲವಾರು ಸಿಬಂದಿ ಅರ್ಹತೆ ಇದ್ದರೂ ಬಡ್ತಿಯಿಂದ ವಂಚಿತರಾಗಿದ್ದಾರೆ.

ಇದಕ್ಕೆ ನಿದರ್ಶನ ಎಂಬಂತೆ 1993ರಲ್ಲಿ ನೇಮಕವಾದ ಸುಮಾರು 150 ಜನ ಸಿಬ್ಬಂದಿ ಮುಖ್ಯ ಪೇದೆಯಾಗಿಯೇ ಮುಂದುವರಿದಿದ್ದಾರೆ. ಆದರೆ 1996 ಹಾಗೂ ಆ ನಂತರದಲ್ಲಿ ಸಾಮಾನ್ಯ ಪೇದೆಯಾಗಿ ನೇಮಕಗೊಂಡ 28 ಮಹಿಳಾ ಸಿಬ್ಬಂದಿ
ಈಗಾಗಲೇ ಎಎಸ್‌ಐ ಹಾಗೂ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಮಹಿಳಾ ಠಾಣೆ ಆರಂಭದಲ್ಲಿ ಪ್ರತ್ಯೇಕವಾಗಿ ಬಡ್ತಿ ಪಡೆಯುವುದರ ಜತೆಗೆ ಎಸ್ಸಿ ,ಎಸ್ಟಿ ಎಂಬ ಕಾರಣಕ್ಕೆ ಮತ್ತೂಂದು ಬಡ್ತಿ ಸೇರಿ ಒಟ್ಟಾರೆ ಎರಡೆರಡು ಬಡ್ತಿ ಪಡೆದವರೂ ಇದ್ದಾರೆ.

ಪಾಲನೆಯಾಗದ ಆದೇಶ: ಪವಿತ್ರ ಪ್ರಕರಣದಲ್ಲಿ 1978ರಲ್ಲಿದ್ದ ರೋಸ್ಟರ್‌ ನಿಯಮದಂತೆ ಬಡ್ತಿಗೆ ಸಂಬಂಧಿಸಿದ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ ಎಂದು ಸುಪ್ರೀಂಕೋರ್ಟ್‌ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೊಡಗು, ಹಾಸನ, ಮಂಗಳೂರು ಮತ್ತಿತರ ಜಿಲ್ಲೆಗಳಲ್ಲಿ
ಅಲ್ಲಿನ ಡಿಪಿಒ ಆಡಳಿತ ಬಡ್ತಿ ನೀಡಿಕೆಯಲ್ಲಿ ಆಗಿದ್ದ ಲೋಪವನ್ನು ಸರಿಪಡಿಸಿದೆ. ಆದರೆ ಶಿವಮೊಗ್ಗ ಡಿಪಿಒ ಮಾತ್ರ ಸುಪ್ರೀಂ ಕೋರ್ಟ್‌ ಆದೇಶ ಜಾರಿಗೆ ಹಿಂದೇಟು ಹಾಕುತ್ತಿದೆ.

ಈ ವಿಷಯದಲ್ಲಿ ಸಿಬ್ಬಂದಿಗೆ ಅನ್ಯಾಯವನ್ನು ಮನಗಂಡಿರುವ ಪೂರ್ವ ವಲಯ ಐಜಿಪಿ ಅವರು ಡಿಪಿಒ ಕಚೇರಿ ಸಿಬ್ಬಂದಿ ಸಮಕ್ಷಮ ಸಭೆ ನಡೆಸಿ 2004ರ ಆದೇಶ ಹಾಗೂ ಸುಪ್ರೀಂ ಕೋರ್ಟ್‌ ಆದೇಶದಾನುಸಾರ ಪರಿಷ್ಕೃತ ಪಟ್ಟಿ ತಯಾರಿಸುವಂತೆ ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next