ಮಂಗಳೂರು: ಬೆಳ್ತಂಗಡಿ ಮೂಲದ ಮಹಿಳೆಯೊಬ್ಬರಿಗೆ ನಗರದಲ್ಲಿ ಲೀಸ್‌ಗೆ ಮನೆ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂ. ವಂಚಿಸಿರುವ ಪ್ರಕರಣವೊಂದು ನಡೆದಿದ್ದು, ಈ ಬಗ್ಗೆ ಮಂಗಳೂರಿನ ಬಂದರು ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವಾಮಂಜೂರು ನಿವಾಸಿ ಪ್ರದೀಪ್ ಯಾನೆ ದೀಪಕ್ ಸಾವಿಯೋ ಅಂದ್ರಾದೆ (31) ಮತ್ತು ಫಳ್ನೀರ್ ನಿವಾಸಿ ಇಮ್ತಿಯಾಝ್ (43) ಬಂಧಿತರು.
ಬೆಳ್ತಂಗಡಿ ನಿವಾಸಿ ಹಾಗೂ ನಗರದ ಕರಂಗಲ್ಪಾಡಿಯ ಮೆಡಿಕಲ್ ಶಾಪ್ ಒಂದರಲ್ಲಿ ಉದ್ಯೋಗಿಯಾಗಿರುವ ಪ್ರಿಯಾ ಕೆ. ಆರ್. ಅವರಿಗೆ 2020ರ ಜೂನ್ ತಿಂಗಳಿನಲ್ಲಿ ಲೀಸ್‌ಗೆ ಮನೆ ಕೊಡಿಸುವುದಾಗಿ ಹೇಳಿ ಕೆ.ಎಸ್. ರಾವ್ ರೋಡ್‌ನ ಅಪಾರ್ಟ್‌ಮೆಂಟ್‌ನ ಒಂದು ಖಾಲಿ ಫ್ಲ್ಯಾಟ್ ತೋರಿಸಿ 2 ವರ್ಷಗಳ ಅವಧಿಗೆ ಲೀಸ್‌ಗೆಂದು ಹೇಳಿ 5 ಲಕ್ಷ ರೂ.ಗಳನ್ನು ಈ ಆರೋಪಿಗಳು ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳು ಬ್ರಿಜೇಶ್ ಎಂಬಾತನನ್ನು ಮನೆಯ ಮಾಲಕ ಮುಹಮ್ಮದ್ ಅಶ್ರಫ್ ಎಂದು ಪ್ರಿಯಾ ಅವರಿಗೆ ಪರಿಚಯಿಸಿ, ಅವರಿಂದ 5 ಲಕ್ಷ ರೂ. ಪಡೆದು ಅಗ್ರಿಮೆಂಟ್‌ಗೆ ಸಹಿ ಹಾಕಿಸಿಕೊಳ್ಳಲಾಗಿತ್ತು. ಬಳಿಕ ಪ್ರಿಯಾ ಅವರು ಮನೆಯವರ ಜತೆ ಫ್ಲ್ಯಾಟ್‌ನಲ್ಲಿ ವಾಸವಿದ್ದ ವೇಳೆ, 2021ರ ಫೆಬ್ರವರಿಯಲ್ಲಿ ಮನೆಯ ಅಸಲಿ ಮಾಲಕ ಮುಹಮ್ಮದ್ ಅಲಿ ಎಂಬವರು ತಮ್ಮ ಫ್ಲ್ಯಾಟ್‌ಗೆ ಬಂದಾಗ ಪ್ರಿಯಾಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಪ್ರಿಯಾ ಅವರು ಬಂದರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಕೇಸು ದಾಖಲಿಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದರು.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಮಂಗಳೂರಿನಿಂದ ತಪ್ಪಿಸಿಕೊಂಡಿದ್ದರು.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬೆಳಗಾವಿ ಮುಂತಾದ ಕಡೆಗಳಲ್ಲಿ ಓಡಾಡಿಕೊಂಡಿದ್ದ ಆರೋಪಿಗಳನ್ನು ಇದೇ ಫೆ. 1ರಂದು ಬಂಧಿಸಲಾಯಿತು.
ಈ ಆರೋಪಿಗಳ ವಿರುದ್ಧ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆ ಯಲ್ಲಿಯೂ ವಂಚನೆ ಪ್ರಕರಣ ದಾಖಲಾಗಿದ್ದು, ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇದಲ್ಲದೆ ಇತರ ಕಡೆಗಳಲ್ಲಿಯೂ ಈ ಆರೋಪಿಗಳು ಮೋಸ, ವಂಚನೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಗುರವಾರ ಇಲ್ಲಿ ಮಾಹಿತಿ ನೀಡಿದರು.
ಡಿಸಿಪಿಗಳಾದ ಹರಿರಾಂ ಶಂಕರ್ ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನ, ಎಸಿಪಿ ಪಿ.ಎ. ಹೆಗಡೆ ಅವರ ಮಾರ್ಗದರ್ಶನ ಹಾಗೂ ಪಿಐ ರಾಘವೇಂದ್ರ ಬೈಂದೂರು ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಗುರಪ್ಪ ಕಾಂತಿ, ಕಾನ್ಸ್‌ಟೆಬಲ್‌ಗಳಾದ ಮಾದೇವ ಮಾಂಗ್ ಮತ್ತು ಈಶ ಪ್ರಸಾದ್ ಅವರು ಪಾಲ್ಗೊಂಡಿದ್ದರು.