Advertisement

ಫೇಸ್‌ಬುಕ್‌ನಲ್ಲಿ ಪರಿಚಿತಳಾದ ಮಹಿಳೆಗೆ 18 ಲಕ್ಷ ರೂ.ವಂಚನೆ

01:54 PM Nov 08, 2022 | Team Udayavani |

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಮಹಿಳೆಯನ್ನು ಪರಿಚಯಿಸಿಕೊಂಡು ಆಕೆಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿದ ಸೈಬರ್‌ ಕಳ್ಳರು, ಕಸ್ಟಮ್ಸ್‌ ಅಧಿಕಾರಿಗಳ ಸೋಗಿನಲ್ಲಿ ಮತ್ತೆ ವಂಚಿಸಿ ಒಟ್ಟು 18.22 ಲಕ್ಷ ರೂ. ಲಪಟಾಯಿಸಿದ್ದಾರೆ.

Advertisement

ನಾಗರಬಾವಿ ನಿವಾಸಿ ರಾಜಲಕ್ಷ್ಮೀ (38) ವಂಚನೆಗೊಳಗಾದವರು. ರಾಜಲಕ್ಷ್ಮೀಗೆ ಫೇಸ್‌ಬುಕ್‌ನಲ್ಲಿ ವಿದೇಶಿ ಪ್ರಜೆಯ ಸೋಗಿನಲ್ಲಿ ಡಾ.ಜುಲಿಯೆನ್‌ ಫೆಲಿಕ್ಸ್‌ ಎಂಬಾತ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಇದಕ್ಕೆ ಸ್ಪಂದಿಸಿದ ಮಹಿಳೆಯು ಆತನ ಜತೆ ಚಾಟ್‌ ಮಾಡುತ್ತಿದ್ದರು. ನಂತರ ಆತ ಮಹಿಳೆಯ ಮೊಬೈಲ್‌ಗೆ ವಿಡಿಯೋ ಕರೆ ಮಾಡಿ ಮಾತನಾಡಲಾರಂಭಿಸಿದ್ದ. ವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಾಗೂ ಫೇಸ್‌ಬುಕ್‌ನಲ್ಲಿರುವ ರಾಜಲಕ್ಷ್ಮೀ ಫೋಟೋವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಹಣ ಕೊಡುವಂತೆ ಬ್ಲ್ಯಾಕ್‌ಮೇಲ್‌ ಮಾಡಿದ್ದ. ಆತಂಕಗೊಂಡ ರಾಜಲಕ್ಷ್ಮೀ 74 ಸಾವಿರ ರೂ. ಅನ್ನು ಆತನ ಖಾತೆಗೆ ಜಮೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಆತ, ಮಹಿಳೆ ಬಳಿ ಕ್ಷಮೆಯಾಚಿಸಿ 74 ಸಾವಿರ ರೂ.ಅನ್ನು ನಿಮ್ಮ ವಿಳಾಸಕ್ಕೆ ಪಾರ್ಸೆಲ್‌ ಕಳುಹಿಸಿರುವುದಾಗಿ ನಂಬಿಸಿದ್ದ.

ಇದಾದ ಕೆಲ ದಿನಗಳ ಬಳಿಕ ದೆಹಲಿ ಏರ್‌ ಪೋರ್ಟ್‌ ಕಸ್ಟಮ್ಸ್‌ ಅಧಿಕಾರಿಗಳ ಸೋಗಿನಲ್ಲಿ ರಾಜಲಕ್ಷ್ಮೀಗೆ ಕರೆ ಮಾಡಿದ ಅಪರಿಚಿತರು ನಿಮಗೆ ವಿದೇಶದಿಂದ ಹಣ ಬಂದಿದೆ ಎಂದು ಹೇಳಿದ್ದರು. ಇದನ್ನು ಪಡೆಯಲು ಕಸ್ಟಮ್ಸ್‌, ಜಿಎಸ್‌ಟಿ ಶುಲ್ಕ ಪಾವತಿಸುವಂತೆ ಹೇಳಿ ಹಂತ-ಹಂತವಾಗಿ 18.22 ಲಕ್ಷ ರೂ. ಅನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದರು. ನಂತರ ಸಂಪರ್ಕಕ್ಕೆ ಸಿಗದೇ ವಂಚಿಸಿದ್ದಾರೆ. ಆಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ರಾಜಲಕ್ಷ್ಮೀ ಗಮನಕ್ಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next