ಬೆಂಗಳೂರು: ರಾಜ್ಯ ಗೃಹ ನಿರ್ಮಾಣ ಮಂಡಳಿ ವತಿಯಿಂದ ಕಡಿಮೆ ಬೆಲೆಗೆ ಫ್ಲ್ಯಾಟ್ ಕೊಡಿಸುವುದಾಗಿ ಹಲವು ಜನರಿಗೆ ಲಕ್ಷಾಂತರ ರೂ. ವಂಚಿಸಿದ್ದ ಆರೋಪಿಯ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬನಶಂಕರಿ ನಿವಾಸಿ ಧನಂಜಯ್ ಆರೋಪಿ. ನಟ ಅನಂತ್‌ನಾಗ್ ಅಭಿನಯದ “ಯಾರಿಗೂ ಹೇಳ್ಬೇಡಿ’ ಸಿನಿಮಾದಲ್ಲಿ ಬರುವ ದೃಶ್ಯದ ಮಾದರಿಯಲ್ಲೇ ಆರೋಪಿಯು ಹಲವು ಮಹಿಳೆಯರಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ.
ಸಮಾಜ ಸೇವಕ ಎಂದು ಪರಿಚಯಿಸಿಕೊಳ್ಳುತ್ತಿದ್ದ ಧನಂಜಯ್, ಮಧ್ಯಮ ವರ್ಗದ ಮಹಿಳೆಯರನ್ನೇ ಗುರಿಯಾಗಿಸುತ್ತಿದ್ದ. ಗೃಹ ಮಂಡಳಿ ವತಿಯಿಂದ ಕಡಿಮೆ ಬೆಲೆಗೆ ಮನೆ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಮುಂಗಡ ಪಡೆಯುತ್ತಿದ್ದ. ಈ ವಿಚಾರವನ್ನು “ಯಾರಿಗೂ ಹೇಳ್ಬೇಡಿ’ ಎಂದು ಹಣದೊಂದಿಗೆ ಎಸ್ಕೇಪ್ ಆಗುತ್ತಿದ್ದ. ಹಲವು ತಿಂಗಳಾದರೂ ಮನೆ ಕೊಡಿಸದ ಕಾರಣ ಹಣ ಹಿಂತಿರುಗಿಸುವಂತೆ ಕೇಳಿದಾಗ, ನಿಮಗೊಂದು ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
22 ಲಕ್ಷದ ರೂ. ವಂಚನೆ: ಬನಶಂಕರಿ ಹನುಮಗಿರಿ ಲೇಔಟ್ ನಿವಾಸಿ ಮಧು ಮಾಲತಿ ರವೀಂದ್ರ ಅವರನ್ನು 2020 ಜನವರಿಯಲ್ಲಿ ಭೇಟಿಯಾಗಿದ್ದ ಧನಂಜಯ್ ತನ್ನನ್ನು ಸಮಾಜ ಸೇವಕ ಎಂದು ಪರಿಚಯಿಸಿಕೊಂಡಿದ್ದ. ಕರ್ನಾಟಕ ಗೃಹ ನಿರ್ಮಾಣ ಮಂಡಳಿ ವತಿಯಿಂದ ಕಡಿಮೆ ಬೆಲೆಗೆ ಫ್ಲ್ಯಾಟ್ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಗೃಹ ನಿರ್ಮಾಣ ಮಂಡಳಿಯ 1 ಪ್ಲ್ರಾಟ್‌ಗೆ ಒಟ್ಟು 54 ಲಕ್ಷ ರೂ. ಮೌಲ್ಯವಿದೆ. ಆದರೆ, ನನಗೆ ಅಲ್ಲಿನ ಅಧಿಕಾರಿಗಳ ಪರಿಚಯವಿದ್ದು, ನಿಮಗೆ 18 ಲಕ್ಷ ರೂ. ಗೆ ಫ್ಲ್ಯಾಟ್ ಕೊಡಿಸುತ್ತೇನೆ. 10 ಲಕ್ಷ ರೂ. ಕೊಡಬೇಕು ಎಂದು ಹೇಳಿದ್ದ. ಮಧು ಮಾಲತಿ ಹಂತ-ಹಂತವಾಗಿ ಆರೋಪಿಗೆ 10 ಲಕ್ಷ ರೂ. ಕೊಟ್ಟಿದ್ದಾರೆ.
2 ವರ್ಷ ಕಳೆದರೂ ಪ್ಲ್ರಾಟ್ ಕೊಡಿಸದ ಹಿನ್ನೆಲೆಯಲ್ಲಿ ಹಣ ಹಿಂತಿರುಗಿಸುವಂತೆ ಮಧು ಮಾಲತಿ ಕೇಳಿದಾಗ ವರಸೆ ಬದಲಿಸಿದ ಆರೋಪಿ, ನಿಮಗೆ ಫ್ಲ್ಯಾಟ್ ಕೊಡಿಸುವುದಿಲ್ಲ, ಹಣವನ್ನೂ ಹಿಂತಿಸುಗಿಸುವುದಿಲ್ಲ. ಇನ್ನೊಮ್ಮೆ ಹಣ ಕೇಳಿದರೆ ನಿಮಗೆ ಒಂದು ಗತಿ ಕಾಣಿಸುತ್ತೇನೆ ಎಂದು ಬೆದರಿಸಿದ್ದ. ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಕವಿತಾ ಲಕ್ಷ್ಮಣ್ ಹಾಗೂ ಮತ್ತೂರ್ವ ಮಹಿಳೆಯಿಂದ ಆರೋಪಿಯು ತಲಾ 6 ಲಕ್ಷ ರೂ. ಪಡೆದು ವಂಚಿಸಿರುವುದು ಮಧು ಮಾಲತಿ ಗಮನಕ್ಕೆ ಬಂದಿತ್ತು.
ಇದೀಗ ವಂಚನೆಗೊಳಗಾದ ಮೂವರು ಮಹಿಳೆಯರೂ ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡಿದ್ದು, ತಲೆಮರೆಸಿ ಕೊಂಡಿರುವ ಧನಂಜಯ್‌ಗಾಗಿ ಶೋಧ ನಡೆಸುತ್ತಿದ್ದೇವೆ. ಆರೋಪಿಯ ವಿರುದ್ಧ ಈ ಹಿಂದೆಯೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದೇ ಮಾದರಿಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿರುವುದು ಗೊತ್ತಾಗಿದೆ. ತಮಿಳುನಾಡಿನ ಕೆಲವೆಡೆ ಹಲವು ಜನರಿಗೆ ವಂಚಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ಬನಶಂಕರಿ ಠಾಣೆ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ ತಿಳಿಸಿದ್ದಾರೆ.