ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ ಆಪ್ತ ಎಂದು ಹೇಳಿಕೊಂಡು ತಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚಿಸಿದ ಇಬ್ಬರು ವ್ಯಕ್ತಿಗಳ ವಿರುದ್ಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್.ಆರ್.ನಗರ ನಿವಾಸಿ ರಾಮಸ್ವಾಮಿ ಎಂಬವರು ನೀಡಿದ ದೂರಿನ ಮೇರೆಗೆ ತುಮಕೂರಿನ ಕೊರಟಗೆರೆ ನಿವಾಸಿಗಳಾದಲೋಕೇಶ್ವರ ನಾಯಕ್ ಮತ್ತು ಮೊಹಮ್ಮದ್ ಜುಬೇರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಲೋಕೇಶ್ವರ ನಾಯಕ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದು, ಮೊಹಮ್ಮದ್ ಜುಬೇರ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಮೊಹಮ್ಮದ್ ಜುಬೇರ್ 2022ರಲ್ಲಿ ದೂರುದಾರ ರಾಮ ಸ್ವಾಮಿಗೆ ತಾನೂ ಪರಮೇಶ್ವರ ಅವರ ಆಪ್ತನಾಗಿದ್ದು, ತಮ್ಮ ಮಗಳಿಗೆ ತುಮಕೂರಿನ ಸಿದ್ಧಗಂಗಾ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆ ಎಂದು ನಂಬಿಸಿ 4.5 ಲಕ್ಷ ರೂ.ಪಡೆದುಕೊಂಡಿದ್ದಾನೆ. ಅದಕ್ಕೆ ಲೋಕೇಶ್ವರ ನಾಯಕ್ ಕೂಡ ಸಹಕಾರ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.
2022ರಲ್ಲಿ ಜಯನಗರದ ರೆಸ್ಟೋರೆಂಟ್‌ನಲ್ಲಿ ಭೇಟಿಯಾದ ಆರೋಪಿಗಳು ಸಿದ್ಧಗಂಗಾ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆಂದು 4.5 ಲಕ್ಷ ರೂ. ಅನ್ನು ಪೇಟಿಎಂ ಮೂಲಕ ಪಡೆದುಕೊಂಡಿದ್ದಾನೆ. ಅಲ್ಲದೆ, ಕಾಲೇಜಿನ ಹೆಸರಿನ ರಸೀದಿಯನ್ನು ಜುಬೇರ್ ನೀಡಿದ್ದ. ನಂತರ ಕಾಲೇಜಿನಿಂದ ಯಾವುದೇ ಸಂದೇಶಗಳು ಬಂದಿಲ್ಲ. ಬಳಿಕ ಕಾಲೇಜಿಗೆ ಹೋಗಿ ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ದೂರು ನೀಡಿದ್ದಾರೆ.
ಆರೋಪಿಗಳ ಪೈಕಿ ಲೋಕೇಶ್ವರ ನಾಯಕ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ. ಮೊಹಮ್ಮದ್ ಜುಬೇರ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.
ತಡವಾಗಿ ದೂರು: ವಂಚನೆ ಬಗ್ಗೆ ಆರೋಪಿಗಳನ್ನು ಸಂಪರ್ಕಿಸಿದಾಗ ಹಣವಾಪಸ್ ಕೊಡುವುದಾಗಿ ದೂರುದಾರರಿಗೆ ಭರವಸೆ ನೀಡುತ್ತಿದ್ದರು. ಆದರೆ, ಒಂದು ವರ್ಷವಾದರೂ ಹಣ ಹಿಂದಿರುಗಿಸದ ಕಾರಣ ಇದೀಗ ಬಂದು ದೂರು ನೀಡಿದ್ದಾರೆ. ವಂಚನೆ ಸಂದರ್ಭದಲ್ಲಿ ಪರಮೇಶ್ವರ ಅವರು ಸಚಿವರಾಗಿರಲಿಲ್ಲ. ಇದೀಗ ಗೃಹ ಸಚಿವರಾಗಿದ್ದಾರೆ. ಹೀಗಾಗಿ ಗೃಹ ಸಚಿವರ ಆಪ್ತ ಎಂದು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.