ಬೆಂಗಳೂರು: ಸೇನಾ ಸಿಬ್ಬಂದಿ ಸೋಗಿನಲ್ಲಿ ಮನೆ ಬಾಡಿಗೆಗೆ ಪಡೆಯುವುದಾಗಿ ನಂಬಿಸಿದ ಸೈಬರ್ ಕಳ್ಳರು ಮಹಿಳಾ ಟೆಕಿಗೆ ಬರೊಬ್ಬರಿ 9.95 ಲಕ್ಷ ರೂ. ವಂಚಿಸಿದ್ದಾರೆ.
ವಿಜಯನಗರದ ನಿವಾಸಿ ನವ್ಯಾ (28) ಮನೆ ಬಾಡಿಗೆಗೆ ನೀಡುವು ದಾಗಿ ಆ್ಯಪ್‌ವೊಂದರಲ್ಲಿ ಜಾಹೀರಾತು ಹಾಕಿದ್ದರು. ಇತ್ತೀಚೆಗೆ ಇವರನ್ನು ಸಂಪರ್ಕಿಸಿದ ಪರಿಚಿತನೊಬ್ಬ ತಾನು ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ನಿಮ್ಮ ಮನೆಗೆ ಬಾಡಿಗೆಗೆ ಬರುವುದಾಗಿ ಹೇಳಿದ್ದ. ಆದರೆ, ಸೇನೆಯ ನಿಯಮದ ಪ್ರಕಾರ ನೀವು ಮುಂಗಡವಾಗಿ ನಮ್ಮ ಖಾತೆಗೆ ಹಣ ಜಮೆ ಮಾಡಬೇಕಾಗುತ್ತದೆ ಎಂದು ನಂಬಿಸಿದ್ದ. ಆತನ ಮಾತು ಕೇಳಿದ ನವ್ಯಾ ಆರಂಭದಲ್ಲಿ ಸ್ವಲ್ಪ ಹಣ ವನ್ನು ಆತನ ಖಾತೆಗೆ ಜಮೆ ಮಾಡಿದ್ದರು. ಇದಾದ ಬಳಿಕ ನೀವು ಕಳುಹಿಸಿದ ಹಣ ಪುನಃ ನಿಮ್ಮ ಖಾತೆಗೆ ಜಮೆ ಮಾಡಬೇಕಾದರೆ ಮತ್ತಷ್ಟು ಹಣ ಕಳುಹಿಸಬೇಕಾಗುತ್ತದೆ ಎಂದು ಹೇಳಿದ್ದ. ಅತನ ಮಾತು ನಂಬಿದ ನವ್ಯಾ ಹಂತ-ಹಂತವಾಗಿ 9.95 ಲಕ್ಷ ರೂ. ಜಮೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಅಪರಿಚಿತ ಮತ್ತೆ ಹಣ ಜಮೆ ಮಾಡಲು ಹೇಳಿದಾಗ ಅನುಮಾನಗೊಂಡ ನವ್ಯಾ ತಮ್ಮ ಪರಿಚಿತರಿಗೆ ಈ ಸಂಗತಿ ಹೇಳಿದ್ದರು. ಬಳಿಕ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.