Advertisement

ಗಾಣಗಾಪುರ ದೇವರ ಹೆಸರಿನಲ್ಲಿ ವಂಚನೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಚಿವ ನಿರಾಣಿ

06:50 PM Jun 25, 2022 | Team Udayavani |

ಕಲಬುರಗಿ: ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ ದೇವಲ್ ಗಾಣಗಾಪುರ ದತ್ತಾತ್ರೇಯ ದೇವರ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ವಂಚಿಸಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆ ರಾಜ್ಯದಲ್ಲಿ ಎಲ್ಲೂ ಇಂತಹ ಪ್ರಕರಣ ನಡೆಯಬಾರದು. ಹೀಗಾಗಿ ಉನ್ನತ ಮಟ್ಟದ ತನಿಖೆಗೆ ವಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಚರ್ಚಿಸುವುದಾಗಿ ಸ್ಪಷ್ಟ ಪಡಿಸಿದರು.

ಇದು ಆರ್ಥಿಕತೆಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದ್ದರಿಂದ ಮೊದಲು ಎಷ್ಟು ಹಾನಿಯಾಗಿದೆ ಎಂಬುದನ್ನು ಅರಿಯಲು ತಂಡವೊಂದಕ್ಕೆ ಕಾರ್ಯವಹಿಸಲಾಗುವುದು ಎಂದು ತಿಳಿಸಿದರು.

ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ ಹಾನಿಯಾಗಿರುವುದನ್ನು ಕಲಬುರಗಿ ಜಿಲ್ಲಾಧಿಕಾರಿಗಳು ಪತ್ತೆ ಮಾಡಿದ್ದಾರಲ್ಲದೇ ಮಾಧ್ಯಮಗಳು ಸಹ ವರದಿ ಮಾಡಿವೆ. ಒಟ್ಟಾರೆ ಇದು ಗಂಭೀರ ಪ್ರಕರಣವಾಗಿದ್ದು, ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ದೇವಲ್ ಗಾಣಗಾಪುರ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಿದ್ದು, ಗುಜರಾತ್ ಸಾಬರಮತಿಯಲ್ಲಿನ ರಿವರ್ ಪ್ಲಾಂಟ್ ಹಾಗೂ ಮಾಸ್ಟರ್ ಪ್ಲ್ಯಾನ್ ಗಾಗಿ 40 ಕೋ.ರೂ ಮೊತ್ತದ ಯೋಜನೆ‌ ರೂಪಿಸಲಾಗುತ್ತಿದೆ. ಸಿಎಸ್ ಆರ್ ಸೇರಿ ದಂತೆ ಸ್ಥಳೀಯ ನಿಧಿ ಬಳಕೆ ಮಾಡಿಕೊಳ್ಳಲಾಗುವುದು ಇದಕ್ಕಾಗಿ ಕ್ರಿಯಾಯೋಜನೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು‌ ತಿಳಿಸಿದರು.

Advertisement

ಕಲಬುರಗಿಯಲ್ಲಿ ಮೆಗಾ ಟೆಕ್ಸ್ ಟೈಲ್ ಪಾಕ್೯ : 25 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆಯ ಮೆಗಾ ಟೆಕ್ಸಟೈಲ್ ಪಾರ್ಕ ಕಲಬುರಗಿಯಲ್ಲಿ ಸ್ಥಾಪಿಸುವ ಬಗ್ಗೆ ದೃಢ ವಿಶ್ವಾಸ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಇದೇ ಸಂದರ್ಭದಲ್ಲಿ ಹೇಳಿದರು.

ಕೇಂದ್ರದಿಂದ ಈಗಾಗಲೇ ಜವಳಿ ಮಂತ್ರಾಲಯದ ಅಧಿಕಾರಿಗಳ ತಂಡ ಕಲಬುರಗಿಗೆ ಬಂದು ಸ್ಥಳ ಪರಿಶೀಲನೆ ನಡೆಸಿದೆ ಎಂದರು.

ಪ್ರಮುಖವಾಗಿ ಜಿಲ್ಲೆಯ ಹೊನ್ನಕಿರಣಗಿ ಬಳಿ ಥರ್ಮಲ್ ಪವರ್ ಗಾಗಿ ದಶಕದ ಹಿಂದೆ 1500 ಸ್ವಾಧೀನ ಪಡಿಸಿಕೊಂಡ ಭೂಮಿಯು ಪವರ್ ಕಾರ್ಪೊರೇಷನ್ ಲಿಮಿಟೆಡ್ (ಪಿಸಿಎಲ್) ಅಧೀನದಲ್ಲಿರುವುದನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಹೀಗಾಗಿ ಹಾದಿ ಸುಗಮವಾಗಿದೆ. ಪ್ರಮುಖವಾಗಿ ಟೆಕ್ಸ್ ಟೈಲ್ ಪಾರ್ಕ್ ಗೆ ಬರುವ ಕಂಪನಿಗಳಿಗೆ ವಿದ್ಯುತ್ ದರ ರಿಯಾಯಿತಿ, ಸಾಲದ ಬಡ್ಡಿ ಕಡಿತ ಸೇರಿದಂತೆ ಇತರ ರಿಯಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಒಟ್ಟಾರೆ ರಾಜ್ಯ ಸರ್ಕಾರದಿಂದ ಎಲ್ಲ ಮೂಲಭೂತ ಸೌಕರ್ಯಗಳ ನ್ನು ಕಲ್ಪಿಸಲಾಗುವುದು ಎಂದು ಸಚಿವರು ವಿವರಣೆ ನೀಡಿದರು.

ಇದನ್ನೂ ಓದಿ : ಚಾರ್ಲಿ ಸಿನಿಮಾ ನೋಡಿ ಅಳುವ ಮುಖ್ಯಮಂತ್ರಿಗಳಿಗೆ ಜನರ ನೋವು ಅರ್ಥವಾಗುತ್ತಿಲ್ಲವೇ ? : ಸೊರಕೆ

ಟೆಕ್ಸ್ ಟೈಲ್ ಪಾರ್ಕ್ ನಲ್ಲಿ ಮಹಿಷಿ ವರದಿಯಂತೆ ಸ್ಥಳೀಯ ವಾಗಿ ಉದ್ಯೋಗವಕಾಶ ಕಲ್ಪಿಸಲು ನಿಗಾ ವಹಿಸಲಾಗುವುದು. ಸೋಲಾರ್ ಪಾರ್ಕ್ ಬೇರೆ ಸ್ಥಳದಲ್ಲಿ ಸ್ಥಾಪಿಸಲಾಗುವುದು ಎಂದು ಕೈಗಾರಿಕಾ ಸಚಿವರು ಸ್ಪಷ್ಟಪಡಿಸಿದರು. ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ, ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next