Advertisement

“ಬೂಸ್ಟರ್‌ ಡೋಸ್‌’ಹೆಸರಲ್ಲಿ ವಂಚನೆ ಸಾಧ್ಯತೆ: ಸೈಬರ್‌ ಭದ್ರತಾ ತಜ್ಞರ ಎಚ್ಚರಿಕೆ

09:55 AM May 07, 2022 | Team Udayavani |

ಮಂಗಳೂರು: ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವರಿಗೆ ನೀಡಲಾಗುವ “ಬೂಸ್ಟರ್‌ ಡೋಸ್‌’ (ಮುನ್ನೆಚ್ಚರಿಕೆ ಲಸಿಕೆ) ಹೆಸರಲ್ಲಿ ವಂಚನೆಯಾಗುವ ಸಾಧ್ಯತೆ ಬಗ್ಗೆ ಸೈಬರ್‌ ತಜ್ಞರು ಎಚ್ಚರಿಸಿದ್ದಾರೆ.

Advertisement

ಬೂಸ್ಟರ್‌ ಡೋಸ್‌ ಪಡೆಯಲಿರುವವರಿಗೆ ಕರೆ ಮಾಡುವವರು “ನಾವು ಆರೋಗ್ಯ ಇಲಾಖೆಯಿಂದ ಕರೆ ಮಾಡುತ್ತಿದ್ದು ನೀವು ಬೂಸ್ಟರ್‌ ಡೋಸ್‌ ತೆಗೆದುಕೊಳ್ಳ ಬೇಕಾಗಿದೆ. ಅಗತ್ಯ ಮಾಹಿತಿಗಳನ್ನು ನೀಡಬೇಕು’ ಎನ್ನುತ್ತಾರೆ. ಆಧಾರ್‌ ಕಾರ್ಡ್‌ ಮೊದಲಾದ ಮಾಹಿತಿಗಳನ್ನು ಪಡೆಯು ತ್ತಾರೆ. ಅನಂತರ ಅದರ ಮೂಲಕ ಬ್ಯಾಂಕ್‌ ಖಾತೆಯ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ ಎಂದು ಸೈಬರ್‌ ತಜ್ಞರು ತಿಳಿಸಿದ್ದಾರೆ.

ಮಾಹಿತಿ ನೀಡದಿರಿ
ಬೂಸ್ಟರ್‌ ಡೋಸ್‌ ಬಗ್ಗೆ ಆಟೋಮೇಟೆಡ್‌ ಅಲರ್ಟ್‌ ಮೆಸೇಜ್‌ ಬರುತ್ತದೆ. ಅಲ್ಲದೆ ಸ್ಥಳೀಯ ಆರೋಗ್ಯ ಕಾರ್ಯಕತೆರ್ಯರು, ಆಶಾ ಕಾರ್ಯಕರ್ತೆಯರು ಕರೆ ಮಾಡಿ ಅಥವಾ ಮನೆ ಮನೆಗೆ ತೆರಳಿ ಮಾಹಿತಿ ನೀಡುತ್ತಾರೆ. ಅವರು ಬೂಸ್ಟರ್‌ ಡೋಸ್‌ ಪಡೆಯಬೇಕಾಗಿರುವುದರಿಂದ ಯಾವುದೇ ಮಾಹಿತಿ, ದಾಖಲೆ ಕೇಳುವುದಿಲ್ಲ. ಈಗಾಗಲೇ ಮೊದಲ ಡೋಸ್‌ ಪಡೆಯುವಾಗ ನೀಡಿದ ಮಾಹಿತಿ ಇಲಾಖೆ ಬಳಿ ಇರುತ್ತದೆ. ಯಾರಾದರೂ ಕರೆ ಮಾಡಿ ಆಧಾರ್‌ ಮತ್ತಿತರ ದಾಖಲೆ ವಿವರ ಕೇಳಿದರೆ ನೀಡಬಾರದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯರು ಗುರಿ
ಸದ್ಯ ಸರಕಾರಿ ಆಸ್ಪತ್ರೆಗಳಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ. ಹಾಗಾಗಿ ಹಿರಿಯರನ್ನೇ ಗುರಿಯಾಗಿಸಿಕೊಂಡು ಸೈಬರ್‌ ವಂಚಕರು ಕರೆ ಮಾಡಿ ಮಾಹಿತಿ ಪಡೆಯುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ತಜ್ಞರು.

ಮಾಹಿತಿ ಅಪ್‌ಲೋಡ್‌ ಮಾಡಿದವರಿಗೆ ಸಂದೇಶ
ಕೆಲವರು ತಮ್ಮ ಎರಡು ಡೋಸ್‌ ಲಸಿಕೆ ಆದ ಅನಂತರ ಕೋವಿಡ್‌ ಲಸಿಕೆಯ ಪ್ರಮಾಣಪತ್ರ, ಇತರ ಮಾಹಿತಿಯನ್ನು ಫೇಸ್‌ಬುಕ್‌ ಮತ್ತಿತರ ಸಾಮಾಜಿಕ ಜಾಲತಾಣಗಳಿಗೆ ಹಂಚಿಕೊಂಡಿದ್ದರು. ಅದನ್ನು ನೋಡಿ ಸೈಬರ್‌ ವಂಚಕರು ಕರೆ ಮಾಡುತ್ತಾರೆ, ಇನ್ನು ಕೆಲವರಿಗೆ ಇ-ಮೇಲ್‌ ಸಂದೇಶ ಬರುತ್ತದೆ. ಹಾಗಾಗಿ ಎಚ್ಚರದಿಂದ ಇರುವಂತೆ ತಜ್ಞರು ಮತ್ತು ಸೈಬರ್‌ ಕ್ರೈಂ ಪೊಲೀಸರು ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next