ಬೆಂಗಳೂರು: ಚಲನಚಿತ್ರ ನಿರ್ಮಾಣ ಮಾಡಲೆಂದು ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ. ನಗದು ಪಡೆದು ವಾಪಾಸ್ ನೀಡದೆ ವಂಚಿಸಿರುವ ಬಗ್ಗೆ ಕಿರುತೆರೆಯ ಹಿರಿಯ ನಟಿ ಮಂಜುಳಾ ಎಂಬುವರು ಕಿರುತೆರೆ ನಿರ್ದೇಶಕ ನವೀನ್ ರೈ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಧಾರವಾಹಿಗಳಲ್ಲಿ ನಟನೆ ಮಾಡುವಾಗ ಪರಿಚಯವಾಗಿದ್ದ ನವೀನ್ ರೈ, ಎರಡು ಧಾರವಾಹಿ ನಿರ್ದೇಶನ ಮಾಡಿದ್ದ. ಈ ಮಧ್ಯೆ ಹೊಸ ಸಿನಿಮಾ ಮಾಡುತ್ತಿದ್ದು ಬಂಡವಾಳ ಹೂಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ 6 ತಿಂಗಳ ಹಿಂದೆ 200 ಗ್ರಾಂ. ಚಿನ್ನಾಭರಣ ಪಡೆದಿದ್ದ.
ಕೆಲ ದಿನಗಳ ಬಳಿಕ ಮತ್ತೆ ಭೇಟಿಯಾಗಿ ನನ್ನ ಮಗಳ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ. ನಗದು ತೆಗೆದುಕೊಂಡಿದ್ದ. ಇವುಗಳನ್ನು ವಾಪಾಸ್ ನೀಡುತ್ತಿಲ್ಲ. ಅಲ್ಲದೆ, ಇತ್ತೀಚೆಗೆ ಆತ ವಾಸ ಮಾಡುತ್ತಿದ್ದ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಮಂಜುಳಾ ದೂರಿನಲ್ಲಿ ಹೇಳಿದ್ದಾರೆ.
ಕತ್ರಿಗುಪ್ಪೆ ನಿವಾಸಿಯಾಗಿರುವ ಮಂಜುಳಾ, ತಾವು ಧಾರವಾಹಿ ನಟಿ ಎಂದು ಹೇಳಿಕೊಂಡಿದ್ದಾರೆ. ಅವರ ಪುತ್ರಿ ವಿದೇಶದಲ್ಲಿದ್ದು, ಮಂಜುಳಾ ಒಬ್ಬರೇ ವಾಸವಿದ್ದಾರೆ. ನವೀನ್ ರೈ ಹಲವು ವರ್ಷಗಳಿಂದ ಅವರಿಗೆ ಪರಿಚಿತನಾಗಿದ್ದು, ಸಣ್ಣಪುಟ್ಟ ಸಹಾಯ ಮಾಡಿಕೊಂಡು ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದ.
ಈ ಮಧ್ಯೆ ಸಿನಿಮಾ ನಿರ್ಮಾಣಕ್ಕೆಂದು ಚಿನ್ನಾಭರಣ ಪಡೆದಿದ್ದ ಎಂದು ಮಂಜುಳಾ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.