Advertisement

ಫ್ರಾಡ್ ಕಾಲ್ ಸಂಚು

01:34 PM Apr 13, 2020 | mahesh |

ಬ್ಯಾಂಕ್‌ ಸಿಬ್ಬಂದಿ ಎಂದು ಹೇಳಿಕೊಂಡು ಗ್ರಾಹಕರಿಗೆ ಕರೆ ಮಾಡುವ ವಂಚಕರು, ನಯವಾಗಿ ಮಾತಾಡುತ್ತಲೇ ಅತಿಮುಖ್ಯ ಮಾಹಿತಿಗಳನ್ನು ಪಡೆದು, ಕ್ಷಣಮಾತ್ರದಲ್ಲಿ ಪಂಗನಾಮ ಹಾಕುವ ಪ್ರಕರಣಗಳು ವರದಿಯಾಗುತ್ತಿವೆ…

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ, ಜನರಿಗೆ ಇ.ಎಂ.ಐ. ಕಟ್ಟುವುದು ಕಷ್ಟ ಎಂದರಿತ ರಿಸರ್ವ್‌ ಬ್ಯಾಂಕ್‌, ಮೂರು ತಿಂಗಳ ಮುಂದೂಡಿಕೆಯ ಆಯ್ಕೆಯನ್ನು ಒದಗಿಸುವಂತೆ ಬ್ಯಾಂಕುಗಳಿಗೆ ಸೂಚಿಸಿತ್ತು. ಬ್ಯಾಂಕುಗಳು ಅದರಂತೆ ತಮ್ಮ ಗ್ರಾಹಕರಿಗೆ, ಮಾರ್ಚ್‌ 31- ಮೇ 21ರ ಒಳಗೆ ಬೀಳುವ ಲೋನ್‌, ಕ್ರೆಡಿಟ್‌ ಕಾರ್ಡ್‌ ಬಿಲ್‌ ಮತ್ತು ಇ.ಎಂ.ಐ. ಪಾವತಿಯನ್ನು ಮೂರು ತಿಂಗಳ ಕಾಲ ಮುಂದೂಡುವ
ಆಯ್ಕೆಯನ್ನು ನೀಡಿದ್ದವು. ಬ್ಯಾಂಕುಗಳು ಮೊದಲ ಬಾರಿ ಯಾವುದೇ ಹೊಸ ಸವಲತ್ತನ್ನು ಘೋಷಿಸಿದಾಗ, ಗ್ರಾಹಕರಿಗೆ ಅದರ ಬಗ್ಗೆ ಅನೇಕ ಗೊಂದಲಗಳು ಮೂಡುವುದು ಸಹಜ. ಇಂಥ ಸಂದರ್ಭದಲ್ಲಿ, ಬ್ಯಾಂಕುಗಳ ಪ್ರತಿನಿಧಿಗಳೊಂದಿಗೆ ಮಾತನಾಡಿ, ತಮ್ಮ ಅನುಮಾನ, ಗೊಂದಲಗಳನ್ನು ಬಗೆಹರಿಸಿಕೊಳ್ಳುವುದು ಕೂಡಾ ಸಹಜವೇ. ಈ ಸನ್ನಿವೇಶವನ್ನು ದುರುಪಯೋಗ ಪಡಿಸಿಕೊಂಡು, ಗ್ರಾಹಕರನ್ನು ವಂಚಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದು, ಬ್ಯಾಂಕುಗಳ ನಿದ್ದೆಗೆಡಿಸಿದೆ. ವಂಚಕರು, ಬ್ಯಾಂಕುಗಳ ಪ್ರತಿನಿಧಿಯಂತೆ ತೋರ್ಪಡಿಸಿಕೊಂಡು, ಗ್ರಾಹಕರಿಂದ ಖಾತೆಯ ವಿವರಗಳನ್ನು ಪಡೆದು ಹಣ ಲಪಟಾಯಿಸುತ್ತಿದ್ದಾರೆ. ಇದೀಗ, ಎಸ್‌ಬಿಐ, ಎಚ್‌ಡಿಎಫ್ಸಿ, ಐಸಿಐಸಿಐ ಮುಂತಾದ ದೊಡ್ಡ ದೊಡ್ಡ ಬ್ಯಾಂಕುಗಳು, ತಮ್ಮ ಗ್ರಾಹಕರಿಗೆ ಈ ಹೊಸ ಬಗೆಯ ವಂಚನೆ ಕುರಿತು ಎಚ್ಚರದಿಂದಿರುವಂತೆ ಸೂಚಿಸುತ್ತಿವೆ.

ಇ.ಎಂ.ಐ. ಮುಂದೂಡಿಕೆ ಸ್ಕೀಮನ್ನು ಬಳಸಿ ವಂಚಕರು ಯಾವ ರೀತಿ ಮೋಸ ಮಾಡುತ್ತಾರೆ, ಅದರಿಂದ ಜನರು ಹೇಗೆ
ತಪ್ಪಿಸಿಕೊಳ್ಳಬಹುದು ಎನ್ನುವುದರ ವಿವರ ಇಲ್ಲಿದೆ.

1 ವಂಚಕ ಕಾಲ್‌ ಮಾಡುತ್ತಾನೆ
ಶುರುವಿನಲ್ಲಿ ವಂಚಕ, ಬ್ಯಾಂಕ್‌ ಗ್ರಾಹಕರಿಗೆ ಕರೆ ಮಾಡುತ್ತಾನೆ. ತನ್ನನ್ನು ಬ್ಯಾಂಕ್‌ ಪ್ರತಿನಿಧಿ ಎಂದು ಪರಿಚಯಿಸಿಕೊಳ್ಳುತ್ತಾನೆ. ನಂತರ, ಬ್ಯಾಂಕುಗಳು ಘೋಷಿಸಿರುವ ಇ.ಎಂ.ಐ. ಮುಂದೂಡಿಕೆ ಸ್ಕೀಮಿನ ಉಪಯೋಗ ಪಡೆದುಕೊಳ್ಳುವುದು ಹೇಗೆ ಎಂದು ವಿವರಿಸುವುದಾಗಿ ಹೇಳುತ್ತಾನೆ.

2 ಅಧಿಕೃತ ಕರೆ ಎಂದು ನಂಬಿಸಲು ಪ್ರಯತ್ನಿಸುತ್ತಾನೆ
ವಂಚಕ, ತಾನು ನಿಜಕ್ಕೂ ಬ್ಯಾಂಕ್‌ ಪ್ರತಿನಿಧಿ, ಇದು ಬ್ಯಾಂಕಿನಿಂದಲೇ ಬಂದ ಕರೆ ಎಂದು ನಂಬಿಸಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ಆ ಗ್ರಾಹಕನ ಜನ್ಮ ದಿನಾಂಕ, ಆಧಾರ್‌ ಕಾರ್ಡ್‌ ನಂಬರ್‌, ವಿಳಾಸ ಮತ್ತಿತರ ಮಾಹಿತಿಯನ್ನು ಕೇಳುತ್ತಾ, ಸರಿ ಇದೆ ತಾನೆ ಎಂದೆಲ್ಲಾ ನಯವಾಗಿ ಮಾತಾಡುತ್ತಾನೆ. ಇದರಿಂದಾಗಿ, ಗ್ರಾಹಕರಿಗೆ ವಂಚಕನ ಮೇಲೆ ಅನುಮಾನ ಬರದಿರುವ ಸಾಧ್ಯತೆ ಹೆಚ್ಚಿರುತ್ತದೆ.

Advertisement

3 ವಿವರಣೆ ನೀಡುತ್ತಾನೆ
ವಂಚಕ,  ತಾನು ಗ್ರಾಹಕನಿಗೆ ಸಹಾಯ ಮಾಡುತ್ತಿರುವಂತೆ ನಟಿಸುತ್ತಾ ಇ.ಎಂ.ಐ. ಸ್ಕೀಮಿನ ಷರತ್ತುಗಳನ್ನು ತಿಳಿಸುತ್ತಾನೆ. ಆ ಸ್ಕೀಮನ್ನು ಪಡೆದುಕೊಳ್ಳುವುದು ಹೇಗೆ ಎಂದೂ ಹೇಳುತ್ತಾನೆ.

4 ಆನ್‌ಲೈನ್‌ ಫಾರ್ಮ್ ತುಂಬಲು ಹೇಳುತ್ತಾನೆ
ಮುಂದಿನ ಹಂತದಲ್ಲಿ ಆನ್‌ಲೈನ್‌ ಅರ್ಜಿಯೊಂದನ್ನು ಕಳಿಸಿ, ಅದನ್ನು ತುಂಬಿಸಿ ಮರಳಿಸುವಂತೆ ಹೇಳುತ್ತಾನೆ. ಈ ವೇಳೆಗೆ, ವಂಚಕನ ಮಾತಿಗೆ ಮರುಳಾಗಿದ್ದ ಗ್ರಾಹಕ, ಫಾರ್ಮ್ ಭರ್ತಿಮಾಡಿ ಮರಳಿಸುತ್ತಾನೆ. ಆ ಫಾರ್ಮಿನಲ್ಲಿ ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ ನಂಬರ್‌, ಸಿ.ವಿ.ವಿ ಸಂಖ್ಯೆ (ಕಾರ್ಡ್‌ನ ಹಿಂಭಾಗದಲ್ಲಿರುವ ಮೂರಂಕಿಯ ಸಂಖ್ಯೆ), ಎಕ್ಸ್ ಪೈರಿ ದಿನಾಂಕ ಮುಂತಾದ ಮಾಹಿತಿ ತುಂಬ ಬೇಕಾಗಿರುತ್ತದೆ.

5 ಓಟಿಪಿ ಕೇಳುತ್ತಾನೆ
ಆನ್‌ಲೈನ್‌ ಅರ್ಜಿಯನ್ನು ಬ್ಯಾಂಕ್‌ ಗ್ರಾಹಕ ಮರಳಿಸಿದ ನಂತರ, ಗ್ರಾಹಕನ ಮೊಬೈಲ್‌ ಸಂಖ್ಯೆಗೆ ಒಂದು ಓಟಿಪಿ
ಬರುವುದಾಗಿಯೂ, ಆ ಸಂಖ್ಯೆಯನ್ನು ತನ್ನೊಂದಿಗೆ ಹಂಚಿಕೊಳ್ಳಬೇಕೆಂದೂ ವಂಚಕ ತಿಳಿಸುತ್ತಾನೆ.

6 ಟ್ರಾನ್ಸಾಕ್ಷನ್‌ ಪೂರ್ತಿಗೊಳಿಸುತ್ತಾನೆ
ಅಮಾಯಕ ಗ್ರಾಹಕನ ಬ್ಯಾಂಕ್‌ ಖಾತೆಯ ಸೂಕ್ಷ್ಮ ವಿವರಗಳು, ಇಷ್ಟರಲ್ಲಾಗಲೇ ವಂಚಕನ ಬಳಿಯಿರುತ್ತವೆ. ಅದನ್ನು ಉಪಯೋಗಿಸಿಕೊಂಡು, ಕುಳಿತಲ್ಲಿಂದಲೇ ಹಣ ವರ್ಗಾವಣೆ ಮಾಡುತ್ತಾನೆ. ಈ ಪ್ರಕ್ರಿಯೆ ಪೂರ್ತಿಯಾಗುವುದು, ಗ್ರಾಹಕ ಮೊಬೈಲಿಗೆ ಬರುವ ಓಟಿಪಿ ಸಂಖ್ಯೆಯನ್ನು ಟ್ರಾನ್ಸಾಕ್ಷನ್‌ ಸಮಯದಲ್ಲಿ ಟೈಪಿಸಿದಾಗ ಮಾತ್ರ. ಈ ವಂಚನೆಯ ಅರಿವಿಲ್ಲದ ಗ್ರಾಹಕ, ಈಗಾಗಲೇ ಒಪ್ಪಿಕೊಂಡಂತೆ ತನ್ನ ಮೊಬೈಲಿಗೆ ಬಂದ ಓಟಿಪಿಯನ್ನು ವಂಚಕನೊಂದಿಗೆ ಹಂಚಿಕೊಳ್ಳುತ್ತಾನೆ.

7 ಹಣ ಕಟ್‌ ಆಗುತ್ತದೆ
ವಂಚಕ ಓಟಿಪಿ ಎಂಟ್ರಿ ಮಾಡುತ್ತಲೇ, ಗ್ರಾಹಕನ ಖಾತೆಯಿಂದ ಹಣ ಕಟ್‌ ಆಗುತ್ತದೆ.

8 ದೂರು
ನೀಡುವುದು ಕಷ್ಟ ಈ ಲಾಕ್‌ಡೌನ್‌ ಸಂದರ್ಭದಲ್ಲಿ, ಮನೆಯಿಂದ ಹೊರ ಹೋಗುವುದೇ ಕಷ್ಟ. ಹೀಗಿರುವಾಗ, ಗ್ರಾಹಕ ಬ್ಯಾಂಕ್‌ಗೆ ಭೇಟಿ ನೀಡುವುದು, ಪೊಲೀಸರಿಗೆ ದೂರು ನೀಡುವುದು ಕಷ್ಟದ ಕೆಲಸ. ಒಂದೊಮ್ಮೆ ದೂರು ನೀಡಿದರೂ, ಹಲವು ಕಾರಣಗಳಿಂದ, ವಂಚಕನ ಪತ್ತೆ ಸಾಧ್ಯವಾಗದೇ ಹೋಗಬಹುದು.

ಎಚರ ವಹಿಸಿ
ವೈಯಕ್ತಿಕ ಮಾಹಿತಿಯನ್ನು ಫೋನ್‌, ಇಮೇಲ್, ಆನ್‌ಲೈನ್‌ ಅರ್ಜಿ ಅಥವಾ ಇನ್ಯಾವುದಾದರೂ ಮಾಧ್ಯಮದ ಮುಖಾಂತರ ನೀಡಲು ಹೋಗಬೇಡಿ ಓಟಿಪಿ ಎನ್ನುವುದು, ನಿಮ್ಮ ಖಾತೆಯನ್ನು ವಂಚಕರಿಂದ ರಕ್ಷಿಸಲು ರೂಪಿಸಿರುವ ಸುರಕ್ಷತಾ ಕ್ರಮ. ಅದನ್ನು ಯಾರೊಂದಿಗೂ ಹಂಚಿಕೊಳ್ಳುವ ಹಾಗಿಲ್ಲ.

ನಿಜವಾದ ಬ್ಯಾಂಕ್‌ ಪ್ರತಿನಿಧಿ, ಯಾವತ್ತೂ ತಮ್ಮ ಗ್ರಾಹಕರಿಗೆ ಪರ್ಸನಲ್‌ ಮೇಲ್‌ ಐಡಿ ಅಥವಾ ಇನ್ಯಾವುದೋ ಮೇಲ್‌ ಐಡಿ. ಯಿಂದ ಇಮೇಲ್‌ ಕಳಿಸುವುದಿಲ್ಲ.

ಅನಾಮಿಕ, ಅಪರಿಚಿತರಿಂದ ಬರುವ ಇಮೇಲ್‌ ಸಂದೇಶಗಳಲ್ಲಿ ಇರುವ ಲಿಂಕ್‌ ಅನ್ನು ಯಾವತ್ತೂ ಕ್ಲಿಕ್‌ ಮಾಡಲು ಹೋಗಬೇಡಿ. ಅವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ರೂಪಿಸಿರುವ ಜಾಲವಾಗಿರಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next