ಬೆಂಗಳೂರು: ಬೆಸ್ಕಾಂನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಕಲಿ ನೇಮಕಾತಿ ಪ್ರಮಾಣ ಪತ್ರ ಕೊಟ್ಟು ಲಕ್ಷಾಂತರ ರೂ.ವಸೂಲಿ ಮಾಡಿದ್ದ 7 ಮಂದಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಲಹಂಕದ ಅಟ್ಟೂರು ಲೇಔಟ್ ನಿವಾಸಿ ಡಿ.ಪ್ರಜ್ವಲ್ (28), ಭರತ್‌ನಗರದ ಎಂ.ಪ್ರವೀಣ್ ಅಲಿಯಾಸ್ ಸೋಮನಕಟ್ಟೆ (28), ಕುಣಿಗಲ್ ತಾಲೂಕಿನ ಕೆಂಪನಹಳ್ಳಿಯ ಕೆ.ಪ್ರದೀಪ್ (34), ಯಶವಂತಪುರದ ಎಸ್.ಡಿ. ಪುರುಷೋತ್ತಮ್ (49), ಜಾಲಹಳ್ಳಿಯ ಲೋಹಿತ್(46) ಮತ್ತು ಬೆಳಗಾವಿಯ ಟೀಚರ್ ಕಾಲೊನಿಯ ಶಿವಪ್ರಸಾದ್ ಚನ್ನಣ್ಣನವರ್ (28), ವಿಜಯಕುಮಾರ್ ಶಿವಲಿಂಗಪ್ಪ ಚನ್ನಣವರ್ (57) ಬಂಧಿತರು.
ಆರೋಪಿಗಳಿಂದ ಬೆಸ್ಕಾಂ ಅಧಿಕಾರಿಗಳ ಹೆಸರಿನ ನಕಲಿ ಸೀಲ್, ಆದೇಶ ಪ್ರತಿ, ಯುವಕರ ಅಸಲಿ ಅಂಕಪಟ್ಟಿ, ನಕಲಿ ನೇಮಕಾತಿ ಪತ್ರ, ಲ್ಯಾಪ್‌ಟಾಪ್, ಪ್ರಿಂಟರ್, 1 ಫಾರ್ಚುನರ್ ಕಾರು, 5.50 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳು ಬೆಳಗಾವಿ ಜಿಲ್ಲೆ ಹುಕ್ಕೇರಿ ಬಳಿಯ ತಿಲಕವಾಡಿ ನಿವಾಸಿ ವೈಭವ ವೆಂಕಟೇಶ ಕುಲಕರ್ಣಿ ಎಂಬಾತನಿಗೆ ನಕಲಿ ನೇಮಕಾತಿ ಪ್ರಮಾಣ ಪತ್ರ ಕೊಟ್ಟು 20 ಲಕ್ಷ ರೂ. ಪಡೆದಿದ್ದರು. ಈ ಬಗ್ಗೆ ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ.ಪಿ. ಸೋಮಶೇಖರ್ ನೀಡಿದ ದೂರಿನ ಮೇರೆಗೆ ಎಫ್ ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಪ್ರವೀಣ್, ಪ್ರದೀಪ್, ಪುರು ಷೋತ್ತಮ್ ಮತ್ತು ಲೋಹಿತ್ ಸರ್ಕಾರಿ ಉದ್ಯೋಗ ಕ್ಕಾಗಿ ತಯಾರಿ ನಡೆಸುತ್ತಿರುವ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿ ಗಳನ್ನು ಶೋಧಿಸುತ್ತಿದ್ದರು. ಆರೋಪಿಗಳು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ಕೊಡಲು ಒಪ್ಪಿಕೊಂಡು ಅಭ್ಯರ್ಥಿಗಳಿಗೆ ಒಂದೆರಡು ತಿಂಗಳಲ್ಲಿ ನಕಲಿ ನೇಮಕಾತಿ ಪ್ರಮಾಣ ಪತ್ರ ಕೊಟ್ಟು ವಂಚಿಸುತ್ತಿದ್ದರು. ಅದೇ ರೀತಿ ಉದ್ಯೋಗ ಆಕಾಂಕ್ಷಿ ವೈಭವ ವೆಂಕಟೇಶ್‌ಗೆ ಬೆಸ್ಕಾಂನಲ್ಲಿ ಮೊದಲು ಗುತ್ತಿಗೆ ಆಧಾರದ ಮೇಲೆ ನೌಕರಿ ಕೊಡಿಸುವುದಾಗಿ ಆಸೆ ತೋರಿಸಿ 2 ಲಕ್ಷ ರೂ. ಪಡೆದುಕೊಂಡಿದ್ದರು. ಕಿರಿಯ ಸಹಾಯಕ ಹುದ್ದೆಯನ್ನು ಕಾಯಂ ಆಗಿ ಕೊಡಿಸುವುದಾಗಿ ಭರವಸೆ ಕೊಟ್ಟು 20 ಲಕ್ಷ ರೂ.ಗೆ ಬೇಡಿಕೆವೊಡ್ಡಿದ್ದರು. ಅದರಂತೆ ಹಂತ-ಹಂತವಾಗಿ ವೈಭವ್ ಕಡೆಯಿಂದ ಹಣ ಪಡೆದುಕೊಂಡು ಹಂಚಿಕೊಂಡಿದ್ದರು. ಹಣದ ಪೈಕಿ ಡಿ. ಪ್ರಜ್ವಲ್‌ಗೆ ಹಣ ಕೊಟ್ಟು ಆತನ ಕಡೆಯಿಂದ ನಕಲಿ ನೇಮಕಾತಿ ಪ್ರಮಾಣ ಪತ್ರ ಸಿದ್ಧಪಡಿಸಿ ವೈಭವ್‌ಗೆ ಕೊಟ್ಟಿದ್ದರು.
ಈ ಬಗ್ಗೆ ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾ ಗಿದೆ ಎಂದು ಪೊಲೀಸರು ಹೇಳಿದರು.
ಕರ್ತವ್ಯಕ್ಕೆ ಹಾಜರಾಗಲು ಹೋದಾಗ ಪತ್ತೆ: ಬಂಧಿತರಿಂದ ನೇಮಕಾತಿ ಪ್ರಮಾಣ ಪತ್ರ ಪಡೆದಿದ್ದ ವೈಭವ್ ವೆಂಕಟೇಶ್, ಮಾಧವನಗರ ಕ್ರೆಸೆಂಟ್ ರಸ್ತೆ, ಬೆಂಗಳೂರು ಉತ್ತರ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಬಸವಣ್ಣ ಅವರ ಬಳಿ ಹೋಗಿದ್ದಾನೆ. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಆಗಿ ನೇಮಕಗೊಂಡಿದ್ದು, ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದೇನೆ ಎಂದಿದ್ದಾನೆ. ನೇಮಕಾತಿ ಪ್ರಮಾಣ ಪತ್ರ ಪಡೆದ ಅಧಿಕಾರಿ, ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಸಂತ್ರಸ್ತನಿಂದ ಮಾಹಿತಿ ಪಡೆದಾಗ ಕೆಲ ಶಂಕಿತ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.