Advertisement

ಎಫ್‌ಬಿ ಪರಿಚಿತ ವಿದೇಶಿ ಮಹಿಳೆಯಿಂದ ದೋಖಾ

11:14 AM Jun 24, 2022 | Team Udayavani |

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ಮಹಿಳೆಯೊಬ್ಬರು ಜ್ಯುವೆಲ್ಲರಿ ಶಾಪ್‌ ತೆರೆದು ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುವುದಾಗಿ ನಂಬಿಸಿ ಬ್ಯಾಂಕ್‌ ಉದ್ಯೋಗಿಗೆ 35 ಲಕ್ಷ ರೂ. ವಂಚಿಸಿದ್ದಾಳೆ.

Advertisement

ಪುಲಕೇಶಿನಗರ ನಿವಾಸಿ ವಿನ್ಸೆಂಟ್‌ ಎಂಬವರು ಪೂರ್ವವಿಭಾಗದ ಸೆನ್‌ ಠಾಣೆಯಲ್ಲಿ ಇಂಗ್ಲೆಂಡ್‌ ಮೂಲದ ನ್ಯಾನ್ಸಿ ವಿಲಿಯಂ ಎಂಬಾಕೆ ವಿರುದ್ಧ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

ಫೇಸ್‌ ಬುಕ್‌ ಮೂಲಕ ಪರಿಚಯವಾದ ನಾನ್ಸಿ ವಿಲಿಯಂ ಬಳಿಕ ಮೊಬೈಲ್‌ ನಂಬರ್‌ ಪಡೆದುಕೊಂಡು ವಿನ್ಸೆಂಟ್‌ ಜತೆ ನಿತ್ಯ ಚಾಟಿಂಗ್‌ ಆರಂಭಿಸಿದ್ದಾಳೆ. ಈ ಮಧ್ಯೆ ಕೆಲ ದಿನಗಳ ಹಿಂದೆ ವಿದೇಶದಲ್ಲಿ ಜ್ಯುವೆಲ್ಲರಿ ಶಾಪ್‌ ಮಳಿಗೆ ಹೊಂದಿದ್ದು, ಅದನ್ನು ಭಾರತದಲ್ಲೂ ವಿಸ್ತರಿಸುವ ಬಗ್ಗೆ ಚಿಂತನೆ ಇದೆ. ತಾವು ಸಹಕಾರ ನೀಡಿ ದರೆ ತೆರೆಯುವುದಾಗಿ ನಂಬಿಸಿದ್ದಾಳೆ. ಅಲ್ಲದೆ, ಪಾಲು ದಾರಿಕೆಯಲ್ಲಿ ಜ್ಯುವೆಲ್ಲರಿ ಶಾಪ್‌ ತೆರೆದು, ಅದರ ನಿರ್ವಹಣೆಯನ್ನು ತಾವೇ ನೋಡಿಕೊಳ್ಳಬಹುದು ಎಂದು ನಂಬಿಸಿದ್ದಾಳೆ. ಇದನ್ನು ನಂಬಿದ ವಿನ್ಸೆಂಟ್‌ ಅವರು ನಾನ್ಸಿ ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ 35 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಒಂದೂವರೆ ತಿಂಗಳಾದರೂ ಸ್ನೇಹಿತೆಯಿಂದ ಯಾವುದೇ ಪ್ರತಿ ಕ್ರಿಯೆ ಬಾರದಿದ್ದಾಗ ಆಕೆಯ ಮೊಬೈಲ್‌ ನಂಬರ್‌ಗೆ ಕರೆ ಮಾಡಿದಾಗ ಸ್ವಿಚ್ಛ್ ಆಫ್ ಆಗಿದೆ. ಜತೆಗೆ ಫೇಸ್‌ಬುಕ್‌, ಟ್ವಿಟರ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಹೀಗಾಗಿ ವಂಚಿಸಿದ ನ್ಯಾನ್ಸಿ ಎಂಬಾಕೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ವಿನ್ಸೆಂಟ್‌ ದೂರು ನೀಡಿದ್ದಾರೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

ಭಾರತದಲ್ಲಿ ಹತ್ತಾರು ಖಾತೆಗಳು

ಆರೋಪಿಯ ಮೊಬೈಲ್‌ ನಂಬರ್‌ ಹಾಗೂ ಫೇಸ್‌ಬುಕ್‌ ಖಾತೆ ಪರಿಶೀಲಿಸಿದಾಗ ಇಂಗ್ಲೆಂಡ್‌ನಿಂದ ಕಾರ್ಯ ನಿರ್ವ ಹಿಸುತ್ತಿರುವುದು ಗೊತ್ತಾಗಿದೆ. ಜತೆಗೆ ಆಕೆ ಭಾರತದ ವಿವಿಧೆಡೆ ಇರುವ ಬ್ಯಾಂಕ್‌ಗಳಲ್ಲಿ ಸುಮಾರು 20ಕ್ಕೂ ಅಧಿಕ ಖಾತೆಗಳನ್ನು ಹೊಂದಿದ್ದಾಳೆ. ಹೀಗಾಗಿ ಆಕೆಯ ಖಾತೆಗಳಲ್ಲಿರುವ ಎಲ್ಲ ಹಣವನ್ನು ಜಪ್ತಿ ಮಾಡುವಂತೆ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ. ಆದರೆ, ಆಕೆ ಖಾತೆಯಲ್ಲಿ ಕಡಿಮೆ ಹಣವಿದೆ ಎಂದು ಪೊಲೀಸರು ಹೇಳಿದರು.

Advertisement

ಹಿನ್ನೆಲೆ ತಿಳಿದು ವ್ಯವಹರಿಸಿ

ಆರೋಪಿ ನ್ಯಾನ್ಸಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಆಕೆಯ ಬ್ಯಾಂಕ್‌ ಖಾತೆಗಳ ಹಣ ಜಪ್ತಿಗೆ ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ. ಹೀಗಾಗಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ವ್ಯಕ್ತಿಗಳ ಪೂರ್ವಪರ ತಿಳಿದುಕೊಂಡು ಹಣಕಾಸಿನ ವ್ಯವಹಾರ ನಡೆಸಬೇಕು. ಅನುಮಾನಗೊಂಡರೆ ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ದೂರು ನೀಡಿ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next