ಪ್ಯಾರಿಸ್: ಹೊಸ ಸೋಂಕು ಪ್ರಕರಣವನ್ನು ತಡೆಗಟ್ಟಲು ಆರೋಗ್ಯ ತುರ್ತು ಸ್ಥಿತಿಯನ್ನು ಜುಲೈ 24 ರವರೆಗೆ ವಿಸ್ತರಿಸಲಾಗಿದೆ ಎಂದು ಫ್ರಾನ್ಸ್‌ನ ಆರೋಗ್ಯ ಸಚಿವ ಆಲಿವಿಯರ್‌ವೆರನ್ ಹೇಳಿದ್ದಾರೆ. ಈ ಕುರಿತು ಸಂಸತ್ ಎದುರು ಸರಕಾರ ಪ್ರಸ್ತಾವ ಸಲ್ಲಿಸಿದ್ದು, ಆರೋಗ್ಯ ತುರ್ತು ಪರಿಸ್ಥಿತಿ ವಿಸ್ತರಣೆ ಅಗತ್ಯದ ಕುರಿತು ಉಲ್ಲೇಖೀಸಿದೆ. ಜತೆಗೆ ವಿದೇಶದಿಂದ ಬರುವ ಪ್ರಯಾಣಿಕರಿಗೆ ಕಠಿಣ ಕ್ವಾರೆಂಟೇನ್ ನಿಯಮ ಜಾರಿಯಾಗಲಿದೆ. ಈ ಮಸೂದೆ ಸೋಮವಾರ ಸೆನೆಟ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸಭೆಯಲ್ಲಿ ಪ್ರಸ್ತಾಪವಾಗಲಿದ್ದು, ಪ್ರಾಥಮಿಕ ಶಾಲೆಗಳನ್ನು ಪುನರಾರಂಭ ಮಾಡುವುದೂ ಸೇರಿದಂತೆ ಮೇ 11ರ ನಂತರ ಲಾಕ್‌ಡೌನ್ ನಿಯಮ ಸಡಿಲಿಕೆ ಕುರಿತೂ ಚರ್ಚಿಸಲಾಗುತ್ತಿದೆ ಎಂದಿದ್ದಾರೆ. ಸದ್ಯದ ಬಿಕ್ಕಟ್ಟಿನಿಂದ ಹೊರಬರಲು ಕೆಲವು ವರ್ಷಗಳೇ ಬೇಕಾಗಬಹುದು ಎಂದಿರುವ ಆಂತರಿಕ ಮತ್ತು ಸಾಮಾಜಿಕ ಭಧ್ರತೆ ಸಚಿವ ಕ್ರಿಸ್ಟೋಫ್ ಕ್ಯಾಸ್ಟನರ್, ಮುಂಬರುವ ದಿನಗಳಲ್ಲಿ ನಾವು ಸೋಂಕಿನ ಮಧ್ಯೆಯೇ ಬದುಕಬೇಕಾಗುತ್ತದೆ ಎಂದಿದ್ದಾರೆ. ಇಲ್ಲಿಯವರೆಗೆ ಸುಮಾರು 167,346 ಸೋಂಕು ಪ್ರಕರಣಗಳು ದೃಢಪಟ್ಟಿದೆ. ಜತೆಗೆ 24,594 ಜನರು ಸೋಂಕಿಗೆ ಬಲಿಯಾಗಿದ್ದಾರೆ.