Advertisement

ನಾಲ್ಕು ಸಾವಿರ ಮಂದಿ ನಾಪತ್ತೆ? ಕೊಡಗಿನಲ್ಲಿ ಮುಂದುವರಿದ ಮಳೆಯ ಅಬ್ಬರ

06:00 AM Aug 20, 2018 | Team Udayavani |

ಮಡಿಕೇರಿ: ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿನ ಮುಂಗಾರು ಮಳೆಯ ಆರ್ಭಟದಿಂದ ಉಂಟಾಗಿರುವ ಪ್ರಕೃತಿ ವಿಕೋಪಗಳಿಂದಾಗಿ 4 ಸಾವಿರಕ್ಕೂ ಹೆಚ್ಚು ಮಂದಿ ಸಂಪರ್ಕ ಕಳೆದುಕೊಂಡಿದ್ದು, 50 ಸಾವಿರಕ್ಕೂ ಹೆಚ್ಚು ಮಂದಿ ತೊಂದರೆಗೆ ಸಿಲುಕಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

Advertisement

ಅತಿವೃಷ್ಟಿ ಹಾನಿಪೀಡಿತ ಸಂತ್ರಸ್ತರಿಗಾಗಿ ತೆರೆಯಲಾಗಿರುವ 41 ಪುನರ್‌ ವಸತಿ ಕೇಂದ್ರಗಳಲ್ಲಿ 5,818 ಮಂದಿ ಆಶ್ರಯ ಪಡೆದಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 18 ಪುನರ್‌ ವಸತಿ ಕೇಂದ್ರಗಳಲ್ಲಿ 2277, ವಿರಾಜಪೇಟೆ ತಾಲೂಕಿನಲ್ಲಿನ 7 ಕೇಂದ್ರಗಳಲ್ಲಿ 677, ಸೋಮವಾರಪೇಟೆ ತಾಲೂಕಿನ 16 ಕೇಂದ್ರಗಳಲ್ಲಿ 2864 ನಿರಾಶ್ರಿತರಿದ್ದಾರೆ.

ಭಾರತೀಯ ಸೇನಾ ಪಡೆ ಮುಕ್ಕೋಡ್ಲು ಗ್ರಾಮದಲ್ಲಿ ಅಪಾಯದಂಚಿನ ಗ್ರಾಮದಲ್ಲಿರುವ ಜನರನ್ನು ರಕ್ಷಿಸುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಜೋಡುಪಾಲ, ಎರಡನೇ ಮೊಣ್ಣಂಗೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ನೌಕಾದಳ ದೇವಸ್ತೂರು, ಕಾಲೂರು ಗ್ರಾಮಗಳಲ್ಲಿ ಸಂತ್ರಸ್ಥರ ರಕ್ಷಣೆಯಲ್ಲಿದೆ. ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿ ತಂಡ ತಂತಿಪಾಲದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ.

ಮುಕ್ಕೋಡ್ಲು ಗ್ರಾಮದಲ್ಲಿ ಭಾನುವಾರ ಸೇನಾ ಪಡೆ 60 ಮಂದಿ ಗ್ರಾಮಸ್ಥರನ್ನು ರಕ್ಷಿಸಿದೆ. ಮನೆ ಕಳೆದುಕೊಂಡವರು ಗುರುತಿನ ಚೀಟಿ ಸೇರಿದಂತೆ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ರಸ್ತೆ ಸಂಪರ್ಕವಿಲ್ಲದೇ ಜಿಲ್ಲೆಯಾದ್ಯಂತ ಪುನರ್‌ ವಸತಿ ಕೇಂದ್ರಗಳಿಗೆ ಪರಿಹಾರ ಸಾಮಾಗ್ರಿ ರವಾನಿಸುವುದೇ ಕಷ್ಟವಾಗಿದೆ.

ಶೀಘ್ರ ಜಾಗ ಗುರುತಿಸಿ
ಸಂತ್ರಸ್ತರಿಗೆ ಶಾಶ್ವತವಾದ ಸೂರು ನೀಡುವ ಸಂಬಂಧಿತ ಇನ್ನು ಮೂರು ದಿನಗಳಲ್ಲಿ ಸರ್ಕಾರಿ ಜಾಗ ಗುರುತಿಸಿ ಶೆಡ್‌ ನಿರ್ಮಾಣ ಮಾಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶಿಸಿದ್ದಾರೆ. ಶಾಶ್ವತವಾಗಿ ಮನೆ ನಿರ್ಮಾಣಕ್ಕೆ 4 ತಿಂಗಳಾದರೂ ಬೇಕಾದೀತು ಎಂದು ಅವರು ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ಇನ್ನು ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಮನೆ ಕಳೆದುಕೊಂಡ ನಿರಾ]ತರಿಗೆ ತಾತ್ಕಾಲಿಕ ಶೆಡ್‌ಗಳಲ್ಲಿ ಆಶ್ರಯ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ ಮಧ್ಯೆ ಆ.16 ರಂದು ಕಾಟಕೇರಿಯಲ್ಲಿ ಭೂಕುಸಿತದಿಂದಾಗಿ ಪ್ರಾಣ ಕಳೆದುಕೊಂಡ ಪೊಲೀಸ್‌ ಸಿಬ್ಬಂದಿ ಯಶವಂತ್‌ ತಂದೆ ಅಚ್ಚಲ್‌ ಪಾಡಿ ಗಣಪತಿ ಅವರಿಗೆ 5 ಲಕ್ಷ ರು. ಗಳ ಚೆಕ್‌ ನೀಡಿ ಸಾಂತ್ವನ ಹೇಳಿದರು. ಜತೆಗೆ ಭೂಕುಸಿತದಿಂದ ಮೃತಪಟ್ಟ ವೆಂಕಟರಮಣ ಅವರ ಪತ್ನಿ ಮೀನಾ ಕುಮಾರಿ ಅವರಿಗೂ ಸಿಎಂ ಚೆಕ್‌ ನೀಡಿ ಸಾಂತ್ವನ ಹೇಳಿದರು. ಪರಿಹಾರ ಕಾರ್ಯಗಳನ್ನು ಪರಿಶೀಲಿಸುವ ಸಂಬಂಧ ಮೂರ್ನಾಲ್ಕು ದಿನದಲ್ಲಿ ಮತ್ತೆ ಮಡಿಕೇರಿಗೆ ಭೇಟಿ ನೀಡುವುದಾಗಿ ಅವರು ಹೇಳಿದರು.

Advertisement

ಯೋಧರಿಂದ 500 ಮಂದಿ ರಕ್ಷಣೆ
ಮಳೆ ನಡುವೆಯೂ ಕೊಡಗಿನಲ್ಲಿ ಪರಿಹಾರ ಕಾರ್ಯಾಚರಣೆ ನಡೆಯುತ್ತಿದ್ದು, ಇಲ್ಲಿವರೆಗೆ 500 ಮಂದಿಯನ್ನು ರಕ್ಷಿಸಲಾಗಿದೆ. ಮುಕ್ಕೂಡ್ಲುವಿನ ವ್ಯಾಲಿ ಡ್ನೂ ರೆಸಾರ್ಟ್‌ನಲ್ಲಿ 90 ಮಂದಿ ಸಿಲುಕಿದ್ದು, ಅವರ ರಕ್ಷಣೆಗಾಗಿ ಡೋಗ್ರಾ ರೆಜಿಮೆಂಟಿನ ಸೈನಿಕರು, ಗರುಡ ಪಡೆ ಕಾರ್ಯ ನಿರತವಾಗಿವೆ. ವಣಚಲುವಿನಲ್ಲಿ 12 ಮಂದಿ ಸಿಲುಕಿಕೊಂಡಿದ್ದು, ಅವರ ರಕ್ಷಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಡಿಜಿಪಿ ಭಾಸ್ಕರ ರಾವ್‌ ಮತ್ತು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ. ದೇವಸ್ತೂರು ಗ್ರಾಮದಲ್ಲಿ ಸಂಕಷ್ಟದಲ್ಲಿ ಸಿಲುಕಿ, ಮನೆ ತೊರೆಯಲು ನಿರಾಕರಿಸಿದ್ದ ವೃದ್ಧರೊಬ್ಬರನ್ನು ರಕ್ಷಿಸಲಾಗಿದೆ.

ರಸ್ತೆ ದುರಸ್ತಿಗೆ ತಿಂಗಳುಗಳೇ ಬೇಕು
ಕೊಡಗಿನಲ್ಲಿ ರಸ್ತೆಗಳ ದುರಸ್ಥಿಗೆ ಹಲವು ತಿಂಗಳುಗಳೇ ಬೇಕಾಗಬಹುದು. ಮಡಿಕೇರಿ – ಮಂಗಳೂರು ರಾಜ್ಯ ಹೆದ್ದಾರಿ ದುರಸ್ಥಿಯಾಗಿ ಲಘು ವಾಹನ ಸಂಚಾರಕ್ಕೆ ಕನಿಷ್ಠ 30 ದಿನಗಳು ಬೇಕಾಗಿದ್ದು ಇದೇ ಮಾರ್ಗದಲ್ಲಿ ಬಸ್‌, ಲಾರಿ ಸಂಚಾರಕ್ಕೆ 6 ತಿಂಗಳಾದರೂ ಬೇಕಾಗಲಿದೆ. ಇದರಿಂದಾಗಿ ಶಿಕ್ಷಣ, ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಮಂಗಳೂರನ್ನೇ ಬಹುಪಾಲು ಆಶ್ರಯಿಸಿರುವ ಕೊಡಗಿನ ಜನತೆಗೆ ಸಾಕಷ್ಟು ಸಮಸ್ಯೆಯಾಗಲಿದೆ. ಮಂಗಳೂರು ರಾಜ್ಯ ಹೆದ್ದಾರಿ ತಾಳತ್ತಮನೆಯಿಂದ ಸಂಪಾಜೆಯವರೆಗೆ 37 ಕಿ.ಮೀ. ಸಂಪೂರ್ಣ ಕುಸಿದಿದ್ದು, ಇದನ್ನು ಮಳೆ ಸಂಪೂರ್ಣವಾಗಿ ನಿಂತ ನಂತರವಷ್ಟೇ ದುರಸ್ಥಿಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

60 ಮಂದಿ ರಕ್ಷಣೆ
ಸೋಮವಾರಪೇಟೆ ತಾಲ್ಲೂಕಿನ ಮುಕ್ಕೊಡ್ಲು ಹಚ್ಚಿನಾಡು ಗ್ರಾಮಗಳಲ್ಲಿ ಸಿಲುಕಿಗೊಂಡಿದ್ದ 60 ಪುರುಷರು. ಮಹಿಳೆಯರು, ಮಕ್ಕಳು ಹಾಗು ವೃದ್ದರು ಸೇರಿದಂತೆ 60ಮಂದಿಯನ್ನು ಬೆಂಗಳೂರಿನ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿ, ಮಾದಪುರ ಪುನರ್‌ವಸತಿ ಕೇಂದ್ರಕ್ಕೆ ಕರೆ ತಂದಿದ್ದಾರೆ. ಭಾನುವಾರ ಬೆಳಿಗ್ಗೆ ಶಾಸಕ ಅಪ್ಪಚ್ಚು ರಂಜನ್‌, ಅಗ್ನಿಶಾಮಕದಳದ ಮಹಾನಿರ್ದೇಶಕ ಎಂ.ಎನ್‌.ರೆಡ್ಡಿ ನೇತೃತ್ವದ  ತಂಡ ಕಾರ್ಯಚರಣೆ ನಡೆಸಿ ಮೂರು ಕಿ.ಮೀ.ಕಾಲ್ನಡಿಯಲ್ಲೆ ತೆರಳಿ, ಇಗ್ಗೊಡ್ಲು ಗ್ರಾಮದ ಮೂಲಕ ಕರೆತರಲಾಗಿದೆ. ವಿಧಾನಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮಾದಾಪುರ ಪುನರ್‌ವಸತಿ ಕೇಂದ್ರದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಮಾಹಿತಿ ಪಡೆದ ರಾಷ್ಟ್ರಪತಿ, ಪ್ರಧಾನಿ
ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಆಗಿರುವ ಹಾನಿ ಮತ್ತು ಜಿಲ್ಲಾಡಳಿತ, ಸೈನ್ಯದ ಜತೆ ಸೇರಿ ನಡೆಸುತ್ತಿರುವ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳ ಕುರಿತು ರಾಷ್ಟ್ರಪತಿ ರಾಮನಾಥ ಕೊಂವಿದ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಮಾಹಿತಿ ಪಡೆದಿದ್ದಾರೆ. ಭಾನುವಾರ ಮುಖ್ಯಮಂತ್ರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಿ ರಾಷ್ಟ್ರಪತಿ ಮತ್ತು ಪ್ರಧಾನಿ, ಪರಿಸ್ಥಿತಿ ಬಗ್ಗೆ ವಿವರ ಕೇಳಿದರಲ್ಲದೆ, ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next