Advertisement

ಒಂದೇ ಕುಟುಂಬದ ನಾಲ್ವರು ರಿಲೀಸ್‌; ವಿಜಯಪುರ ಜೈಲಿಂದ ಒಟ್ಟು ಹತ್ತು ಮಂದಿಗೆ ಬಿಡುಗಡೆ

09:23 PM Aug 15, 2022 | Team Udayavani |

ವಿಜಯಪುರ/ಬೆಂಗಳೂರು:ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ರಾಜ್ಯದ 9 ಕಾರಾಗೃಹಗಳಿಂದ ಸನ್ನಡತೆಯ ಆಧಾರದಲ್ಲಿ ಕೈದಿಗಳನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಈ ಪೈಕಿ ವಿಜಯಪುರದ ಜೈಲಿನಿಂದ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಹತ್ತು ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

Advertisement

ವಿಜಯಪುರ ಜೈಲಿನಲ್ಲಿ ರಾಷ್ಟ್ರ ಧ್ವಜಾರೋಹಣದ ಬಳಿಕ ಜರುಗಿದ ಸಮಾರಂಭದಲ್ಲಿ 10 ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಒಂದೇ ಕುಟುಂಬದ ಮಲಕಾರಿ ಅಮಸಿದ್ಧ ಜಟಗೊಂಡ, ಪುತ್ರರಾದ ಬಸಪ್ಪ, ಗೌಡಪ್ಪ, ಬಿಳೆನ್ನಿ, ಇತರೆ ಕೈದಿಗಳಾದ ಸಿದ್ದಪ್ಪ ಮಾದರ, ಕಾಡಪ್ಪ ಮಾದರ, ಅಪ್ಪು ಬಸಯ್ಯ ಹಿರೇಮಠ, ಮಾಯಪ್ಪ ವಾಡೇದ, ಉಮಾ ನೇಮಪ್ಪ ಚವ್ಹಾಣ, ಮುತ್ತವ್ವ ಲಕ್ಷ್ಮಣ ನಾಗವ್ವಗಳ ಸನ್ನಡೆಯಿಂದ ಜೈಲಿನಿಂದ ಬಿಡುಗಡೆ ಭಾಗ್ಯ ಪಡೆದರು.

ಆನಂದಬಾಷ್ಪ:
ಬಿಡುಗಡೆಗೊಂಡ ಅನೇಕ ಕೈದಿಗಳು ಆನಂದಭಾಷ್ಪ ಸುರಿಸಿ ಜೈಲಿನಿಂದ ಹೊರ ಬರುತ್ತಲೇ ತಮ್ಮ ಆಗಮನಕ್ಕೆ ಜೈಲು ಬಾಗಿಲಲ್ಲಿ ಕಾದಿದ್ದ ತಮ್ಮವರನ್ನು ಆಲಂಗಿಸಿ ಸಂಭ್ರಮಿಸಿದರು. ಬಿಡುಗಡೆಯಾದ ವೃದ್ಧ ಜೈಲಿನ ಬಾಗಿಲಲ್ಲಿ ತನ್ನ ಬರುವಿಕೆಗೆ ಕಾದಿದ್ದ ಮೊಮ್ಮಗನನ್ನು ಕಾಣುತ್ತಲೇ ಎತ್ತಿ ಮುದ್ದಾಡಿದರು. ಕುಟುಂಬದ ಇತರೆ ಸದಸ್ಯರು ಪರಸ್ಪರ ಆಲಂಗಿಸಿಕೊಂಡು ಬಿಡುಗಡೆ ಸಂತಸ ಹಂಚಿಕೊಂಡರು.

ಒಟ್ಟು 81 ಕೈದಿಗಳು:
ಬೆಂಗಳೂರು 14, ಬೆಳಗಾವಿ 3, ಬಳ್ಳಾರಿ 8, ವಿಜಯಪುರ ಇಬ್ಬರು ಮಹಿಳೆಯರು ಸೇರಿ 10, ಧಾರವಾಡ 6, ಕಲಬುರಗಿ 10, ಮೈಸೂರು 20, ಶಿವಮೊಗ್ಗ 9, ಶಿವಮೊಗ್ಗ ಮಹಿಳಾ ಕಾರಾಗೃಹ ಒಬ್ಬ ಮಹಿಳೆ ಒಟ್ಟು 81 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಅಮೃತಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರದ ನಿಗದಿಪಡಿಸಿರುವ ಮಾರ್ಗಸೂಚಿಗಳು ಮತ್ತು ವೇಳಾಪಟ್ಟಿ ಅನ್ವಯ ರಾಜ್ಯದ ರಾಜ್ಯಪಾಲರ ಸೂಚನೆ ಪರಿಗಣಿಸಿ ವಿಶೇಷ ಆದ್ಯತೆ ಮೇರೆಗೆ ಅಲ್ಫಾವಧಿ (8-10 ವರ್ಷ) ಶಿಕ್ಷೆಗೊಳಗಾಗಿರುವ ಕೈದಿಗಳಲ್ಲಿ ಸನ್ನಡೆ ಹೊಂದಿರುವ ಕೈದಿಗಳನ್ನು ಆಯ್ದು ಬಿಡುಗಡೆ ಮಾಡಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳದಿಂದಾಗಿ ನಾನು ಜೈಲು ಶಿಕ್ಷೆ ಅನುಭವಿಸಿದ್ದೇನೆ. ಬಿಡುಗಡೆ ಬಳಿಕ ನೆಮ್ಮದಿಯ ಜೀವನ ನಡೆಸುವ ಜತೆಗೆ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಜೀವಿಸುತ್ತೇನೆ.
– ಸಿದ್ದಪ್ಪ ಮಾದರ, ಸನ್ನಡತೆ ಆಧಾರದಲ್ಲಿ ಬಿಡುಗಡೆಯಾದ ವ್ಯಕ್ತಿ

Advertisement

81- ಒಟ್ಟು ಕೈದಿಗಳು
20- ಮೈಸೂರು
14- ಬೆಂಗಳೂರು
10- ವಿಜಯಪುರ (ಇಬ್ಬರು ಮಹಿಳೆಯರು ಸೇರಿ)
10- ಕಲಬುರಗಿ
10- ಶಿವಮೊಗ್ಗ (ಮಹಿಳಾ ಕಾರಾಗೃಹದಿಂದ ಒಬ್ಬರು ಸೇರಿ)
08- ಬಳ್ಳಾರಿ
06- ಧಾರವಾಡ
03- ಬೆಳಗಾವಿ

 

Advertisement

Udayavani is now on Telegram. Click here to join our channel and stay updated with the latest news.

Next