ಮುಂಬಯಿ: ದೇಶಾದ್ಯಂತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇದಕ್ಕೆ ವ್ಯತಿರಿಕ್ತವಾಗಿರುವ ಪ್ರಕರಣವೊಂದು ವರದಿಯಾಗಿದೆ.
ಯುವಕನೊಬ್ಬನನ್ನು ಬಲವಂತವಾಗಿ ಕರೆದೊಯ್ದು ಆತನಿಗೆ ಮೂವರು ಲೈಂಗಿಕ ಕಿರುಕುಳ ನೀಡಿರುವ ಘಟನೆ ಕುರ್ಲಾ ಸಮೀಪ ನಡೆದಿದೆ. ಲೈಂಗಿಕ ಕಿರುಕುಳಕ್ಕೊಳಗಾದ 22 ವರ್ಷದ ವ್ಯಕ್ತಿ ಇಲ್ಲಿನ ರೆಸ್ಟೋರೆಂಟ್ ಒಂದರ ಎದುರು ನಿಂತಿದ್ದಾಗ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು ‘ಇನ್ ಸ್ಟಾಗ್ರಾಂ ಮೂಲಕ ನಮಗೆ ನಿಮ್ಮನ್ನು ತಿಳಿದಿದೆ, ಬನ್ನಿ ಬೈಕಿನಲ್ಲಿ ಕುಳಿತುಕೊಳ್ಳಿ’ ಎಂದು ಆಹ್ವಾನ ನೀಡಿದ್ದಾರೆ. ಅವರ ಆಹ್ವಾನವನ್ನು ಸ್ವೀಕರಿಸಿದ ದೂರುದಾರ ಯುವಕ ಬೈಕಿನಲ್ಲಿ ಇಬ್ಬರ ನಡುವೆ ಕುಳಿತುಕೊಳ್ಳುತ್ತಾನೆ.
ಈ ಸಂದರ್ಭದಲ್ಲಿ ಆರೋಪಿಗಳು ಬೈಕನ್ನು ವಿದ್ಯಾವಿಹಾರ್ ಕಡೆ ಚಲಾಯಿಸತೊಡಗಿದಾಗ ಸಂಶಯಗೊಂಡ ಯುವಕ ಬೈಕನ್ನು ನಿಲ್ಲಿಸುವಂತೆ ಸೂಚಿಸಿದ್ದಾನೆ. ಆದರೆ ಆರೋಪಿಗಳಿಬ್ಬರು ಯುವಕನ ಮಾತನ್ನು ಕೇಳದೆ ಆತನನ್ನು ಬಲವಂತವಾಗಿ ವಿದ್ಯಾವಿಹಾರ್ ರೈಲ್ವೇ ನಿಲ್ದಾಣದ ಹತ್ತಿರ ಕರೆದುಕೊಂಡು ಬಂದು ಅಲ್ಲಿ ನಿಂತಿದ್ದ ಕಾರನ್ನು ಹತ್ತುವಂತೆ ಬಲವಂತ ಮಾಡಿದ್ದಾರೆ.
ಆ ಬಳಿಕ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಮತ್ತು ಈ ಇಬ್ಬರು ಆರೋಪಿಗಳು ಯುವಕನಿಗೆ ಕಾರನಲ್ಲೇ ಲೈಂಗಿಕ ಕಿರುಕುಳ ನೀಡಿದ್ದಾರೆ ಮಾತ್ರವಲ್ಲದೇ ಯುವಕನ ಬಳಿಯಿದ್ದ 2000 ರೂಪಾಯಿಗಳನ್ನು ಕಿತ್ತುಕೊಂಡು ಆತನನ್ನು ರಸ್ತೆಬದಿಯಲ್ಲಿ ದೂಡಿಹಾಕಿ ಹೋಗಿರುವುದಾಗಿ ಸಂತ್ರಸ್ತ ಯುವಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.
ಸಂತ್ರಸ್ತ ಯುವಕನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ದೂರಿನನ್ವಯ ಪೊಲೀಸರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 377, 392 ಮತ್ತು 323ರಡಿಯಲಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಬಳಿಕ ಆರೋಪಿಗಳ ಸ್ಕೂಟರ್ ನೋಂದಣಿ ಸಂಖ್ಯೆಯ ಆಧಾರದಲ್ಲಿ ಹಾಗೂ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಆರೋಪಿಗಳ ಸುಳಿವು ಲಭ್ಯವಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೆಹುಲ್ ಪಾರ್ಮರ್ (21), ಆಸೀಫ್ ಆಲಿ ಅನ್ಸಾರಿ (23) ಮತ್ತು ಪಿಯೂಷ್ ಚೌಹಾಣ್ (22) ಎಂಬವರನ್ನು ಬಂಧಿಸಿದ್ದಾರೆ. ಬಂಧಿತ ನಾಲ್ಕನೇ ಆರೋಪಿ ಅಪ್ರಾಪ್ತ ವಯಸ್ಕನೆಂದು ತಿಳಿದುಬಂದಿದೆ. ಬಂಧಿತ ಮೂವರನ್ನು ಸೋಮವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದರೆ ಬಾಲಾಪರಾಧಿಯನ್ನು ಮಕ್ಕಳ ಪಾಲನಾ ಕೇಂದ್ರಕ್ಕೆ ಕಳುಹಿಸಲಾಗಿದೆ.
ಸಂತ್ರಸ್ತ ಯುವಕ ತಾನು ರೆಸ್ಟೋರೆಂಟ್ ಮುಂದೆ ನಿಂತಿರುವ ಸೆಲ್ಫೀ ಒಂದನ್ನು ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಾನೆ ಮತ್ತು ಅದರೊಂದಿಗೆ ಲೊಕೇಶನ್ ಸಹ ನಮೂದಿಸುತ್ತಾನೆ. ಇದರ ಆಧಾರದಲ್ಲಿ ಆರೋಪಿಗಳು ಸಂತ್ರಸ್ತ ಯುವಕನಿದ್ದ ಸ್ಥಳವನ್ನು ಪತ್ತೆಹಚ್ಚಿ ಆತನನ್ನು ಬಲವಂತವಾಗಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.